ರೈತರನ್ನು ಉಳಿಸೋಣ, ಅವರಿಗೆ ದಕ್ಕಬೇಕಾದ ಪಾಲು ಸಿಗಲಿ: ದರ್ಶನ್

Public TV
2 Min Read

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು ಕಷ್ಟಕ್ಕೆ ಮಿಡಿಯುವ ಹೃದಯ ಎಂಬುದು ತಿಳಿದೇ ಇದೆ. ಅವರ ಪ್ರಾಣಿ ಪ್ರೀತಿ, ಸಹಾಯ, ರೈತರ ಬಗೆಗಿನ ಕಾಳಜಿಯನ್ನು ಮತ್ತೆ ಹೇಳಬೇಕಿಲ್ಲ. ಸದಾ ಒಂದಲ್ಲ ಒಂದು ಸಹಾಯ ಮಾಡುತ್ತಲೇ ಇರುತ್ತಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇದೀಗ ರೈತರಿಗಾಗಿ ಸಾರ್ವಜನಿಕರಲ್ಲಿ ಮನವಿಯೊಂದನ್ನು ಮಾಡಿದ್ದಾರೆ.

ಲಾಕ್‍ಡೌನ್ ಹಿನ್ನೆಲೆ ಬಡವರು ಹಾಗೂ ರೈತರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಬಡ ಜನತೆ ಸರಿಯಾಗಿ ಊಟ ಸಿಗದೆ ಪರದಾಡಿದರೆ, ಅನ್ನದಾತ ತಾನು ತಿಂಗಳುಗಟ್ಟಲೇ, ವರ್ಷಗಟ್ಟಲೇ ಬೆಳೆದ ಬೆಳೆ ಮಾರಾಟವಾಗುತ್ತಿಲ್ಲ, ಕೊಳೆಯುತ್ತಿದೆ, ಬೀದಿ ಪಾಲಾಗುತ್ತಿದೆ ಎಂದು ಮರುಗುತ್ತಿದ್ದಾನೆ. ಸರ್ಕಾರ ಬಡ ಜನತೆಗೆ ಹೇಗೋ ಧಾನ್ಯ, ಆಹಾರ ಒದಗಿಸಲು ಮುಂದಾಗಿದೆ. ಆದರೆ ರೈತರ ಪಾಡು ಹೇಳತೀರದಾಗಿದೆ.

ಲಕ್ಷಾಂತರ ರೂಪಾಯಿಯ ಕರ್ಬೂಜ, ಕಲ್ಲಂಗಡಿ, ವಿವಿಧ ರೀತಿಯ ತರಕಾರಿ, ಹಲವು ಬಗೆಯ ಹುವು ಹೀಗೆ ಅನೇಕ ರೀತಿಯ ಬೆಳೆಗಳನ್ನು ಕೊಳ್ಳುವವರು ಇಲ್ಲದೆ ಅನಿವಾರ್ಯವಾಗಿ ಬೀದಿಗೆ ಚೆಲ್ಲುತ್ತಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಅವುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ರೈತರಿಗೆ ನಷ್ಟವಾಗಲು ಬಿಡುವುದಿಲ್ಲ ಎಂದು ಸರ್ಕಾರ ಹೇಳಿದರೂ ಕೊಳ್ಳುವವರೇ ಇಲ್ಲದಂತಾಗಿದೆ. ಇದೆಲ್ಲದರ ಮಧ್ಯೆ ತರಕಾರಿ, ಹಣ್ಣು ಕೊಳ್ಳಲು ಅವಕಾಶವಿದ್ದು, ಈ ಅವಕಾಶವನ್ನಾದರೂ ಬಳಸಿಕೊಂಡು ಮಾರಬೇಕೆಂದು ಯಾವುದೇ ಮಧ್ಯವರ್ತಿಗಳಿಲ್ಲದೆ ಹಲವು ರೈತರು ನೇರವಾಗಿ ಮಾರಾಟ ಮಾಡಲು ಇಳಿದಿದ್ದಾರೆ. ಸೂಕ್ತ ಬೆಲೆ ನೀಡಿ ಜನ ಕೊಂಡುಕೊಳ್ಳಬೇಕಷ್ಟೆ.

ಈ ಪರಿಸ್ಥಿತಿಯನ್ನು ಅರಿತಿರುವ ದಾಸ, ರೈತರಿಗೆ ನೆರವಾಗುವಂತೆ ಅವರೊಂದಿಗೆ ಇರುವಂತೆ ಕರೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ದೇಶಾದ್ಯಂತ ಲಾಕ್ ಡೌನ್ ಘೋಷಿಸಿರುವ ಕಾರಣ ರಾಜ್ಯದೆಲ್ಲೆಡೆ ಬೇಡಿಕೆಯಿಲ್ಲದೆ ರೈತರು ತಾವು ಬೆಳೆದ ತರಕಾರಿಯನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತರುತ್ತಿದ್ದಾರೆ. ಯಾವುದೇ ಮಧ್ಯವರ್ತಿಗಳಿಲ್ಲದೆ ಮಾರಾಟ ಮಾಡಲು ಮುಂದಾಗಿದ್ದು, ಅವರ ಬಳಿ ತರಕಾರಿ ಖರೀದಿಸುವ ಮೂಲಕ ರೈತರನ್ನು ಉಳಿಸೋಣ. ಅವರಿಗೆ ದಕ್ಕಬೇಕಾದ ಹಣವು ಅವರ ಪಾಲಾಗಲಿ ಎಂಬುದು ನನ್ನ ಆಶಯ. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ನಾವೆಲ್ಲರೂ ಕೈ ಜೋಡಿಸಿ ದೇಶದ ಬೆನ್ನೆಲುಬಾದ ರೈತನನ್ನು ರಕ್ಷಿಸೋಣ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಮತ್ತೊಬ್ಬರು ಕಮೆಂಟ್ ಮಾಡಿ, ರೈತರ ವಿಷಯ ಬಂದಾಗ ಬಾಸ್ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತಾರೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ರೈತರ ಮೇಲಿರುವ ಅಭಿಮಾನ ನೋಡಿದರೆ ತುಂಬಾ ಇಷ್ಟವಾಯಿತು. ನಿಮ್ಮ ಅಭಿಮಾನಿಯಾಗಲು ಪುಣ್ಯ ಮಾಡಿದ್ದೇನೆ ಎಂದು ಅವರ ಅಭಿಮಾನಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *