– ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ಅಣ್ಣ-ತಮ್ಮ ದುರಂತ ಅಂತ್ಯ
ಮ್ಯಾಡ್ರಿಡ್: ಲಿವರ್‌ಪೂಲ್ ಫುಟ್ಬಾಲ್ (Liverpool footballer) ಆಟಗಾರ ಡಿಯೋಗೊ ಜೋಟಾ (Diogo Jota) ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
28 ವಯಸ್ಸಿನ ಜೋಟಾ ಅವರು ಎರಡು ವಾರಗಳ ಹಿಂದಷ್ಟೇ ಮದುವೆಯಾಗಿದ್ದರು. ಉತ್ತರ ಸ್ಪೇನ್‌ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಸ್ಪೇನ್‌ನ ಝಮೋರಾದಲ್ಲಿ ಸ್ಥಳೀಯ ಅಗ್ನಿಶಾಮಕ ಅಧಿಕಾರಿಗಳು, ಅಪಘಾತದ ನಂತರ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಇಬ್ಬರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಜೋಟಾ ಅವರು ಲ್ಯಾಂಬೋರ್ಘಿನಿ ಚಾಲನೆ ಮಾಡುತ್ತಿದ್ದರು. ಪೋರ್ಚುಗೀಸ್ ಗಡಿಯ ಸಮೀಪವಿರುವ ಝಮೊರಾ ಪ್ರಾಂತ್ಯದ ಸೆರ್ನಾಡಿಲ್ಲಾ ಬಳಿ A-52 ನಲ್ಲಿ ಓವರ್‌ಟೇಕ್ ಮಾಡುವಾಗ ಕಾರಿನ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದೆ.
ಡಿಯೋಗೊ ಅವರ ಕಿರಿಯ ಸಹೋದರ, ಪೋರ್ಚುಗೀಸ್ ತಂಡದ ಎಫ್‌ಸಿ ಪೆನಾಫಿಯೆಲ್ ಪರ ಆಡಿದ್ದ ಸಹ ವೃತ್ತಿಪರ ಫುಟ್‌ಬಾಲ್ ಆಟಗಾರ ಆಂಡ್ರೆ ಸಿಲ್ವಾ (26) ಕೂಡ ವಾಹನದಲ್ಲಿದ್ದರು. ಅಪಘಾತದಲ್ಲಿ ಇಬ್ಬರೂ ಸಹೋದರರು ಪ್ರಾಣ ಕಳೆದುಕೊಂಡಿದ್ದಾರೆ.
ಜೂನ್ 22 ರಂದು ಪೋರ್ಟೊದಲ್ಲಿ ಜೋಟಾ, ರೂಟ್ ಕಾರ್ಡೋಸೊ ಅವರನ್ನು ವಿವಾಹವಾದ ಬೆನ್ನಲ್ಲೇ ಈ ಮಾರಕ ಅಪಘಾತ ಸಂಭವಿಸಿದೆ.