ಜೆಡಿಎಸ್ ಚಿಹ್ನೆಯ ಅಡಿ ಸ್ಪರ್ಧೆಗೆ ಸಿದ್ಧ: ಪ್ರಮೋದ್ ಮಧ್ವರಾಜ್

Public TV
1 Min Read

ಬೆಂಗಳೂರು: ಉಭಯ ಪಕ್ಷಗಳು ಒಪ್ಪಿದರೆ ಜೆಡಿಎಸ್ ಚಿಹ್ನೆಯ ಅಡಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧ ಎಂದು ಕಾಂಗ್ರೆಸ್‍ನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ನಗರದ ಪದ್ಮನಾಭನಗರದಲ್ಲಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ ಪ್ರಮೋದ್ ಮಧ್ವರಾಜ್ ಅವರು, ದೇವೇಗೌಡರ ಜೊತೆಗೆ ಟಿಕೆಟ್ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಹಜವಾಗಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಬಯಸಿದ್ದೆ. ಆದರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ತೆಕ್ಕೆಗೆ ಬಂದಿದೆ. ಇದು ಮತ್ತೆ ಕೈ ಪಾಲಿಗೆ ಬರಬೇಕಿದ್ದರೆ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನ ಆಗಬೇಕು. ಒಂದು ವೇಳೆ ಮಾತುಕತೆ ಸಾಧ್ಯವಾಗದಿದ್ದರೆ, ಜೆಡಿಎಸ್ ಚಿಹ್ನೆಯ ಅಡಿ ಸ್ಪರ್ಧೆ ಮಾಡಲು ಸಿದ್ಧ ಎಂದು ಹೇಳಿದರು.

ಉಡುಪಿ-ಚಿಕ್ಕಮಗಳೂರಿನಿಂದ ಪ್ರಮೋದ್ ಮಧ್ವರಾಜ್ ಸ್ಪರ್ಧೆ ವಿಚಾರವಾಗಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಪ್ರಮೋದ್ ಮಧ್ವರಾಜ್ ಅವರನ್ನೇ ಕಣಕ್ಕಿಳಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮನಸ್ಸು ಮಾಡಿದ್ದಾರೆ. ಹೀಗಾಗಿ ಸ್ಪರ್ಧೆ ಕುರಿತು ಪ್ರಮೋದ್ ಮಧ್ವರಾಜ್ ಹಾಗೂ ಎಚ್.ಡಿ.ದೇವೇಗೌಡರ ಮಧ್ಯೆ ಇದೇ ವಿಚಾರವಾಗಿ ಇಂದು ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.

ಇದಕ್ಕೂ ಮುನ್ನ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಕಾಂಗ್ರೆಸ್‍ನ ಸಂಸದ ಡಿ.ಕೆ.ಸುರೇಶ್, ಕೆ.ಸಿ.ಕೊಂಡಯ್ಯ ಮತ್ತು ಯು.ಬಿ.ವೆಂಕಟೇಶ್ ಸೇರಿದಂತೆ ಅನೇಕ ನಾಯಕರು ಭೇಟಿ ಮಾತುಕತೆ ನಡೆಸಿದರು. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಹಾಗೂ ಪ್ರಚಾರಕ್ಕೆ ಬರುವಂತೆ ಮನವಿ ಸಲ್ಲಿಸಿದ್ದಾರೆ.

ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಅವರು ಕೂಡ ದೇವೇಗೌಡರನ್ನು ಇಂದು ಮಧ್ಯಾಹ್ನ ಭೇಟಿಯಾಗಿದ್ದಾರೆ. ಮಾತುಕತೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಎಚ್.ಡಿ.ದೇವೇಗೌಡರಿಗೆ ಮನವಿ ಮಾಡಿಕೊಂಡಿದ್ದೇನೆ. ಅವರ ಪರವಾಗಿ ಬೆಂಗಳೂರಿನ ಕಾಂಗ್ರೆಸ್ ಶಾಸಕರು ಪ್ರಚಾರ ಮಾಡುತ್ತಾರೆ. ಇದರಿಂದ ಬೆಂಗಳೂರು ದಕ್ಷಿಣ ಮತ್ತು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *