ಮೆದುಳಿನಲ್ಲಿ ಈಜಾಡ್ತಿದ್ದ 10 ಸೆಂ.ಮೀ. ಉದ್ದದ ಜೀವಂತ ಕೀಟವನ್ನ ಹೊರ ತೆಗೆದ ವೈದ್ಯರು

Public TV
1 Min Read

ಬೀಜಿಂಗ್: ಮೆದುಳಿನಲ್ಲಿ ಈಜಾಡುತ್ತಿದ್ದ 10 ಸೆಂ.ಮೀ. ಉದ್ದದ ಕೀಟವನ್ನು ವೈದ್ಯರು ಹೊರತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಕೀಟವನ್ನು ಹೊರತೆಗೆದಾಗಲೂ ಅದು ಜೀವಂತವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಆಗ್ನೇಯ ಚೀನಾದ ನಾಂಚಂಗ್ ವೈದ್ಯಕೀಯ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಈ ವಿಶೇಷ ಶಸ್ತ್ರ ಚಿಕಿತ್ಸೆ ನಡೆದಿದೆ. 26 ವರ್ಷದ ಲಿಯು ಎಂಬ ಯುವಕ ಮೂರ್ಛೆ ರೋಗಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ ದಾಖಲಾಗಿದ್ದ. ಯುವಕನನ್ನು ಪರೀಕ್ಷಿಸಿದ ವೈದ್ಯರು, ಆತನನ್ನು ಎಕ್ಸ್-ರೇ ಗೆ ಒಳಪಡಿಸಿದಾಗ ಮೆದುಳಿನಲ್ಲಿ ಕೀಟ ಕಂಡು ಬಂದಿದೆ.

ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಮೆದುಳಿನಲ್ಲಿದ್ದ ಜೀವಂತ ಕೀಟವನ್ನು ಹೊರತೆಗೆದಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಮಾತನಾಡಿದ ಡಾ. ವಾಂಗ್ ಚುನ್ಲಿಯಾಂಗ್, ಯುವಕನ ತಲೆಯಲ್ಲಿ ಕೀಟವನ್ನು ನೋಡಿದಾಗ ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದೇವು. ಹಿರಿಯ ವೈದ್ಯರ ಮಾರ್ಗದರ್ಶನದಲ್ಲಿ ಆಪರೇಷನ್ ನಡೆಸಿ ಜೀವಂತವಾಗಿ ಬಿಳಿ ಬಣ್ಣದ ಕೀಟವನ್ನು ಹೊರತೆಗೆಯಲಾಗಿದೆ ಎಂದು ಸ್ಥಳೀಯ ಪತ್ರಿಕೆಗೆ ತಿಳಿಸಿದ್ದಾರೆ.

ದೇಹ ಸೇರಿದ್ದು ಹೇಗೆ?
ಈ ಕುರಿತು ಪ್ರತಿಕ್ರಿಯಿಸಿರುವ ಶಾಂಘೈನಲ್ಲಿರುವ ನ್ಯೂರೋಮೆಡಿಕಲ್ ಕೇಂದ್ರದ ತಜ್ಞ ವೈದ್ಯರಾದ ಗುವು ಹೋ, ಹಸಿಯಾದ ಅಥವಾ ಬೇಯಿಸದ ಆಹಾರ ಸೇವಿಸುವ ವೇಳೆ ಈ ರೀತಿಯಾದ ಕೀಟಗಳು ದೇಹವನ್ನು ಪ್ರವೇಶಿಸುವ ಸಾಧ್ಯತೆಗಳಿರುತ್ತವೆ. ಮಾಂಸ ಮತ್ತು ಸಮುದ್ರ ಆಹಾರದಲ್ಲಿ ಈ ರೀತಿಯ ಕೀಟಗಳಿರುತ್ತೇವೆ. ಪ್ರತಿಯೊಬ್ಬರು ತಾವು ಸೇವಿಸುವ ಆಹಾರ ಬಗೆಗೆ ಎಚ್ಚರಿಕೆಯಿಂದ ಇರಬೇಕು. ಲಿಯು ದೇಹದಲ್ಲಿ ಸೇರಿದ ಕೀಟ ರಕ್ತದಲ್ಲಿ ತೇಲಾಡುತ್ತಾ ಮೆದುಳು ಸೇರಿದಂತೆ ಇತರ ಭಾಗ ತಲುಪಿದ್ದರಿಂದ ಆತನಿಗೆ ಮೂರ್ಛೆ ರೋಗ ಕಾಣಿಸಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಶಸ್ತ್ರಚಿಕಿತ್ಸೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಲಿಯು, ಇನ್ನು ಮುಂದೆ ಚೆನ್ನಾಗಿ ಬೇಯಿಸಿದ ಶುಚಿ-ರುಚಿಯಾದ ಆಹಾರವನ್ನು ಸೇವಿಸುತ್ತೇನೆ. ಎಲ್ಲರೂ ಸಹ ಬೇಯಿಸಿದ ಆಹಾರ ಸೇವನೆ ಮಾಡೋದು ಒಳ್ಳೆಯದು ಅಂತಾ ಸಲಹೆ ನೀಡಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *