ದಕ್ಷಿಣ ಕರ್ನಾಟಕದ ಮತದಾನ ದಿನವೇ ರಾಜ್ಯದಲ್ಲಿ ಪ್ರಧಾನಿ ಮೋದಿ ರ‍್ಯಾಲಿ

Public TV
2 Min Read

ಬೆಂಗಳೂರು: ದಕ್ಷಿಣ ಕರ್ನಾಟಕದ ಮತದಾನ ದಿನವೇ ಪ್ರಧಾನಿ ನರೇಂದ್ರ ಮೋದಿ ಉತ್ತರ ಕರ್ನಾಟಕದಲ್ಲಿ ರ‍್ಯಾಲಿ ನಡೆಸಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮತದಾನ ಏಪ್ರಿಲ್ 18ರಂದು ನಡೆಯಲಿದೆ. ಅದೇ ದಿನವೇ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಎರಡು ಕಡೆಗಳಲ್ಲಿ ರ‍್ಯಾಲಿ ನಡೆಸಲಿದ್ದಾರೆ. ಈ ಮೂಲಕ ರಾಜ್ಯದ 6 ಕಡೆಗಳಲ್ಲಿ ಮೋದಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಎಲ್ಲೆಲ್ಲಿ ಮೋದಿ ರ‍್ಯಾಲಿ?:
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 8ರಂದು ಮಧ್ಯಾಹ್ನ 1 ಗಂಟೆಗೆ ಚಿತ್ರದುರ್ಗ, 3ಕ್ಕೆ ಮೈಸೂರಿನ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಏಪ್ರಿಲ್ 13ರಂದು ಬೆಳಗ್ಗೆ ಮಂಗಳೂರು, ಸಂಜೆ ಬೆಂಗಳೂರಿನಲ್ಲಿ ಮೋದಿ ಸಮಾವೇಶ ನಡೆಯಲಿದೆ. ದಕ್ಷಿಣ ಕರ್ನಾಟಕದ ಮತದಾನದ ದಿನವಾದ ಏಪ್ರಿಲ್ 18ರಂದು ಬೆಳಗ್ಗೆ ಚಿಕ್ಕೋಡಿ, ಮಧ್ಯಾಹ್ನ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೂಡ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಏಪ್ರಿಲ್ 10, 12, 17 ಮತ್ತು 20 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ಮೂಲಕ ದಾವಣಗೆರೆ, ಹಾಸನ, ತುಮಕೂರು, ಕೋಲಾರ, ಕಲಬುರಗಿ, ವಿಜಯಪುರ, ಧಾರವಾಡ ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಾರೆ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಗರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಮಹಾನಗರಗಳಲ್ಲಿ ಮೇಯರ್ ಇನ್ ಕೌನ್ಸಿಲ್ ಹೇಗೆ ಅಕೌಂಟಿಬಿಲಿಟಿ ಇರಬೇಕು ಅಂತ ಹೇಳಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಬಿಬಿಎಂಪಿ ಡಿವೈಡ್ ಮಾಡೋದಕ್ಕೆ ನಮ್ಮ ವಿರೋಧವಿತ್ತು. ಆದರೆ ಮೇಯರ್ ಇನ್ ಕೌನ್ಸಿಲ್‍ಗೆ ನಾವು ಬೆಂಬಲ ನೀಡಿದ್ದೇವು. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಯಾಕೆ ಕಾರ್ಯಗತಕ್ಕೆ ತರಲಿಲ್ಲ. ಸುಳ್ಳು ಹೇಳಿಕೆಗಳನ್ನು ರಾಹುಲ್ ಗಾಂಧಿ ಅವರು ನಿಲ್ಲಿಸಬೇಕು ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‍ನವರು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಡೈರಿ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ನಮ್ಮ ಪಕ್ಷ ಅಭಿವೃದ್ಧಿ ವಿಚಾರಗಳ ಮೇಲೆ ನಾವು ಪ್ರಚಾರ ಮಾಡುತ್ತಿದ್ದೇವೆ. ಆದರೆ ಕಾಂಗ್ರೆಸ್‍ನವರು ಸುಳ್ಳು ಆರೋಪಗಳಿಂದ ಮತದಾರರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಹುಲ್ ಗಾಂಧಿ ಸಲಹೆ ಪಡೆದು ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ತಿದ್ದುಪಡಿ ಮಾಡುವ ಸಾಧ್ಯತೆ ಇದೆ. ಕೇಂದ್ರ ಬಿಜೆಪಿ ಸರ್ಕಾರವು ರೈತರ ಖಾತೆಗೆ ವಾರ್ಷಿಕವಾಗಿ 6 ಸಾವಿರ ರೂ. ಹಾಕುತ್ತಿದೆ. ಆದರೆ ಕಾಂಗ್ರೆಸ್‍ನವರು ಈಗ 72 ಸಾವಿರ ರೂ. ಪಾವತಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.

ನಾನು ಈಗಾಗಲೇ ಗೆದ್ದಿದ್ದೇನೆ. ಯಾರ ಪ್ರಚಾರವೂ ಅಗತ್ಯವಿಲ್ಲ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿರಲು ಸಾಧ್ಯವಿಲ್ಲ. ಆದರೂ ಯುವಕ, ಅತಿ ಉತ್ಸಾಹದಿಂದ ಹಾಗೇನಾದರೂ ಹೇಳಿದ್ದರೆ ಕರೆದು ಬುದ್ಧಿ ಹೇಳುತ್ತೇವೆ ಎಂದು ಅರವಿಂದ್ ಲಿಂಬಾವಳಿ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *