ಎಂಎಸ್‍ಕೆ, ಬಿಎಸ್‍ವೈ ಚರ್ಚೆ – ನಮಗೇ ಮತ್ತಷ್ಟು ಶಕ್ತಿ ಬರುತ್ತೆ ಅಂದ್ರು ಬಿಎಸ್‍ವೈ

Public TV
2 Min Read

ಬೆಂಗಳೂರು: ಲೋಕಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆಯ ಕಸರತ್ತು ನಡೆಸುವ ಹಿನ್ನೆಲೆಯಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರು ಮಾಜಿ ಸಿಎಂ ಎಸ್‍ಎಂ ಕೃಷ್ಣರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.

ನಗರದ ಸದಾಶಿವನಗರ ಎಸ್‍ಎಂ ಕೃಷ್ಣ ಅವರ ನಿವಾಸದಲ್ಲಿ ಬಿಎಸ್‍ವೈ ಭೇಟಿ ಮಾಡಿ ಮಹತ್ವ ಮಾತುಕತೆ ನಡೆಸಿದರು. ಭೇಟಿ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಎಸ್‍ವೈ ಅವರು, ಚುನಾವಣೆಯಲ್ಲಿ ಪಕ್ಷದ ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲು ಕೃಷ್ಣ ಅವರ ಮನೆಗೆ ಬಂದಿದೆ. ಈ ವೇಳೆ ಪ್ರಸಕ್ತ ರಾಜಕೀಯ ಪರಿಸ್ಥಿತಿ ಮತ್ತು ಚುನಾವಣಾ ಪ್ರಚಾರ ಬಗ್ಗೆ ಮಾತನಾಡಿದ್ದೇನೆ. ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು, ಕೋಲಾರ ಸೇರಿ ಹಲವೆಡೆ ಪ್ರವಾಸ ಮಾಡಲು ಅವರು ಒಪ್ಪಿಗೆ ಸೂಚಿಸಿದ್ದಾರೆ. ಕೃಷ್ಣ ಅವರು ಭಾಗಹಿಸಿದ್ದರೆ ನಮಗೆ ಇನ್ನಷ್ಟು ಶಕ್ತಿ ಬರುತ್ತದೆ. ಮಂಡ್ಯ ಬಗ್ಗೆಯೂ ಮಾತಾಡಿದ್ದು ಸಲಹೆ ಕೊಟ್ಟಿದ್ದಾರೆ. ಸುಮಲತಾ ಅವರು ಏನು ನಿರ್ಧಾರ ಮಾಡುತ್ತಾರೆ ಎಂಬುವುದನ್ನು ಕಾದು ನೋಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್‍ವೈ, ಕುಮಾರಸ್ವಾಮಿ ಅವರು ಅಧಿಕಾರದ ಮದದಿಂದ ಹೀಗೆ ಮಾತನಾಡುತ್ತಿದ್ದಾರೆ. ಇಂತಹ ಅಧಿಕಾರವನ್ನ ಎಸ್‍ಎಂ ಕೃಷ್ಣ ಬಹಳ ನೋಡಿ ಬಿಟ್ಟಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ದೊಡ್ಡವರ ಬಗ್ಗೆ ಗೌರವ ಇಟ್ಟು ಮಾತನಾಡಲಿ ಎಂದರು. ಅಲ್ಲದೇ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ರಾಹುಲ್ ಅವರ ಸ್ಪರ್ಧೆ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ರಾಜ್ಯದಲ್ಲಿ ಪ್ರಧಾನಿ ಹಾಗೂ ಪಕ್ಷದ ಪರ ಅಲೆ ಇದ್ದು, 22 ಸೀಟು ಖಂಡಿತವಾಗಿ ಗೆಲ್ಲುತ್ತೇವೆ ಎಂದು ಭರವಸೆ ನೀಡಿದರು.

ಆ ಬಳಿಕ ಮಾತನಾಡಿದ ಕೃಷ್ಣ ಅವರು, ಬಿಜೆಪಿಯ ಸಾಮಾನ್ಯ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ವಂಶಪಾರಂಪರ್ಯ ಆಡಳಿತದ ಬಗ್ಗೆ ನಾನು ಏನು ಹೇಳಬೇಕೋ ಅದನ್ನು ಹೇಳಿದ್ದು, ಕುಮಾರಸ್ವಾಮಿ ಅವರೂ ಏನ್ ಹೇಳಬೇಕೋ ಅದನ್ನ ಹೇಳಿದ್ದಾರೆ. ಅಂತಿಮವಾಗಿ ಜನರು ನಿರ್ಧಾರ ಮಾಡುತ್ತಾರೆ. ಆದರೆ ರಾಜ್ಯಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಸಂದರ್ಭದಲ್ಲಿ ನಾನು ದೇವೇಗೌಡರ ಸಹಕಾರ ಪಡೆದಿದ್ದು ನಿಜ. ಈ ವಿಚಾರವನ್ನು ಹಲವು ಸಂದರ್ಭದಲ್ಲಿ ಸಾರ್ವಜನಿಕರ ಸಮಾರಂಭದ ವೇದಿಕೆಗಳಲ್ಲಿ ಬಹಿರಂಗವಾಗಿಯೇ ಹೇಳಿದ್ದೇನೆ. ಅದರಲ್ಲಿ ಯಾವುದೇ ರಹಸ್ಯ ಇಲ್ಲ. ಹಿಂದಿನ ಸಂಗತಿಗಳನ್ನು ಅಳಿಸಿ ಹಾಕುಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *