ಕೃಷಿ, ತೋಟಗಾರಿಕೆ ಬೆಳೆಗಳಿಗೆ ಅನುಮತಿ ಕಾಯಬೇಕಿಲ್ಲ: ಶಿವರಾಮ್ ಹೆಬ್ಬಾರ್

Public TV
2 Min Read

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳ ಮುಂಜಾಗೃತಾ ಕ್ರಮದಿಂದ ಕೊರೊನಾ ವೈರಸ್ ನಿಯಂತ್ರಣದಲ್ಲಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ, ಮೀನುಗಾರರಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಕೊರೊನಾ ತಡೆ ಬಗ್ಗೆ ಸಭೆ ನಡೆಸಿದ ಅವರು, ಕೃಷಿ ಚಟುವಟಿಕೆಗೆ ಯಾವುದೇ ತೊಂದರೆ ಆಗದಂತೆ ಮುಕ್ತವಾಗಿ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ನಿರ್ಣಯದಂತೆ ಜಿಲ್ಲೆಯಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಮೀನುಗಾರಿಕೆಗೂ ಸಹ ಅವಕಾಶ ನೀಡಲಾಗಿದೆ. ಅಡಿಕೆ ಸೇರಿದಂತೆ ಇತರೆ ಬೆಳೆಗಳನ್ನು ರೈತರು ದೇಶದ ಯಾವುದೇ ಭಾಗಗಳಿಗೆ ಸಾಗಿಸಲು ಅನುಮತಿಗಾಗಿ ಕಾಯಬೇಕಾಗಿಲ್ಲ. ಜಿಲ್ಲಾಧಿಕಾರಿ ಮೂಲಕ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಮೂಲಕವು ಅನುಮತಿ ಪಡೆದುಕೊಳ್ಳಬಹುದು ಎಂದರು.

ಘಟ್ಟದ ಕೆಳಗೆ ಕಲ್ಲಂಗಡಿ, ಘಟ್ಟದ ಮೇಲ್ಬಾಗದಲ್ಲಿ ಅನಾನಸ್, ಬಾಳೆಹಣ್ಣು, ಪಪ್ಪಾಯಿ ಸಾಕಷ್ಟು ಪ್ರಮಾಣದಲ್ಲಿದೆ. ಆದರೆ ಕೊಂಡುಕೊಳ್ಳುವವರು ಇಲ್ಲದ ಕಾರಣ ಸುಮಾರು 12 ಸಾವಿರ ಟನ್ ಅನಾನಸ್ ಹಾಗೆ ಇದೆ. ಈ ಬಗ್ಗೆ ಭಾರತ ಸರ್ಕಾರದ ಅಧಿಕಾರಿಗಳ ಜೊತೆ ಮಾತಾಡಿದ್ದು, ಈ ವಾರದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಪಡಿತರ ವಿತರಣೆಗೆ ಯಾವುದೇ ತೊಂದರೆಯಾಗಿಲ್ಲ. ಓಟಿಪಿ ಬದಲು ಈ ಮೂರು ತಿಂಗಳು ಸಹಿ ಪಡೆದು ಪಡಿತರ ವಿತರಣೆ ಮಾಡಲು ಸೂಚಿಸಲಾಗಿದ್ದು, ಈಗಾಗಲೇ ಶೇ. 80ರಷ್ಟು ಪಡಿತರ ನೀಡಲಾಗಿದೆ. ಜೊತೆಗೆ ಬಿಪಿಎಲ್‍ಗಾಗಿ ಜಿಲ್ಲೆಯಲ್ಲಿ 3,427 ಜನರು ಅರ್ಜಿ ಸಲ್ಲಿಸಿದ್ದು, ಅವರಿಗೂ ಮೂರು ತಿಂಗಳು ಪಡಿತರ ವಿತರಣೆ ಮಾಡುವುದಾಗಿ ತಿಳಿಸಿದರು.

ಶಿರಸಿ ಸಿದ್ದಾಪುರದಲ್ಲಿ ನಾಲ್ಕು ಜನರಲ್ಲಿ ಮಂಗನ ಕಾಯಿಲೆ ಕಂಡು ಬಂದಿದೆ. ಈಗಾಗಲೇ ಆರೋಗ್ಯ ಇಲಾಖೆ ಕಾರ್ಯೋನ್ಮುಕವಾಗಿದ್ದು, ಶಿರಸಿ ಉಪವಿಭಾಗಾಧಿಕಾರಿ ಪ್ರತಿ ಎರಡು ದಿನಕ್ಕೊಮ್ಮೆ ಸ್ಥಳಕ್ಕೆ ತೆರಳಿ ಜನರಲ್ಲಿ ಧೈರ್ಯ ತುಂಬಲು ಸೂಚಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಔಷಧಿ ಪಡೆಯಲು ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಪಿಡಿಓಗಳಿಗೆ ಆಯಾ ಭಾಗದ ಜನರು ಯಾವ ಔಷಧಿಗಳು ಬೇಕು ಎಂಬುದನ್ನು ತಿಳಿಸಿದಲ್ಲಿ ಅವರ ಮೂಲಕ ಪೂರೈಸಲು ಸೂಚಿಸಲಾಗಿದೆ. ಅಲ್ಲದೆ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುವ ವಾಹನಗಳಿಗೆ ಡಿಸೆಲ್ ವ್ಯವಸ್ಥೆ ಕೂಡ ಪಿಡಿಓ ಮೂಲಕ ಮಾಡಲಾಗಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *