ನನಗಾಗಿ ವೋಟ್ ಕೇಳಲ್ಲ, ನಮ್ಮ ವಿಚಾರಧಾರೆ, ಮೋದಿಗಾಗಿ ಕೇಳುತ್ತೇನೆ: ಅನಂತ್‍ಕುಮಾರ್ ಹೆಗ್ಡೆ

Public TV
1 Min Read

– ವೈಯಕ್ತಿಕ ಪ್ರತಿಷ್ಠೆ ಜಾಸ್ತಿ ಇರೋರು ತಮಗೆ ವೋಟ್ ಹಾಕಿ ಅಂತಾರೆ

ಕಾರವಾರ: ನಮ್ಮ ವಿಚಾರಧಾರೆ, ಪಾರ್ಟಿ ಹಾಗೂ ಪ್ರಧಾನಿ ನರೇಂದ್ರ ಮೋದಿಯ ನಾಯಕತ್ವಕ್ಕಾಗಿ ಮತ ಹಾಕುವಂತೆ ಕೇಳುತ್ತೇವೆ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಹೇಳಿದ್ದಾರೆ.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಮಾತನಾಡಿದ ಕೇಂದ್ರ ಸಚಿವರು, ಇದು ನನ್ನ ವೈಯಕ್ತಿಕ ಚುನಾವಣೆಯಲ್ಲ. ಸಭ್ಯತೆ ಮತ್ತು ಸಂಸ್ಕಾರ ಇರುವ ಜನ ಮಾತ್ರ ಪಕ್ಷ, ನಾಯಕನಿಗಾಗಿ ಮತ ಕೇಳುತ್ತಾರೆ. ವೈಯಕ್ತಿಕ ಪ್ರತಿಷ್ಠೆ ಹೆಚ್ಚಾಗಿರುವ ಅಭ್ಯರ್ಥಿ ತನಗಾಗಿ ವೋಟ್ ಮಾಡುವಂತೆ ಕೇಳುತ್ತಾನೆ ಎಂದು ತಿಳಿಸಿದರು.

ಕಾಂಗ್ರೆಸ್ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ವಿರುದ್ಧ ಹರಿಹಾಯ್ದ ಅನಂತ್‍ಕುಮಾರ್ ಹೆಗ್ಡೆ ಅವರು, ರಾಹುಲ್ ಗಾಂಧಿ ಅವರು ಕೇರಳಕ್ಕೆ ಹೋಗಿ ಸ್ಪರ್ಧೆ ಮಾಡುತ್ತಿರುವುದು ತೀರಾ ಹಾಸ್ಯಾಸ್ಪದವಾಗಿದೆ. ಅಮೇಥಿಯಲ್ಲಿ ಗೆಲ್ಲುವ ವಿಶ್ವಾಸವಿಲ್ಲದೇ ಇನ್ನೊಂದು ಕ್ಷೇತ್ರ ಹುಡುಕಿಕೊಂಡು ಹೋಗಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.

ದೇವಸ್ಥಾನಕ್ಕೆ ಹೋಗದೇ ಇರುವವರು ದೇವಸ್ಥಾನಕ್ಕೆ ಹೋಗಲು ಶುರುಮಾಡಿದ್ದಾರೆ. ಗಂಗಾ ನದಿ ನೋಡದವರು ಗಂಗಾ ಯಾತ್ರೆ ಕೈಗೊಂಡಿದ್ದಾರೆ. ಹಣೆಯಲ್ಲಿ ಕುಂಕುಮ ಇಡದವರು ಕುಂಕುಮ ಇಡಲು ಆರಂಭಿಸಿದ್ದಾರೆ. ನಾವು ಸಾಂಸ್ಕೃತಿಕ, ರಾಷ್ಟ್ರೀಯ ವೈಭವತೆಯ ಕನಸನ್ನು ಕಾಣುತಿದ್ದೇವು. ಅವೆಲ್ಲವೂ ಇಂದು ಆಗುತ್ತಿದೆ ಎಂದು ಪ್ರಿಯಾಂಕ ಗಾಂಧಿ ಅವರಿಗೆ ಟಾಂಗ್ ಕೊಟ್ಟರು.

ಇದಕ್ಕೂ ಮುನ್ನ ಮೆರವಣಿಗೆ ಮೂಲಕ ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅನಂತ್‍ಕುಮಾರ್ ಹೆಗ್ಡೆ ಅವರು, ಚುನಾವಣಾಧಿಕಾರಿ ಡಾ.ಹರೀಶ್ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಪತ್ನಿ ಶ್ರೀರೂಪ, ಪುತ್ರ ಅಶುತೋಶ, ಪುತ್ರಿ ಋಷಾಲಿ, ಮಾಜಿ ಸಿಎಂ ಜಗದೀಶ್ ಶಟ್ಟರ್, ಬಿಜೆಪಿ ಶಾಸಕರಾದ ರೂಪಾಲಿ ನಾಯ್ಕ, ಸುನಿಲ್‍ನಾಯ್ಕ, ದಿನಕರ್ ಶಟ್ಟಿ ಹಾಜರಿದ್ದರು.

ಅನಂತ್‍ಕುಮಾರ್ ಹೆಗ್ಡೆ ಅವರು 6 ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, 5 ಬಾರಿ ಗೆಲವು ಕಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಅನಂತ್‍ಕುಮಾರ್ ಹೆಗ್ಡೆ ಕೌಶಲ್ಯಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *