ಅನಾವಶ್ಯಕವಾಗಿ 40 ಸೈನಿಕರ ಸಾವಿಗೆ ಮೋದಿ ಕಾರಣರಾದ್ರು: ಕೃಷ್ಣಬೈರೇಗೌಡ

Public TV
2 Min Read

– ಬ್ಯಾಟರಾಯನಪುರಕ್ಕೆ ನಾನೇ ಶಾಸಕ, ಸಂಸದ, ಕಾರ್ಪೋರೇಟರ್

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಅನಾವಶ್ಯಕವಾಗಿ 40 ಜನ ಸಿಆರ್‌ಪಿಎಫ್ ಯೋಧರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಕಾರಣವಾಗಿದ್ದಾರೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ ಆರೋಪಿಸಿದ್ದಾರೆ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸುತ್ತಿದ್ದ 40 ಜನ ಸಿಆರ್‌ಪಿಎಫ್ ಯೋಧರು ಪುಲ್ವಾಮಾದಲ್ಲಿ ಹುತಾತ್ಮರಾದರು. ಯುದ್ಧದಲ್ಲಿ ಹುತಾತ್ಮರಾಗುವುದು ಬೇರೆ ಹಾಗೂ ಪ್ರವಾಸದಲ್ಲಿ ಭಯೋತ್ಪಾದಕ ದಾಳಿಯಿಂದ ಪ್ರಾಣ ಕಳೆದುಕೊಳ್ಳುವುದೇ ಬೇರೆ. ಪ್ರಯಾಣ ಮಾಡುತ್ತಿದ್ದ ಯೋಧರಿಗೆ ಚೌಕಿದಾರ್ ಮೋದಿ ಯಾಕೆ ರಕ್ಷಣೆ ಕೊಡಲಿಲ್ಲ? ದೇಶದಲ್ಲಿ ಗುಪ್ತಚರ ಇಲಾಖೆ ಇರಲಿಲ್ವಾ? ಮಾಹಿತಿ ಪಡೆದು ಸೂಕ್ತ ಭದ್ರತೆ ನೀಡಬೇಕಿತ್ತು ಎಂದರು.

ರಾಜ್ಯ ಕಾಂಗ್ರೆಸ್-ಜೆಡಿಎಸ್ ಮುಖಂಡರ ಮನೆಯಲ್ಲಿದ್ದ 32 ಸಾವಿರ ರೂ. ಹುಡುಕಲು 200 ಜನ ಸಿಆರ್‌ಪಿಎಫ್ ಯೋಧರು ಹಾಗೂ 60 ಜನ ಐಟಿ ಅಧಿಕಾರಿಗಳನ್ನು ಕಳುಹಿಸಿದ್ದರು. ಆದರೆ ಪುಲ್ವಾಮಾದಲ್ಲಿ 300 ಕೆಜಿ ಆರ್‍ಡಿಎಕ್ಸ್ ಹುಡುಕುವುದಕ್ಕೆ ನಿಮ್ಮ ಕೈಲಿ ಆಗಲಿಲ್ವಾ? ಘಟನೆಗೂ ಮುನ್ನ ಎಚ್ಚೆತ್ತುಕೊಂಡಿದ್ದರೆ ಮಂಡ್ಯದ ಮಗ ಗುರು ಅವರನ್ನು ಸೇರಿದಂತೆ 40 ಜನ ಸೈನಿಕರ ಪ್ರಾಣ ಉಳಿಯುತ್ತಿತ್ತು ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಬಿಜೆಪಿಯವರು ಪ್ರಜಾಪ್ರಭುತ್ವದ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಇದನ್ನು ನಾವು ವಿರೋಧಿಸುತ್ತೇವೆ ಎನ್ನುವ ಸಂದೇಶ ನೀಡಲು ನಿಮಗೆ ಅವಕಾಶ ಸಿಕ್ಕಿದೆ. ಈ ಮೂಲಕ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ಎಲ್ಲರೂ ಶ್ರಮಿಸಬೇಕು ಎಂದು ಮತದಾರರಿಗೆ ಕರೆಕೊಟ್ಟರು.

ನಮ್ಮ ದೇಶದ ರಕ್ಷಣೆಗಾಗಿ ನೀನು ಮಂತ್ರಿ ಸ್ಥಾನ ತ್ಯಾಗ ಮಾಡಬೇಕು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೇರಿದಂತೆ ಅನೇಕ ನಾಯಕರು ಒತ್ತಾಯಿಸಿದರು. ಇದರಿಂದಾಗಿ ನಾನು ಸ್ಪರ್ಧೆ ಮಾಡುತ್ತಿರುವೆ. ನಾಮಪತ್ರ ಸಲ್ಲಿಸಲು ಒಂದೇ ದಿನ ಬಾಕಿ ಉಳಿದಿದ್ದರಿಂದ ಸ್ಪರ್ಧೆಯ ವಿಚಾರವಾಗಿ ನಿಮ್ಮ ಅಭಿಪ್ರಾಯ ಕೇಳಲು ನನಗೆ ಸಮಯ ಸಿಗಲಿಲ್ಲ ಎಂದು ಮತದಾರರ ಮನವೊಲಿಸಿದರು.

ನಾನು ಆಯ್ಕೆಯಾಗಿ ಲೋಕಸಭೆಗೆ ಹೋದರೆ ನಿಮ್ಮ ಶಾಸಕರು ಯಾರೂ ಎನ್ನುವ ಅನುಮಾನ ಬೇಡ. ಸಂಸದನಾಗಿದ್ದಕೊಂಡೇ ನಿಮ್ಮ ಋಣ ತೀರಿಸುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಸಂಸದ, ಶಾಸಕ, ಕಾರ್ಪೋರೇಟರ್, ಗ್ರಾಮ ಪಂಚಾಯತ್ ಮೆಂಬರ್ ಎಲ್ಲವೂ ನಾನೇ. ನನ್ನ ಅದೇ ಹಳೇ ಕಚೇರಿ, ಕುರ್ಚಿ, ಮೇಜು, ಅಲ್ಲೇ ನಾನು ಇರುತ್ತೇನೆ. ಯಾವುದೇ ಪಕ್ಷ ಭೇದವಿಲ್ಲದೆ ಎಲ್ಲರೂ ಬಂದು ನನ್ನ ಕಾಣಬಹುದು. ಬ್ಯಾಟರಾಯನಪುರಕ್ಕೆ ನಾನೇ ನಿರಂತರವಾಗಿ ನಿಮ್ಮ ಶಾಸಕನಾಗಿರುತ್ತೇನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *