ಈಗ ಕ್ರಿಮಿನಲ್‌ಗಳು ಜೈಲಿಗೆ ಹೋಗಲು ಭಯ ಪಡುತ್ತಿದ್ದಾರೆ: ಯೋಗಿ ಅದಿತ್ಯನಾಥ್‌

Public TV
2 Min Read

ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) ಈಗ ಕ್ರಿಮಿನಲ್‌ಗಳು (Criminals) ಜೈಲಿಗೆ ಹೋಗಲು ಭಯ ಪಡುತ್ತಿದ್ದಾರೆ ಎಂದು ಸಿಎಂ ಯೋಗಿ ಅದಿತ್ಯನಾಥ್‌ (Yogi Adityanath) ಹೇಳಿದ್ದಾರೆ.

ಶಂಸಾಬಾದ್‌ನಲ್ಲಿ ಬಿಜೆಪಿ (BJP) ಅಭ್ಯರ್ಥಿ ಪರ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ನಾವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸುತ್ತಿದ್ದೇವೆ. ಕ್ರಿಮಿನಲ್‌ ವ್ಯಕ್ತಿಗಳು ಅಪರಾಧವನ್ನು ನಿಲ್ಲಿಸಬೇಕು ಅಥವಾ ಅದಕ್ಕೆ ತಕ್ಕುದಾದ ಬೆಲೆಯನ್ನು ಪಾವತಿಸಲು ಸಿದ್ಧರಾಗಬೇಕು. ಈಗ ಬಹುತೇಕ ಕ್ರಿಮಿನಲ್‌ಗಳು ಜೈಲಿಗೆ ಹೋಗಲು ಭಯಪಡುತ್ತಿದ್ದಾರೆ ಎಂದು ಹೇಳಿದರು.

ಕಳೆದ ವಾರ ಬಂದಾ ಜೈಲಿನಲ್ಲಿ ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿ (Mukhtar Ansari) ಸಾವನ್ನಪ್ಪಿದ ನಂತರ ಈ ಹೇಳಿಕೆ ಬಂದಿರುವುದು ವಿಶೇಷ. ಕುಟುಂಬಸ್ಥರು ವಿಷ ಪ್ರಾಶನ ಮಾಡಿ ಅನ್ಸಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದರೆ ಹೃದಯಾಘಾತದಿಂದ ಸಾವಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ನೀಡಿದೆ. ಇದನ್ನೂ ಓದಿ: ವಿಷಪೂರಿತ ಹಾವಿಗಿಂತ ಬಿಜೆಪಿ ಅಪಾಯಕಾರಿ: ಮಮತಾ ಬ್ಯಾನರ್ಜಿ ವಾಗ್ದಾಳಿ

2017ರ ಮೊದಲು ಪೊಲೀಸ್ ಠಾಣೆಗಳು ಸೂರ್ಯಾಸ್ತದ ನಂತರ ಬೀಗ ಹಾಕುತ್ತಿದ್ದವು. ಸಾಮಾನ್ಯ ಜನರು ಭಯಭೀತರಾಗಿದ್ದರು. ಉತ್ತರ ಪ್ರದೇಶದಲ್ಲಿ ಸರ್ಕಾರ ಬದಲಾಯಿತು ಆದರೆ ಅಪರಾಧಿಗಳು ಮೊದಲಿನಂತೆಯೇ ಇರುತ್ತದೆ ಎಂದು ಭಾವಿಸಿದ್ದರು. ನಾವು ನಮ್ಮ ರಾಜ್ಯದಲ್ಲಿ ಅಪರಾಧದ ಬಗ್ಗೆ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ತಂದಿದ್ದೇವೆ. ಕ್ರಿಮಿನಲ್‌ಗಳು ಸುಧಾರಣೆಯಾಗಬೇಕು ಅಥವಾ ಅವರು ಬೆಲೆ ತೆರುವ ಆಯ್ಕೆಯನ್ನು ನೀಡಲಾಗಿದೆ ಎಂದು ಯೋಗಿ ಹೇಳಿದರು.

ಜಾಮೀನು (Bail) ಸಿಕ್ಕಿ ಪರಾರಿಯಾಗುತ್ತಿದ್ದವರು ಈಗ ತಾವಾಗಿಯೇ ಶರಣಾಗುತ್ತಿದ್ದಾರೆ. ಅಪರಾಧಿಗಳು ನಮ್ಮನ್ನು ಜೈಲಿಗೆ ಕಳುಹಿಸಬೇಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಈಗ ಅವರಿಗೆ ಜೈಲಿಗೆ ಹೋಗುವ ಭಯವಿದೆ. ಇನ್ನು ಮುಂದೆ ಯಾವುದೇ ಅಪರಾಧ ಮಾಡುವುದಿಲ್ಲ. ನಮ್ಮ ಪ್ರಾಣ ಉಳಿದರೆ ನಾವು ಉತ್ಪನ್ನಗಳನ್ನು ಮಾರಾಟ ಮಾಡುತ್ತೇವೆ ಎಂಬ ಸಂದೇಶ ಇರುವ ಪ್ಲೇ ಕಾರ್ಡ್‌ ಹಿಡಿದು ಬರುತ್ತಿದ್ದಾರೆ ಎಂದರು. ಇದನ್ನೂ ಓದಿ: ಮಹಿಳೆಯರನ್ನು ಹೇಗೆ ಗೌರವಿಸಬೇಕೆಂಬುದನ್ನು ಮೋದಿ ನೋಡಿ ಕಲಿಯಿರಿ: ಹೇಮಾ ಮಾಲಿನಿ

ಈ ಹಿಂದೆ ಉತ್ತರ ಪ್ರದೇಶದಲ್ಲಿ ಆಗಾಗ ಗಲಭೆ, ಕರ್ಫ್ಯೂ ನಡೆಯುತ್ತಿತ್ತು ಆದರೆ ರಾಜ್ಯದಲ್ಲಿ ಬಿಜೆಪಿ ಆಡಳಿತ ಬಂದ ಮೇಲೆ ಇದೆಲ್ಲವನ್ನೂ ಬದಲಾವಣೆ ಮಾಡಲಾಗಿದೆ. ಈಗ ಯಾವುದೇ ಗಲಭೆಗಳಿಲ್ಲ ಮತ್ತು ಕರ್ಫ್ಯೂ ಇಲ್ಲ. ಹಬ್ಬಗಳ ಉತ್ಸವ ನಡೆಯುತ್ತಿದೆ. ʼಉತ್ಸವ ಪ್ರದೇಶʼ ಇದು ಮೋದಿಯ ಗ್ಯಾರಂಟಿ ಎಂದು ಬಣ್ಣಿಸಿದರು.

Share This Article