ಮಂಡ್ಯದಿಂದ ನಿಖಿಲ್ ಸ್ಪರ್ಧೆ – ಪರೋಕ್ಷವಾಗಿ ತಿಳಿಸಿದ ದೇವೇಗೌಡ

Public TV
2 Min Read

ಮಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುವದನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪರೋಕ್ಷವಾಗಿ ಖಚಿತಪಡಿಸಿದ್ದಾರೆ.

ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ಕುರಿತು ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಕೂಡ ಟಿಕೆಟ್ ಇಚ್ಛೆ ಹೊಂದಿದ್ದಾರೆ. ಜೊತೆಗೆ ನಿಖಿಲ್ ಅವರನ್ನು ರಾಜಕೀಯಕ್ಕೆ ಬರುವಂತೆ ಜಿಲ್ಲೆಯ ಜನತೆ ಒತ್ತಾಯಿಸುತ್ತಿದ್ದಾರೆ ಎಂದ ಅವರು, ಮಂಡ್ಯದಲ್ಲಿ ಹಿಂದಿನಿಂದಲೂ ಜೆಡಿಎಸ್ ಪ್ರಬಲವಾಗಿದೆ. ನಿಖಿಲ್ ಸ್ಪರ್ಧಿಸುವುದಾದರೆ ಸ್ಪರ್ಧೆ ಮಾಡಲಿ ಎಂದು ಹೇಳಿದರು. ಇದನ್ನು ಓದಿ: ಜೆಡಿಎಸ್ ಪಕ್ಷದಿಂದಲೇ ಸುಮಲತಾಗೆ ಟಿಕೆಟ್ ಕೊಡಬಹುದು: ಚಲುವರಾಯ ಸ್ವಾಮಿ

ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆಂದರು ಹೇಳಿದರು. ಹೀಗಾಗಿ ಸ್ಪರ್ಧಿಸುವಂತೆ ಹೇಳಿದ್ದೇನೆ. ತಾತ ಪ್ರಜ್ವಲ್ ರೇವಣ್ಣ ಅವರಿಗೆ ಮಾತ್ರ ಆಸಕ್ತಿವಹಿಸುತ್ತಾರೆಂದು ಎಂದುಕೊಳ್ಳುವುದು ಬೇಡ. ಅದಕ್ಕಾಗಿ ನಿಖಿಲ್‍ಗೂ ಅವಕಾಶ ಕೊಡಬೇಕೆಂದು ನಿರ್ಧರಿಸಿದ್ದೇನೆ ಎಂದು ಹೇಳಿದರು. ಇದನ್ನು ಓದಿ: ಎಡಬಿಡಂಗಿಗಳು ಮೈತ್ರಿ ಅಭ್ಯರ್ಥಿ ವಿರೋಧಿಸ್ತಾರೆ: ಕಾಂಗ್ರೆಸ್ ವಿರುದ್ಧ ಸುರೇಶ್‍ಗೌಡ ಕಿಡಿ

ನಮ್ಮದು ರಾಜಕಿಯ ಕುಟುಂಬ ಅಲ್ಲ, ರೈತರ ಕುಟುಂಬ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ರಾಜಕೀಯಕ್ಕೆ ಬರುವುದು ನನಗೆ ಇಷ್ಟವಿರಲಿಲ್ಲ. ರೇವಣ್ಣನಿಗೋಸ್ಕರ ಇಂಡಸ್ಟ್ರಿಯಲ್ ಸೈಟ್ ಖರೀದಿಸಿದ್ದೆ. ಆದರೆ ರೇವಣ್ಣ ಅದನ್ನು ಬಿಟ್ಟು ರಾಜಕೀಯಕ್ಕೆ ಬಂದ. ಪ್ರಜ್ವಲ್‍ಗೂ ರಾಜಕೀಯಕ್ಕೆ ಬರಬೇಡ ಎಂ.ಟೆಕ್ ಮಾಡುವಂತೆ ಹೇಳಿದ್ದೆ. ಆದರೆ ಅವನು ಮನಸ್ಸು ಮಾಡಲಿಲ್ಲ. ಹೀಗಾಗಿ ಪಕ್ಷದ ಮುಖಂಡರ ಜೊತೆ ಮಾತಾಡಿದ್ದೇನೆ. ದೇವರ ಇಚ್ಛೆ ಏನೋ, ಗೊತ್ತಿಲ್ಲ. ಎಲ್ಲರೂ ರಾಜಕೀಯಕ್ಕೆ ಬಂದಿದ್ದಾರೆ ಎಂದು ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡರು.

ಲೋಕಸಭಾ ಚುನಾವಣೆಗೆ ಒಂದು ವಾರದಲ್ಲಿ ದಿನಾಂಕ ನಿಗದಿಯಾಗಲಿದೆ. ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಬರುವ ಊಹಾಪೋಹಗಳು ಅಷ್ಟೇ. ನಾವು ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶವನ್ನು ಕೊಡಲ್ಲ. ರಾಷ್ಟ್ರೀಯ ಪಕ್ಷದ ಮುಖಂಡರು ಬಂದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಲು ಒತ್ತಾಯಿಸಿದರು. ಬಿಜೆಪಿಯ ಪ್ರಗತಿಯನ್ನು ತಡೆಗಟ್ಟುವ ಉದ್ದೇಶದಿಂದ ಮೈತ್ರಿಯಾಗಿದ್ದೇವೆ. ಮೈತ್ರಿಗೆ ಅಪಾಯವಾಗುವ ರೀತಿ ಅವಕಾಶ ಕೊಡಲ್ಲ ಎಂದು ತಿಳಿಸಿದರು.

ರಾಜದಲ್ಲಿ 12 ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‍ಗೆ ಕೊಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‍ಗೆ ಹೇಳಿದ್ದೇನೆ. ಆದರೆ ಮಾತುಕತೆಯ ಬಳಿಕ ಅಂತಿಮ ತೀರ್ಮಾನಕ್ಕೆ ಬರುತ್ತೇವೆ. ಜೊತೆಗೆ ತೀರ್ಮಾನವನ್ನು ಸೌಹಾರ್ದಯುತವಾಗಿ ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *