ಈ ಬಾರಿ ಮೋದಿ ಗರಿಷ್ಠ 214-240 ಸ್ಥಾನ ಗೆಲ್ಲಬಹುದು: ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ

Public TV
2 Min Read

ನವದೆಹಲಿ: ಅಬ್ ಕಿ ಬಾರ್, 400 ಪಾರ್‌ ಘೋಷಣೆಯ ಹೊರತಾಗಿಯೂ ಈ ಬಾರಿ ಪ್ರಧಾನಿ ನರೇಂದ್ರ ಮೋದಿ (Narendra Modi) ಗರಿಷ್ಠ 214 ರಿಂದ 240 ಲೋಕಸಭಾ ಸ್ಥಾನಗಳನ್ನು ಗೆಲ್ಲಬಹುದು ಎಂದು ತೆಲಂಗಾಣ ಮುಖ್ಯಮಂತ್ರಿ (Telangana CM) ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಎ. ರೇವಂತ್ ರೆಡ್ಡಿ (Revanth Reddy) ಅವರು ಭವಿಷ್ಯ ನುಡಿದಿದ್ದಾರೆ.

ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದಕ್ಷಿಣ ಭಾರತದಲ್ಲಿ 129 ಲೋಕಸಭಾ (Lok Sabha) ಸ್ಥಾನಗಳಿವೆ. ಕರ್ನಾಟಕದಲ್ಲಿ ಅವರು 10 ರಿಂದ 12 ಸ್ಥಾನಗಳನ್ನು ಗೆಲ್ಲಬಹುದು. ಕಳೆದ ಚುನಾವಣೆಯಲ್ಲಿ 4 ಸ್ಥಾನ ಗೆದ್ದಿದ್ದರೆ ಈ ಬಾರಿ ತೆಲಂಗಾಣದಲ್ಲಿ ಕೇವಲ 2 ಸ್ಥಾನ ಮಾತ್ರ ಗೆಲ್ಲಬಹುದು ಎಂದು ಹೇಳಿದರು. ಇದನ್ನೂ ಓದಿ: ಭಾನುವಾರ ಮೈಸೂರಿನಲ್ಲಿ ರ‍್ಯಾಲಿ, ಮಂಗಳೂರಿನಲ್ಲಿ ರೋಡ್‌ ಶೋ – ಎಷ್ಟು ಗಂಟೆಗೆ ಎಲ್ಲಿ ಮೋದಿ ಕಾರ್ಯಕ್ರಮ?

2019ರ ಚುನಾವಣೆಯಲ್ಲಿ ಬಿಜೆಪಿ ಗುಜರಾತ್, ರಾಜಸ್ಥಾನ, ಹರಿಯಾಣ, ದೆಹಲಿಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ 303 ಸ್ಥಾನಗಳನ್ನು ಗೆದ್ದಿತ್ತು. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮೈತ್ರಿ ಉತ್ತಮ ಸಾಧನೆ ಮಾಡಿತ್ತು. ಈ ಬಾರಿಯೂ ಶೇ.100ರಷ್ಟು ಸಾಧನೆ ಮಾಡಿದರೆ ಅವರು 300 ಸ್ಥಾನ ಗೆಲ್ಲಬಹುದು. ಉಳಿದ 100 ಸ್ಥಾನಗಳನ್ನು ಅವರು ಪಾಕಿಸ್ತಾನದಲ್ಲಿ ಮಾತ್ರ ಗೆಲ್ಲಬಹುದು, ಹಿಂದೂಸ್ತಾನದಲ್ಲಿ ಅಲ್ಲ ಎಂದರು.

400 ಪಾರ್ ಹೇಳುವಾಗ ಬಿಜೆಪಿಯವರಿಗೆ ಖುಷಿಯಾಗುತ್ತದೆ. ಈ ಹಿಂದೆ ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಅವರು 100 ವಿಧಾನಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದರು. ಆದರೆ ಕಳೆದ ಚುನಾವಣೆಯಲ್ಲಿ 39 ಸ್ಥಾನ ಮಾತ್ರ ಗೆದ್ದಿದ್ದರು ಎಂದು ಹೇಳಿದರು.  ಇದನ್ನೂ ಓದಿ: ಚುನಾವಣಾ ಬಾಂಡ್ ಖರೀದಿಯಲ್ಲಿ ಅತಿ ಹೆಚ್ಚು ದೇಣಿಗೆ ನೀಡಿದ ಮೇಘಾ ಎಂಜಿನಿಯರಿಂಗ್‍ಗೆ ಸಿಬಿಐ ಶಾಕ್

ರಾಹುಲ್ ಗಾಂಧಿ (Rahul Gandhi) ಅವರು ಅದಾನಿಯನ್ನು(Adani) ಪಿಕ್‌ಪಾಕೆಟ್ ಎಂದು ಬಣ್ಣಿಸುವ ಸಮಯದಲ್ಲಿ ನೀವು 12,400 ಕೋಟಿ ರೂ. ಯೋಜನೆ ಯಾಕೆ ನೀಡಿದ್ದೀರಿ ಎಂದು ಕೇಳಿದ್ದಕ್ಕೆ ನಾನು ನಾನು ನಮ್ಮ ಯೋಜನೆಗಳನ್ನು ಅದಾನಿಗೆ ನೀಡಲಿಲ್ಲ. ಮೋದಿ ಅವರು ಬಂದರು, ವಿಮಾನ ನಿಲ್ದಾಣಗಳನ್ನು ಅದಾನಿಗೆ ನೀಡಿದ್ದಾರೆ. ಆದರೆ ನಾನು ಅದಾನಿ ಜೇಬಿನಿಂದ ಹಣವನ್ನು ಪಡೆದು ರಾಜ್ಯದಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ನಮ್ಮ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಯಾರು ಸಹಕಾರ ನೀಡುತ್ತಾರೋ ಅವರಿಗೆ ನಾನು ಸಮಾನವಾಗಿ ಅವಕಾಶ ನೀಡುತ್ತೇನೆ. ಅದಾನಿ, ಟಾಟಾ, ಬಿರ್ಲಾ ಅಂಬಾನಿ ಅಥವಾ ಯಾರೇ ಆಗಿರಲಿ ಎಲ್ಲರನ್ನು ಸಮಾನವಾಗಿ ನೋಡುತ್ತೇನೆ ಎಂದು ಹೇಳಿದರು.

 

Share This Article