ಇಬ್ಬರು ಮಹಿಳಾಮಣಿಯರ ಕಾರಣಕ್ಕೆ ಚರ್ಚೆಯಾಗುತ್ತಿದೆ ಮಂಡ್ಯ ಲೋಕಸಭೆ ಉಪಚುನಾವಣೆ!

Public TV
2 Min Read

ಮಂಡ್ಯ: ಜಿಲ್ಲೆಯ ಲೋಕಸಭೆ ಉಪಚುನಾವಣೆ ದಿನಾಂಕ ಸದ್ಯದಲ್ಲೇ ಪ್ರಕಟವಾಗುವ ಸಾಧ್ಯತೆಯಿದ್ದು, ಮಂಡ್ಯ ರಾಜಕಾರಣ ಇಬ್ಬರು ಮಹಿಳೆಯರ ಕಾರಣಕ್ಕೆ ಕುತೂಹಲ ಮೂಡಿಸುತ್ತಿದೆ.

ಒಬ್ಬರು ಮಾಜಿ ಸಂಸದೆ ರಮ್ಯಾ, ಮತ್ತೊಬ್ಬರು ರಾಜಕೀಯದಲ್ಲಿ ಸಕ್ರಿಯರಾಗಲು ತಮ್ಮ ಐಆರ್ ಎಸ್ ಹುದ್ದೆಗೆ ರಾಜೀನಾಮೆ ನೀಡಿ ಬಂದಿರುವ ಲಕ್ಷ್ಮಿ ಅಶ್ವಿನ್ ಗೌಡ. ಇಬ್ಬರು ಮಹಿಳಾಮಣಿಯರಿಗೆ ಮಂಡ್ಯ ಲೋಕಸಭಾ ಉಪಚುನಾವಣೆ ವರವಾಗುತ್ತಾ? ಇಲ್ಲವೇ ಶಾಪವಾಗುತ್ತಾ? ಈ ಬಗ್ಗೆ ಜಿಲ್ಲೆಯ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಸಚಿವ ಪುಟ್ಟರಾಜು ಅವರ ರಾಜೀನಾಮೆಯಿಂದ ತೆರವಾಗಿರುವ ಮಂಡ್ಯ ಸಂಸದ ಸ್ಥಾನಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆಯಿದೆ. ಈ ಉಪಚುನಾವಣೆ ಕಾಂಗ್ರೆಸ್ ಮುಖಂಡೆ, ಮಾಜಿ ಸಂಸದೆ ರಮ್ಯಾ ಹಾಗೂ ಇತ್ತೀಚೆಗಷ್ಟೇ ಜೆಡಿಎಸ್ ಪಕ್ಷಕ್ಕೆ ಸೇರಿರುವ ಲಕ್ಷ್ಮಿ ಅಶ್ವಿನ್ ಗೌಡ ಅವರ ರಾಜಕೀಯ ಅಳಿವು ಉಳಿವಿನ ಪ್ರಶ್ನೆಯಾಗಿದೆ.

ರಮ್ಯಾ ಈ ಬಾರಿಯೂ ಮಂಡ್ಯದಿಂದಲೇ ಸ್ಪರ್ಧಿಸುವ ಆಸೆಯಿಟ್ಟುಕೊಂಡಿದ್ದಾರೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡು ಒಟ್ಟಾಗಿ ಚುನಾವಣೆ ಎದುರಿಸಲಿವೆ ಎಂಬ ಮಾತು ಕೇಳಿ ಬರುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ತನಗೆ ಬಿಟ್ಟು ಕೊಡಿ ಅಂತಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಹಾಗೇನಾದರು ಆದರೆ ಮಂಡ್ಯದಿಂದಲೇ ಸ್ಪರ್ಧಿಸಬೇಕು ಎಂದು ಆಶಾಭಾವನೆಯಿಂದ ಕಾಯುತ್ತಿರುವ ರಮ್ಯಾಗೆ ರಾಜಕೀಯವಾಗಿ ಹಿನ್ನಡೆಯಾಗೋದಂತೂ ಗ್ಯಾರಂಟಿ. ಹೀಗಾಗಿ ರಮ್ಯಾ ತಾಯಿ ರಂಜಿತಾ ಸೇರಿದಂತೆ ರಮ್ಯಾ ಅವರ ಬೆಂಬಲಿಗರು ಮಂಡ್ಯದಲ್ಲಿ ಮೈತ್ರಿಯೇ ಬೇಡ ಅಂತಿದ್ದಾರೆ.

