ಕೇಜ್ರಿವಾಲ್‌ಗೆ ʼವಿಶೇಷ ಸೌಲಭ್ಯʼ ನೀಡಲಾಗಿದೆ ಅಂತ ಜನ ಮಾತನಾಡ್ತಿದ್ದಾರೆ: ಜಾಮೀನು ಬಗ್ಗೆ ಅಮಿತ್‌ ಶಾ ಮಾತು

Public TV
1 Min Read

ನವದೆಹಲಿ: ದೆಹಲಿ ಮದ್ಯ ಹಗರಣ (Delhi Liquor Scam) ಪ್ರಕರಣದಲ್ಲಿ ಸಿಎಂ ಕೇಜ್ರಿವಾಲ್‌ಗೆ (Arvind Kejriwal) ಸುಪ್ರೀಂ ಕೋರ್ಟ್‌ (Supreme Court) ಮಧ್ಯಂತರ ಜಾಮೀನು (Interim Bail) ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಗೃಹ ಸಚಿವ ಅಮಿತ್‌ ಶಾ (Amit Shah) ಬಹಿರಂಗವಾಗಿಯೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸಿಎಂ ಕೇಜ್ರವಾಲ್ ಅವರಿಗೆ ‘ವಿಶೇಷ ಸೌಲಭ್ಯ’ ನೀಡಲಾಗಿದೆ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ನಾನು ಯಾವುದೇ ಟಿಪ್ಪಣಿ ಹೇಳುವುದಿಲ್ಲ. ಕೇಜ್ರಿವಾಲ್‌ ಅವರಿಗೆ ಜಾಮೀನು ನೀಡಿದ ಸುಪ್ರೀಂ ತೀರ್ಪು ಎಂದಿನ ತೀರ್ಪಿನಂತಿರಲಿಲ್ಲ. ಅದು ಕೇಜ್ರಿವಾಲ್ ಅವರಿಗೆ ನೀಡಿದ ವಿಶೇಷ ಸೌಲಭ್ಯದಂತಿದೆ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

INDIA ಒಕ್ಕೂಟಕ್ಕೆ ಅಧಿಕಾರ ಸಿಕ್ಕಿದರೆ ನಾನು ಮತ್ತೆ ಜೈಲಿಗೆ ಹೋಗುವುದಿಲ್ಲ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ಇದು ಹೇಗೆ ಅಂದರೆ ಚುನಾವಣೆಯಲ್ಲಿ ಗೆದ್ದರೆ ಅವರು ತಪ್ಪು ಮಾಡಿದ್ದರೂ ಸುಪ್ರೀಂ ಅವರನ್ನು ಜೈಲಿಗೆ ಕಳುಹಿಸುವುದಿಲ್ಲ ಎಂಬುದನ್ನು ಹೇಳಲು ದೆಹಲಿ ಸಿಎಂ ಹೊರಟಿದ್ದಾರೆ. ಇದು ಸ್ಪಷ್ಟವಾದ ನ್ಯಾಯಾಂಗ ನಿಂದನೆ. ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರು ಕೇಜ್ರಿವಾಲ್‌ ಹೇಗೆ ಜಾಮೀನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಗಮನಿಸಬೇಕು ಎಂದು ಹೇಳಿದರು.

ತಿಹಾರ್‌ ಜೈಲಿನಲ್ಲಿ ಕ್ಯಾಮೆರಾ ಅಳವಡಿಸಲಾಗಿದ್ದು ಅಲ್ಲಿನ ಎಲ್ಲಾ ದೃಶ್ಯಗಳು ಪ್ರಧಾನಿ ಕಚೇರಿಗೆ ಹೋಗುತ್ತಿತ್ತು ಎಂಬ ಕೇಜ್ರಿವಾಲ್‌ ಆರೋಪವನ್ನು ನಿರಾಕರಿಸಿದ ಅವರು ತಿಹಾರ್ ಜೈಲಿನ ಆಡಳಿತವು ದೆಹಲಿ ಸರ್ಕಾರದ ಅಡಿಯಲ್ಲಿದೆ ಮತ್ತು ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕೇಜ್ರಿವಾಲ್‌ ಅವರನ್ನು ಗಂಭೀರವಾಗಿ ಪರಿಗಣಿಸಬೇಡಿ. ಅವರ ಪಕ್ಷವು ಕೇವಲ 22 ಸ್ಥಾನಗಳಲ್ಲಿ ಹೋರಾಡುತ್ತಿದೆ ಮತ್ತು ಅವರು ಇಡೀ ದೇಶಕ್ಕೆ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡಲಾಗುವುದು ಎಂದು ಅವರು ಭರವಸೆ ನೀಡುತ್ತಿದ್ದಾರೆ. ಕೇವಲ 22 ಸ್ಥಾನಗಳಲ್ಲಿ ಸ್ಪರ್ಧೆ ಮಾಡುವ ಆಪ್‌ ಸರ್ಕಾರ ಹೇಗೆ ರಚನೆ ಮಾಡುತ್ತದೆ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.

Share This Article