ಉಡುಪಿ: ಚುನಾವಣಾ ಆಯೋಗ ಈ ಬಾರಿ ಚುನಾವಣೆಯನ್ನು ಬಹಳ ಸ್ಟ್ರಿಕ್ಟ್ ಮಾಡಿದೆ. ರಾಜಕಾರಣಿಗಳು ಒಂದು ಹೆಜ್ಜೆ ಎಕ್ಸ್ ಟ್ರಾ ಇಡಬೇಕಾದರೂ ಆಯೋಗದ ಅನುಮತಿ ಬೇಕು. ಇಷ್ಟೆಲ್ಲಾ ಸ್ಟ್ರಿಕ್ಟ್ ಆಗಿರುವ ಆಯೋಗ ಕಳೆದ ಚುನಾವಣೆಯ ಬ್ಯಾನರ್‍ನಲ್ಲೇ ಈ ಬಾರಿಯ ಚುನಾವಣೆಯನ್ನು ಮುಗಿಸುವ ಪ್ರಯತ್ನದಲ್ಲಿದೆ. ಇದರಿಂದ ಕೋಪಗೊಂಡಿರುವ ಸ್ಥಳೀಯರು ಉಡುಪಿಯ ಮಣಿಪಾಲದಲ್ಲಿ ಚುನಾವಣಾ ಆಯೋಗದ ಬ್ಯಾನರ್‌ಗೆ ಮಂಗಳಾರತಿ ಮಾಡಿದ್ದಾರೆ.
ಚುನಾವಣಾ ಆಯೋಗದ ಬ್ಯಾನರ್‌ಗೆ ಮಂಗಳಾರತಿ ಮಾಡುವ ಮೂಲಕ ಸಾರ್ವಜನಿಕರು ಕೋಪ ಹೊರ ಹಾಕಿದ್ದಾರೆ. ಜಿಲ್ಲೆಯಲ್ಲಿ ಅನಗತ್ಯ ಬ್ಯಾನರ್ ಹಾಗೂ ಪತಾಕೆಗಳನ್ನು ತೆಗೆದು ಚುನಾವಣಾ ಆಯೋಗ ಕರ್ತವ್ಯಪರತೆ ಮೆರೆದಿದೆ. ಆದರೆ 2018ರಲ್ಲಿ ಅಳವಡಿಸಿರುವ ಸ್ವತಃ ಆಯೋಗದ ಬ್ಯಾನರ್ ಇನ್ನೂ ತೆರವು ಮಾಡಿಲ್ಲ. 2018 ಚುನಾವಣೆಯಲ್ಲಿ ಮತದಾನ ಮಾಡುವಂತೆ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಫೋಟೋ ಬಳಸಿಕೊಂಡು ಜಾಹಿರಾತು ಹಾಕಲಾಗಿತ್ತು.
ಚುನಾವಣೆ ಮುಗಿದು ವರ್ಷ ಕಳೆದರೂ ಈ ಬ್ಯಾನರ್ ತೆಗೆದಿಲ್ಲ. ಹೊಸ ಬ್ಯಾನರ್ ಹಾಕಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಜನರನ್ನು ತಪ್ಪು ದಾರಿಗೆಳೆಯುವ ಈ ಬ್ಯಾನರ್ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಳೆ ಬ್ಯಾನರ್ ತೆರವು ಮಾಡುವಂತೆ ಅನೇಕ ಬಾರಿ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಹಾಗಾಗಿ ಸ್ಥಳೀಯ ನಾಗರಿಕರು ಈ ಬ್ಯಾನರ್‍ಗೆ ಮಂಗಳಾರತಿ ಎತ್ತಿ, ಪೂಜೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು. ಊರಿಗೆಲ್ಲ ಬುದ್ಧಿ ಹೇಳುವ ತಮ್ಮದೇ ವಿಭಾಗದ ಬ್ಯಾನರ್ ತೆರವು ಮಾಡದ ಚುನಾವಣಾ ಆಯೋಗದ ನಡೆಗೆ ಈ ರೀತಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
https://www.youtube.com/watch?v=KZUZyyptlyc