ಮತ್ತೊಂದು ಕಡೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಆಶಾಭಾವನೆಯಿಂದ ಜಿಲ್ಲೆಯಾದ್ಯಂತ ಓಡಾಡುತ್ತಿದ್ದಾರೆ. ಮಂಡ್ಯದಲ್ಲಿ ರಮ್ಯಾಗೆ ಟಾಂಗ್ ಕೊಡಲು ಜೆಡಿಎಸ್ ವರಿಷ್ಠರೇ ಲಕ್ಷ್ಮಿ ಅಶ್ವಿನ್ ಗೌಡ ಅವರನ್ನು ರಾಜಕೀಯಕ್ಕೆ ಕರೆತಂದ್ರು ಎಂಬ ಮಾತು ಕೂಡ ಕೇಳಿ ಬಂದಿತ್ತು. ಆದರೆ ಇದೀಗ ಲಕ್ಷ್ಮಿ ಅಶ್ವಿನ್‍ಗೌಡ ಅವರಿಗೆ ಸ್ವಪಕ್ಷದಲ್ಲೇ ವಿರೋಧಿಗಳು ಹುಟ್ಟಿಕೊಂಡಿದ್ದಾರೆ.

ಲಕ್ಷ್ಮಿ ಅಶ್ವಿನ್‍ಗೌಡ ಅವರಿಗೆ ಟಿಕೆಟ್ ತಪ್ಪಿಸುವ ಸಲುವಾಗೇ ಮಾಜಿ ಪ್ರಧಾನಿ ದೇವೇಗೌಡರು, ಪ್ರಜ್ವಲ್ ರೇವಣ್ಣ ಅವರನ್ನು ಮಂಡ್ಯಕ್ಕೆ ಕರೆತರುವ ಪ್ರಯತ್ನ ಸದ್ದಿಲ್ಲದೆ ಸಾಗುತ್ತಿದೆ. ಮತ್ತೊಂದು ಕಡೆ ಸೋಲಿನ ಮೇಲೆ ಸೋಲು ಕಂಡು ನಿರಾಶರಾಗಿರುವ ಮಾಜಿ ಶಾಸಕ ಶಿವರಾಮೇಗೌಡ ಕೂಡ, ಜೆಡಿಎಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇಷ್ಟೆಲ್ಲ ಸವಾಲುಗಳ ನಡುವೆಯೂ ಲಕ್ಷ್ಮಿ ಅಶ್ವಿನ್‍ ಗೌಡ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹರಸಾಹಸ ಪಡುತ್ತಿದ್ದಾರೆ.

ಈ ಬಾರಿ ಮಂಡ್ಯ ಲೋಕಸಭೆ ಉಪಚುನಾವಣೆ ಇಬ್ಬರು ಮಹಿಳಾ ಮಣಿಯರಾದ ಮಾಜಿ ಸಂಸದೆ ರಮ್ಯಾ ಮತ್ತು ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಆದರೆ ಇವರಿಬ್ಬರಿಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುತ್ತಾ? ಅಥವಾ ಇಬ್ಬರು ಪ್ರತಿಸ್ಪರ್ಧಿಗಳಾಗಿ ಕಣಕ್ಕಿಳಿತಾರ? ಎಂಬುದನ್ನು ಕಾದು ನೋಡಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *