ಮೋದಿಗೆ ಜನರ ಸಂಕಷ್ಟದ ಅರಿವಿಲ್ಲ: ಪ್ರಿಯಾಂಕಾ ಗಾಂಧಿ

Public TV
3 Min Read

– ಸುಪ್ರೀಂ ಹೇಳಿದ ಮೇಲೆ ಮೋದಿ ಚಂದಾ ವಸೂಲಿ ಬಯಲಾಗಿದೆ

ಚಿತ್ರದುರ್ಗ: ಪ್ರಧಾನಿ ಮೋದಿಗೆ (Narendra Modi) ಜನರ ಸಂಕಷ್ಟಗಳ ಬಗ್ಗೆ ಅರಿವಿಲ್ಲ. ದೇಶದ ಪ್ರಧಾನಿ ಜನರ ಮಧ್ಯೆ ಬಂದು ಸಂಕಷ್ಟ ಆಲಿಸುವ ಕಾಲವೊಂದಿತ್ತು. ಅಂತಹ ಪಿಎಂಗಳನ್ನು ದೇಶ ಕಂಡಿದೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಕಾಂಗ್ರೆಸ್ (Congress) ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೆ ಓರ್ವ ರೈತ ದೇಶದ ಪ್ರಧಾನಿ ಗಮನ ಸೆಳೆಯಬಹುದಿತ್ತು. ಆಗ ಆ ಪ್ರಧಾನಿ ರೈತನ ಕೆಲಸ ಮಾಡಿ ಕೊಡುವ ಭರವಸೆ ನೀಡುತ್ತಿದ್ದರು. ನೈತಿಕತೆ ಇರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿದೆ. ದೇಶದ ಉನ್ನತ ಸ್ಥಾನದಲ್ಲಿರುವವರು ನಾಟಕ ಆಡ್ತಿದ್ದಾರೆ ಎಂದು ಅವರು ಪ್ರಧಾನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮೋದಿ ಸ್ನೇಹಿತರಾದ ಇಬ್ಬರು ಬಂಡವಾಳಶಾಹಿಗಳ ಆಸ್ತಿ ದುಪ್ಪಟ್ಟಾಗಿದೆ. ಇದನ್ನೇ ದೇಶ ಮುಂದುವರೆದಿದೆ, ಜಗತ್ತಿನಲ್ಲೇ ಉನ್ನತಿಗೇರಿದೆ ಎಂದು ಬಿಜೆಪಿ ಹೇಳುತ್ತಿದೆ. ಕೇಂದ್ರ ಸರ್ಕಾರದಿಂದ ಯಾರಿಗಾದರು ಏನಾದರು ಸಿಕ್ಕಿದಿಯೇ? ಇವರ ಅವಧಿಯಲ್ಲಿ ಏಮ್ಸ್, ಐಎಟಿಗಳ ನಿರ್ಮಾಣ ಆಗಿದಿಯೇ? ಏನಾದರು ಅಭಿವೃದ್ಧಿ ಮಾಡಿ ಮತ ಕೇಳಿ, ಧರ್ಮದ ಆಧಾರದ ಮೇಲೆ ಮತ ಕೇಳುತ್ತಿದ್ದೀರಿ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಹಳ ದೂರದಿಂದ ನನ್ನ ಮಾತುಗಳನ್ನ ಕೇಳಲು ಬಂದಿದ್ದೀರಿ, ನನಗೆ ಇದು ಹೆಮ್ಮೆಯ ವಿಷಯ, ನನ್ನ ಅಜ್ಜಿ ಇಂದಿರಾಗಾಂಧಿ ಇದೇ ವೇದಿಕೆ ಮೇಲೆ ನಿಂತು ಮಾತನಾಡಿದ್ದರು. ನೀವೆಲ್ಲ ಕಷ್ಟ ಜೀವಿಗಳು, ಮಕ್ಕಳನ್ನು ದೊಡ್ಡವರನ್ನಾಗಿಸಿ, ಉತ್ತಮ ಭವಿಷ್ಯ ನಿರ್ಮಾಣ ಮಾಡುವವರು. ನಿಮ್ಮೆಲ್ಲರ ಕಷ್ಟ ಅರ್ಥವಾಗಲಿದೆ. ದೇಶವನ್ನು ಬಲಪಡಿಸುವ ಕೆಲಸ ಸಹ ನಿಮ್ಮದು ಎಂದಿದ್ದಾರೆ.

ಹೊಲದಲ್ಲಿ ಕೆಲಸ ಮಾಡಿ, ಅನ್ನ ನೀಡುವ ಅನ್ನದಾತರು ನೀವು, ಎಲ್ಲರ ಜೀವನ ಸಂಘರ್ಷಮಯವಾದದ್ದು. ಈ ದೇಶದ ಉಜ್ವಲ ಭವಿಷ್ಯಕ್ಕೆ ಎಲ್ಲರ ಕೊಡುಗೆ ಮುಖ್ಯ ಇಂದು ಎಲ್ಲರು ಕಷ್ಟಪಟ್ಟು ದೇಶಕಟ್ಟುವ ಬಗ್ಗೆ ನಾನು ಮಾತನಾಡುತ್ತೇನೆ. ಈ ದೇಶದ ಭವಿಷ್ಯದ ಬಗ್ಗೆ ನಮಗೆಲ್ಲ ಚಿಂತೆ ಇದೆ. ದೇಶದಲ್ಲಿ ಬೆಲೆ ಏರಿಕೆಯಿಂದ ಜನರಿಗೆ ತೀವ್ರ ಸಮಸ್ಯೆ ಎದುರಾಗಿದೆ. ದೇಶದ ವೈಭೋಗದ ಬಗ್ಗೆ ಮಾತನಾಡುವ ಮಾತು ಮಾಧ್ಯಮಗಳಲ್ಲಿ ಬರುತ್ತಿದೆ. ನಿರುದ್ಯೋಗ ವ್ಯಾಪಕವಾಗಿದೆ. 70 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ 30 ಕೋಟಿ ಉದ್ಯೋಗ ಖಾಲಿ ಇದೆ. ಪ್ರಧಾನಿ ನೀಡಿದ ರೈತರ ಆದಾಯ ದುಪ್ಪಟ್ಟು ಮಾಡುವ ಭರವಸೆ ಈಡೇರಿಲ್ಲ. ಬೆಲೆ ಏರಿಕೆಯಿಂದ ಜೀವನ ದುಸ್ತರವಾಗಿದೆ. ಹಬ್ಬ ಹರಿದಿನಗಳಲ್ಲಿ ಸಂಭ್ರಮಿಸಲು ಸಂಕಷ್ಟ ಎದುರಿಸುವಂತಾಗಿದೆ. ಪೆಟ್ರೋಲ್, ಚಿನ್ನ ಸೇರಿದಂತೆ ಎಲ್ಲಾ ಬೆಲೆ ಗಗನಕ್ಕೇರಿದೆ. ಜನರ ಸಮಸ್ಯೆ ಮಿತಿಮೀರಿದೆ. ರೈತರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಜಿಎಸ್‍ಟಿ ಬರೆ ಎಳೆದಿದೆ. ದೇಶದ ಎಲ್ಲಾ ಆಸ್ತಿಗಳು ಬಂಡವಾಳ ಶಾಹಿಗಳ ಪಾಲಾಗುತ್ತಿದೆ. ರೈತರ ಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಆಗುತ್ತಿಲ್ಲ ಎಂದು ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಯಾರ್ಯಾರ ಬಳಿ ಚಂದಾ ವಸೂಲಿ ಮಾಡಿದ್ದಾರೆ ಎಂದು ಸುಪ್ರಿಂ ಕೋರ್ಟ್ ಹೇಳಿದ ಬಳಿಕ ಗೊತ್ತಾಗಿದೆ. ದಾಳಿಯಾದ ಕಂಪನಿಗಳು ಬಿಜೆಪಿಗೆ ಚಂದಾ ನೀಡಿವೆ. ಭ್ರಷ್ಟ ಕಂಪನಿಗಳು ಬಿಜೆಪಿಗೆ ಚಂದಾ ನೀಡಿವೆ. ಈ ಪಟ್ಟಿ ಹೊರಬಂದ ಬಳಿಕ ಬಿಜೆಪಿಯ ಬಣ್ಣ ಬಯಲಾಗಿದೆ. ಇನ್ನೂ ನೋಟ್ ಬ್ಯಾನ್ ಮಾಡಿ ಎಲ್ಲಾ ಕಪ್ಪು ಹಣ ತುರುವುದಾಗಿ ಹೇಳಿದ್ದರು. ಆಗ ಜನ ಎಷ್ಟು ಕಷ್ಟ ಪಟ್ಟರು, ಆಗ ಹೇಳಿದಂತೆ ಕಪ್ಪು ಹಣ ತರಲಿಲ್ಲ. ಸರ್ಕಾರದ ಭ್ರಷ್ಟಾಚಾರ ಮುಚ್ಚಿಡಲು ವಿಪಕ್ಷದ ಎಲ್ಲಾ ನಾಯಕರನ್ನು ಭ್ರಷ್ಟರಂತೆ ಮೋದಿ ಸರ್ಕಾರ ಕಾಣುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಅಂದಿನ ರಾಜಕಾರಣಿಗಳು ಸತ್ಯದ ಮೇಲೆ ನಡೆಯುವ ನಂಬಿಕೆಯಿತ್ತು. ಈಗ ಅಧಿಕಾರದ ದರ್ಪ, ವೈಭೋಗದ ಜೀವನ ಸಾಗಿಸ್ತಿದ್ದಾರೆ. ಸೇವಾ ಭಾವನೆ ಮರೆತು ಅಹಂನಿಂದ ನಡೆಯುತ್ತಿದ್ದಾರೆ. ಹಿಂದು ಪರಂಪರೆ, ರಾಜಪರಂಪರೆಯಲ್ಲಿ ರಾಜಸತ್ಯ ಹಾಗು ಸೇವಾ ಭಾವದಲ್ಲಿ ಸಾಗಬೇಕೆಂಬ ನಂಬಿಕೆ ಇದೆ. ಶ್ರೀರಾಮ ಸೇವಾ ಭಾವದಿಂದ ಸತ್ಯದ ದಾರಿಯಲ್ಲಿ ಸಾಗಿದ್ದರು. ಮೋದಿ ಸರ್ಕಾರ ಹತ್ತು ವರ್ಷದಲ್ಲಿ ಸುಳ್ಳಿನ ಸರಮಾಲೆ ಹಣೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ತಪ್ಪು ದಾರಿಯಲ್ಲಿ ಅಧಿಕಾರ ಹಿಡಿಯೋದು ಬಿಜೆಪಿ ಕೆಲಸವಾಗಿದೆ. ಅದನ್ನು ಮೋದಿ ಮಾಸ್ಟರ್ ಸ್ಟ್ರೋಕ್ ಎಂದು ಮಾದ್ಯಮ ತೋರಿಸುತ್ತಿವೆ. ಅಸಂವಿಧಾನಾತ್ಮಕವಾಗಿ ಸರ್ಕಾರ ಬೀಳಿಸಿದ್ದಾರೆಂದು ಯಾರು ಪ್ರಶ್ನಿಸ್ತಿಲ್ಲ. ನೂರಾರು ಕೋಟಿ ಹಣ ಕೊಟ್ಟು ಶಾಸಕರನ್ನ ಖರೀಸಿದಿ ಸರ್ಕಾರ ಬೀಳಿಸೋದನ್ನು ಮೋದಿ ಸ್ಟ್ರೋಕ್ ಅಂತಾರೆ. ಧರ್ಮ, ಜಾತಿ ಎಂದು ಹೇಳಿಕೊಂಡು ರಾಜಕೀಯ ಬೇಳೆ ಬೇಯಿಸ್ತಿದ್ದಾರೆ. ಜಗತ್ತಿಗೆ ಮೋದಿ ಪ್ರಸಿದ್ಧ ಎಂದು ಹೊಗಳ್ತಾರೆ. ಅಹಂಕಾರದಿಂದ ಮೋದಿ ವೈಭೋಗ ಪ್ರದರ್ಶನ, ಮೋದಿ ಮನಸು ಮಾಡಿದ್ರೆ ಚಿಟಿಕೆ ಹೊಡೆಯೋದರಲ್ಲಿ ಯುದ್ಧ ನಿಲ್ಲಿಸುವ ಶಕ್ತಿ ಎಂದು ಪ್ರಚಾರ ನೀಡುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ.

Share This Article