ಗುರುವನ್ನು ಹಾಡಿ ಹೊಗಳಿದ ಸಿದ್ದರಾಮಯ್ಯ

Public TV
2 Min Read

– ಬಿಜೆಪಿ ಪ್ರಣಾಳಿಕೆ ಓಲ್ಡ್ ವೈನ್ ಇನ್ ನ್ಯೂ ಬಾಟಲ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷ ಆಡಳಿತ ಮಾಡಿದರೂ ಜನ ನೆನಪಿಟ್ಟುಕೊಳ್ಳುವ ಒಂದೇ ಒಂದು ಕೆಲಸ ಮಾಡಲಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು 11 ತಿಂಗಳು ಮಾತ್ರ ಪ್ರಧಾನಿಯಾಗಿದ್ದರು. ಆಗ ಅವರು ಜನ ನೆನಪಿಸುವಂತಹ ಕೆಲಸ ಮಾಡಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಗುರುವನ್ನು ಹೊಗಳಿದ್ದಾರೆ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ, ಸಂಸದ ಡಿ.ವಿ.ಸದಾನಂದಗೌಡ ಅವರು ಬೆಂಗಳೂರಿಗೆ ನೀಡಿದ ಕೊಡುಗೆ ಏನು? ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ವೋಟ್ ಹಾಕಿ ಎಂದು ಹೇಳುತ್ತಿದ್ದಾರೆ. ಕ್ಷೇತ್ರದ ಜನತೆ ಮುಖ ತೋರಿಸಲು ಆಗದ ಸದಾನಂದಗೌಡ ಅವರು ಮೋದಿ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ: ಅನಾವಶ್ಯಕವಾಗಿ 40 ಸೈನಿಕರ ಸಾವಿಗೆ ಮೋದಿ ಕಾರಣರಾದ್ರು: ಕೃಷ್ಣಬೈರೇಗೌಡ

ಬಿಜೆಪಿ ಪ್ರಣಾಳಿಕೆ ಓಲ್ಡ್ ವೈನ್ ಇನ್ ನ್ಯೂ ಬಾಟಲ್. ಸಂಕಲ್ಪ ಪತ್ರದಲ್ಲಿ ತಿಳಿಸಿರುವ ಕಲಂ 370 ವಿಚಾರ ಹೊಸದೇನಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವೂ ಹೊಸ ವಿಚಾರವಲ್ಲ. ಬಿಜೆಪಿಯವರು ಹಳೆಯ ವಿಚಾರಗಳನ್ನೇ ಮತ್ತೆ ಪ್ರಸ್ತಾಪ ಮಾಡಿದ್ದಾರೆ. ಅದೇನೋ ಸಂಕಲ್ಪ ಪತ್ರವಂತೆ ಸಂಕಲ್ಪ ಪತ್ರ. 2014ರಲ್ಲಿ ನೀಡಿದ ಭರವಸೆಗಳಲ್ಲಿ ಯಾವುದನ್ನು ಈಡೇರಿಸಿದ್ದಾರೆ ಅಂತ ಬಂದು ಹೇಳಲಿ ನೋಡೋಣ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮಾತನಾಡಿ, 5 ವರ್ಷಗಳಲ್ಲಿ ಪ್ರಧಾನಿ ಮೋದಿ ಏನು ಮಾಡಿದ್ದಾರೆ ಎನ್ನುವುದನ್ನು ವಿಮರ್ಶೆ ಮಾಡಬೇಕು. ದೇಶದ ಪ್ರಜೆಗಳು 2014ರಲ್ಲಿ ನೀಡಿದ ಬೆಂಬಲವನ್ನು ಈ ಬಾರಿ ನೀಡುವುದಿಲ್ಲ ಎನ್ನುವುದು ಬಿಜೆಪಿಯವರಿಗೆ ಗೊತ್ತಾಗಿದೆ. ಅದಕ್ಕಾಗಿ ಪುಲ್ವಾಮಾ ದಾಳಿಗೆ ಮತ್ತೊಂದು ಸ್ವರೂಪ ನೀಡಿದರು. ಬೇರೆ ದೇಶದವರು ನಮ್ಮ ಮೇಲೆ ದಾಳಿಗೆ ತಿರುಗೇಟು ನೀಡಲು ಸಿದ್ಧವಿದ್ದೇವೆ. ಎಲ್ಲವೂ ನಮ್ಮ ಕಾಲದಲ್ಲೇ ಆಗಿದೆ ಎನ್ನುವ ರೀತಿಯಲ್ಲಿ ಬಿಂಬಿಸಿದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಎಲ್ಲವನ್ನೂ ನಾನೇ ಮಾಡಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಯಂ ಪ್ರತಿಷ್ಠೆ ತೋರಿಸುತ್ತಿದ್ದಾರೆ. ಎಲ್ಲವೂ ನಾನೇ ನಾನೇ ಎನ್ನುವ ದುರಾಭ್ಯಾಸವನ್ನು ಅವರು ಇಟ್ಟುಕೊಂಡಿದ್ದಾರೆ. ಜನರು ಅತಂತ್ರ ಫಲಿತಾಂಶ ನೀಡುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *