ನೀರು ಕೊಟ್ಟೇ ನಾನು ಪ್ರಾಣ ಬಿಡ್ತೇನೆ: ವೀರಪ್ಪ ಮೊಯ್ಲಿ

Public TV
3 Min Read

– 15 ವರ್ಷದ ಹುಡುಗಿ 85 ವರ್ಷದ ಮುದುಕಿಯಾಗಿ ಕಾಣ್ತಾಳೆ..!
– ಎತ್ತಿನಹೊಳೆ ನೀರು ಹರಿಯಲಿರುವ ದೃಶ್ಯ ನಾನು ಕಣ್ತುಂಬಿಕೊಳ್ಳಬೇಕಿದೆ..!

ಚಿಕ್ಕಬಳ್ಳಾಪುರ: ನಿಮಗೆ, ನಿಮ್ಮ ಭಾಗಕ್ಕೆ ನೀರು ತರುತ್ತೇವೆ ಎಂದು ಹಿಂದಿನ ಎಲ್ಲಾ ಸಂಸದರು ಹೇಳಿದರು. ಹಾಗೂ ಹಿಂದಿನ ದಿವಂಗತ ಸಂಸದ ಕೃಷ್ಣ ರಾಯರು ಸಹ ನೀರು ಕುಡಿಸುತ್ತೇನೆ ಎಂದು ಕೊನೆಗೆ ಪ್ರಾಣ ಬಿಟ್ಟರು. ಆದರೆ ಮೊದಲು ನಾನು ನಿಮಗೆ ನೀರು ಕೊಟ್ಟು ನಂತರ ಪ್ರಾಣ ಬಿಡುತ್ತೇನೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಆಶ್ವಾಸನೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದ ಗಾಂಧಿ ವೃತ್ತದಲ್ಲಿ ನಡೆದ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡಿ ಅವರು, ನನಗೆ ನೀರಿನ ಮಹತ್ವ ಗೊತ್ತಿದೆ ಎಂದು ಭಾವುಕರಾದರು. ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ನೀರಿಗೆ ತುಂಬಾ ಹಾಹಾಕಾರವಿದೆ. ಆ ಭಾಗದಲ್ಲಿ 15 ವರ್ಷದ ಹುಡುಗಿ 85 ವರ್ಷದ ಮುದುಕಿಯಾಗಿ ಕಾಣುತ್ತಾಳೆ. ಆ ಭಾಗದಿಂದ ಹೆಣ್ಣು ಮದುವೆ ಮಾಡಿಕೊಳ್ಳೋಕೆ ಭಯಪಡುತ್ತಾರೆ. ಕೆಲವರಿಗೆ ಹಲ್ಲಿಲ್ಲ, ಹಲವರು ಅಂಗಹೀನರು, ಇಡೀ ಗ್ರಾಮಗಳ ತುಂಬೆಲ್ಲಾ ಅಂಗವಿಕಲರಿದ್ದಾರೆ. ಅದನ್ನ ಕಂಡು ನಾನು ಸಂಸದನಾಗಿ ಹೇಗೆ ಉಳಿಯಬೇಕು? ಹಿಂದಿನ ಎಲ್ಲಾ ಸಂಸದರು ನೀರು ತರುತ್ತೇವೆ ಎಂದು ಹೇಳಿದ್ದರು. ನಾನು ಮೊದಲು ನೀರು ಕೊಟ್ಟೇ ನನ್ನ ಪ್ರಾಣ ಬಿಡುತ್ತೇನೆ ಎಂದು ಭಾವುಕರಾಗಿ ಮಾತನಾಡಿದರು.

ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಎತ್ತಿನಹೊಳೆ ಯೋಜನೆ ಮುಗಿಯುವ ಹಂತಕ್ಕೆ ತಲುಪಿದ್ದು ಎರಡು ವರ್ಷದಲ್ಲಿ ಈ ಭಾಗಕ್ಕೆ ನೀರು ಹರಿಯಲಿದೆ. ಆ ದೃಶ್ಯ ನಾನು ಕಣ್ತುಂಬಿಕೊಳ್ಳಬೇಕಿದೆ. ಹೀಗಾಗಿ ನನಗೆ ಆಶೀರ್ವಾದ ನೀಡಿ ಎಂದು ಮತಯಾಚನೆ ಮಾಡಿದರು. ಇದೇ ವೇಳೆ ಎಚ್ ಎನ್ ವ್ಯಾಲಿ-ಕೆ ಸಿ ವ್ಯಾಲಿ ಯೋಜನೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ತಡೆ ತಂದಿರೋ ಹೆಸರು ಹೇಳಲ್ಲ ಅಂತಲೇ ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ರೈತ ವಿರೋಧಿ ಎಂದು ಆಕ್ರೋಶ ಹೊರಹಾಕಿದರು.

