Loksabha Election 2024: ಕರಾವಳಿ ಮಲೆನಾಡಿನ ಜಂಟಿ ಕ್ಷೇತ್ರ ದಲ್ಲಿ ಅಭ್ಯರ್ಥಿ ಯಾರು?

Public TV
2 Min Read

– ನಾಲ್ಕು ಬಿಜೆಪಿ, ನಾಲ್ಕು ಕಾಂಗ್ರೆಸ್ ಗೆದ್ದ ಕ್ಷೇತ್ರ ಇದು

ಉಡುಪಿ: ಲೋಕಸಭಾ ಚುನಾವಣೆಗೆ (Loksabha Election) ಇನ್ನು ಮೂರು ತಿಂಗಳು ಬಾಕಿ ಇರುವಾಗಲೇ ಚಟುವಟಿಕೆಗಳು ಒಳಗಿಂದೊಳಗೆ ಶುರುವಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದ್ದಾರೆ. ಹಿಂದುತ್ವ.. ಮೋದಿ, ರಾಮಮಂದಿರದ ಫೋರ್ಸ್ ನಲ್ಲಿ ಮುನ್ನುಗ್ಗುತ್ತಿರುವ ಬಿಜೆಪಿಯನ್ನು ಕಟ್ಟಿ ಹಾಕಲು ಕಾಂಗ್ರೆಸ್ ಆಪರೇಷನ್ ಅಸ್ತ್ರಕ್ಕೆ ಕೈ ಹಾಕುವ ಲಕ್ಷಣಗಳು ಕಾಣುತ್ತಿದೆ.

ಲೋಕಸಭಾ ಚುನಾವಣೆಗೆ ಬಂದರೆ ಉಡುಪಿ ಮತ್ತು ಚಿಕ್ಕಮಗಳೂರು ಜಂಟಿ ಜಿಲ್ಲೆ. ನಾಲ್ಕು ಕಡೆ ಬಿಜೆಪಿ, ಕಾಂಗ್ರೆಸ್ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿದೆ. ಕಳೆದ ಹತ್ತು ವರ್ಷದಿಂದ ಲೋಕಸಭಾ ಸದಸ್ಯೆ ಆಗಿರುವ ಶೋಭಾ ಕರಂದ್ಲಾಜೆ (Shobha Karandlaje) ಈ ಬಾರಿ ಮತ್ತೆ ಟಿಕೆಟ್ ಗಿಟ್ಟಿಸುವ ವಿಶ್ವಾಸದಲ್ಲಿದ್ದಾರೆ. ಕಳೆದ ಒಂದೆರಡು ವರ್ಷದಿಂದ ಅಭ್ಯರ್ಥಿತನ ಹೈಕಮಾಂಡ್ ನಿರ್ಧಾರ ಎನ್ನುತ್ತಿದ್ದ ಶೋಭಾ ಕರಂದ್ಲಾಜೆ, ನಾನು ಉಡುಪಿ ಚಿಕ್ಕಮಂಗಳೂರಿನಿಂದಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಜನ ನನಗೆ ಎರಡು ಬಾರಿ ಆಶೀರ್ವಾದ ಮಾಡಿದ್ದಾರೆ. ಈ ಬಾರಿ ಇಲ್ಲೇ ನಾನು ಸ್ಪರ್ಧಿಸುವವೆ. ಸಚಿವೆಯಾದ ನಂತರ ದೇಶವ್ಯಾಪಿ ಓಡಾಟ ಮಾಡಿ ಕೆಲಸ ಮಾಡಿದ್ದೇನೆ. ಪಕ್ಷ, ಹೈಕಮಾಂಡ್ ಅವಕಾಶ ಕೊಡಬಹುದು ಎಂಬ ನಿರೀಕ್ಷೆ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಡುಪಿ ಚಿಕ್ಕಮಗಳೂರನ್ನು ನಾವು ಸುಲಭವಾಗಿ ಗೆಲ್ಲುತ್ತೇವೆ ಎಂಬ ವಿಶ್ವಾಸ ಬಿಜೆಪಿಗೆ ಇರುವುದರಿಂದ, ಉಮೇದುದಾರರ ಸಂಖ್ಯೆ ಕೂಡ ಜಾಸ್ತಿ ಇದೆ. ಬಿಜೆಪಿ ಹಿರಿಯ ನಾಯಕ ಸಿಟಿ ರವಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಪ್ರಮೋದ್ ಮಧ್ವರಾಜ್, ಜಯಪ್ರಕಾಶ್ ಹೆಗ್ಡೆ, ಉದಯಕುಮಾರ್ ಶೆಟ್ಟಿ ಈಗಾಗಲೇ ಅಪೇಕ್ಷಿತರಾಗಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದರೆ ಜಯಪ್ರಕಾಶ್ ಹೆಗ್ಡೆ ನಿಲುವೇನು?: ಮಾಜಿ ಸಚಿವ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ಹಿಂದಿನ ಸರ್ಕಾರದ ಕಾಲದಲ್ಲೇ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದರೂ ಅವರನ್ನು ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರಿಸಿದೆ. ಜೆಪಿ ಅವರನ್ನು ಸೆಳೆಯುವುದು ಕಾಂಗ್ರೆಸ್‌ನ ಪ್ಲಾನ್ ಎಂಬುದು ಇದೀಗ ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ, ಹಿಂದುತ್ವ ಮೋದಿ ಅಲೆ ರಾಮಮಂದಿರದ ಅಬ್ಬರ ವಿರುದ್ಧ ಜಯಪ್ರಕಾಶ್ ಹೆಗಡೆ ಯುದ್ಧಕ್ಕೆ ಇಳಿಯುತ್ತಾರಾ ಎಂಬುದು ಸದ್ಯ ಚರ್ಚೆಯಲ್ಲಿರುವ ವಿಚಾರವಾಗಿದೆ.

ಒಟ್ಟಿನಲ್ಲಿ ಚುನಾವಣೆಗೆ ಮೂರು ತಿಂಗಳು ಬಾಕಿ ಇದ್ದರೂ ಯುದ್ಧಕ್ಕೆ ಎರಡು ಪಕ್ಷಗಳು ತಾಲೀಮು ಶುರು ಮಾಡಿದೆ. ನಾಲ್ವರು ಬಿಜೆಪಿ ನಾಲ್ವರು ಕಾಂಗ್ರೆಸ್ ಶಾಸಕರಿಗೆ ಈ ಚುನಾವಣೆ ಪ್ರತಿಷ್ಠೆಯಾಗಲಿದೆ. ಗ್ಯಾರಂಟಿಯ ಉಪಯೋಗ ಕಾಂಗ್ರೆಸ್ಸಿಗೆ ಸಿಗುತ್ತಾ, ಹಿಂದುತ್ವದ ಅಲೆಯಲ್ಲಿ ಬಿಜೆಪಿ ಗುರಿ ಮುಟ್ಟುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Share This Article