ಎಚ್ ಎನ್ ವ್ಯಾಲಿ ಯೋಜನೆಯ ಗುತ್ತಿಗೆದಾರರ ಬಳಿ ಹಣ ವಸೂಲಿ ಮಾಡುವ ಉದ್ದೇಶದಿಂದ ಆಂಜನೇಯರೆಡ್ಡಿ ಸುಪ್ರೀಂ ಕೋರ್ಟ್ ಮೊರೆ ಹೋದರು. ಸುಪ್ರೀಂ ಕೋರ್ಟ್ ಗೆ ಹೋಗಲು ಹಣ ಕೊಟ್ಟಿದ್ದೇ ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡ ಎಂದು ಗಂಭೀರ ಆರೋಪ ಮಾಡಿದರು. ಇದಲ್ಲದೆ ಎತ್ತಿನಹೊಳೆ ಯೋಜನೆ ವಿರುದ್ಧ ಹಸಿರು ಪೀಠಕ್ಕೆ ಹೋಗಲು ಹಣ ಕೊಟ್ಟವರು ಸಹ ಬಿ ಎನ್ ಬಚ್ಚೇಗೌಡ ಅಂತ ಎಂದರು. ಹೀಗಾಗಿ ನೀರಾವರಿ ಯೋಜನೆಗಳನ್ನ ತಪ್ಪಿಸಲು ಹೋದವರಿಗೆ ಜನರ ಶಾಪ ತಟ್ಟುತ್ತೆ. ಭೂಮಿ ತಾಯಿಯ ಶಾಪ ತಟ್ಟುತ್ತೆ ಎಂದರು.

ಭೂಮಿ ತಾಯಿಯೂ ಕೂಡ ಬಾಯಾರಿ ನನಗೆ ನೀರು ಕೊಡಿ ಅಂತ ಬಾಯಿಬಿಡ್ತಿದ್ದಾಳೆ. ಇದರಿಂದ ನೀರಾವರಿ ಯೋಜನೆಗಳಿಗೆ ಅಡ್ಡಗಾಲು ಹಾಕುವವರಿಗೆ ಜನ್ಮ ಜನ್ಮಕ್ಕೆ ಶಾಪ ತಟ್ಟುತ್ತೆ ಅಂತ ಶಾಪ ಹಾಕಿದ್ರು. ಚಿಕ್ಕಬಳ್ಳಾಪುರ ಕ್ಷೇತ್ರದ ಜನ ಚಿನ್ನದ ಮನಸ್ಸಿನವರು. ಜಾತಿ ಗೀತಿ ನೋಡದೇ ನನ್ನನ್ನ ಎರಡು ಬಾರಿ ಗೆಲ್ಲಿಸಿದ ಜನ ಚಿನ್ನದ ಜನರು ನಿಮ್ಮ ಋಣ 7 ಜನ್ಮದಲ್ಲೂ ತೀರಿಸಲಾಗುವುದಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಬಿ.ಎನ್ ಬಚ್ಚೇಗೌಡರೇ ನೀವೇನು ಸತ್ಯ ಹರಿಶ್ಚಂದ್ರರಾ? ಹೋದ ಕಡೆಯಲ್ಲೆಲ್ಲಾ ವೀರಪ್ಪಮೊಯ್ಲಿ ಸುಳ್ಳುಗಾರ-ಮೋಸಗಾರ ಅಂತೀದ್ದರಲ್ಲಾ. ನೀವೇನು ಸತ್ಯ ಹರಿಶ್ಚಂದ್ರರಾ ಎಂದು ಖಾರವಾಗಿ ಪ್ರಶ್ನೆ ಮಾಡಿದರು. ಅಲ್ಲದೇ ವೀರಪ್ಪಮೊಯ್ಲಿ ಅವರು ತಮ್ಮ ಜೀವನವನ್ನೇ ರಾಜಕಾರಣಿಯಾಗಿ ಜನರ ಸೇವೆಗೆ ಮೀಸಲಿಟ್ಟಿದ್ದಾರೆ. ನೀವು ಇಟ್ಟಿದ್ದಾರಾ? ರಾಜಕಾರಣದಲ್ಲಿ ನೀವು ಮಾಡಿದ ಅನ್ಯಾಯ ಅಕ್ರಮ ದೌರ್ಜನ್ಯ ದಬ್ಬಾಳಿಕೆ ಸರ್ವಾಧಿಕಾರ ಯಾರಾದ್ರೂ ಮಾಡಿದ್ದೀರಾ? ಸರ್ಕಾರಿ ಗೋಮಾಳಗಳನ್ನ ಗುಳುಂ ಮಾಡಿದ್ದೀರಿ ಎಂದು ಬಚ್ಚೇಗೌಡರ ವಿರುದ್ಧ ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *