ಹೆದರಬೇಡಿ, ಮನೆಯವರೊಂದಿಗೆ ಕಾಲ ಕಳೆಯರಿ, ನಿಮಗಾಗಿ ಬದುಕುವುದೇ ನನ್ನ ಬದುಕು: ಬಿಎಸ್‍ವೈ

Public TV
3 Min Read

ಬೆಂಗಳೂರು: ಕಳೆದ ಒಂದು ವಾರದಿಂದ ರಾಜ್ಯ ರಾಜಕಾರಣದಲ್ಲಿ ಏರಿಳಿತದಿಂದ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರಲಿಲ್ಲ. ಆದ್ರೆ ಇಂದು ರಾಜೀನಾಮೆ ಬಳಿಕ ಕಾರ್ಯಕರ್ತರನ್ನು ಹುರಿದುಂಬಿಸುವದಕ್ಕಾಗಿ ದೀರ್ಘ ಪತ್ರವೊಂದನ್ನು ಬರೆದಿದ್ದಾರೆ.

ಎಲ್ಲ ಕಾರ್ಯಕರ್ತರು ಹೆದರಬೇಡಿ, ಸದ್ಯಕ್ಕೆ ಎಲ್ಲರೂ ತಾಳ್ಮೆಯಿಂದಿರಿ, ಮನೆಯವರೊಂದಿಗೆ ಕೆಲವು ದಿನಗಳನ್ನು ಸಂತೋಷದಿಂದ ಕಳೆಯಿರಿ. ಮತ್ತೆ ನಾನು ನಿಮ್ಮೊಂದಿಗೆ ಬೆರೆಯುತ್ತೇನೆ. ನಿಮಗಾಗಿ ಬದುಕುವುದೇ ನನ್ನ ಬದುಕು. ಸತ್ಯದ ಕಮಲ, ಸಜ್ಜನರ ಮೊಗದಲ್ಲಿ ನಗು ಎರಡೂ ಅರಳುವ ಆ ಒಂದು ದಿನ ಬರುತ್ತದೆ ಎಂದು ದೀರ್ಘವಾದ ಪತ್ರವೊಂದನ್ನು ಬರೆದಿದ್ದಾರೆ.

ಕಾರ್ಯಕರ್ತರಿಗೆ ಯಡಿಯೂರಪ್ಪ ಬರೆದ ಪತ್ರ ಹೀಗಿದೆ:

ನಿಮಗಾಗಿ ಬದುಕುವುದೇ ನನ್ನ ಬದುಕು!
ನಾವು ಬದುಕುತ್ತಿರುವುದೇ ಪ್ರಜಾಪ್ರಭುತ್ವದಲ್ಲಿ. ಅರ್ಥಾತ್, ಇಲ್ಲಿ ಪ್ರಜೆಗಳೇ, ಅಂದರೆ ನೀವೇ ಪ್ರಭುಗಳು. ನಿಮ್ಮನ್ನು ಬಿಟ್ಟು ಸಮಾಜ ಇಲ್ಲ. ಆದರೆ ಇಂದು ಆ ಪ್ರಜಾಪ್ರಭುತ್ವಕ್ಕೆ ಕೊಡಲಿ ಏಟು ಬಿದ್ದಿದೆ. 104ಕ್ಕಿಂತ 37 ಮತ್ತು 78 ಕ್ಷೇತ್ರಗಳ ನಿಮ್ಮ ಪ್ರತಿನಿಧಿಗಳೇ ನಿಮ್ಮನ್ನಾಳಲು ತಯಾರಾಗಿದ್ದಾರೆ. ಜನಾದೇಶಕ್ಕೆ, ಜನರ ಅಭಿಪ್ರಾಯಕ್ಕೆ ಬೆಲೆ ಇಲ್ಲ, ಕೇವಲ ಸಂಖ್ಯೆಗಳಿಗಷ್ಟೇ ಮಹತ್ವ ಎಂದು ಸಾಬೀತು ಮಾಡಿದ್ದಾರೆ. ಇದರಿಂದ ಒಂದು ದಕ್ಷ, ಸುಭದ್ರ, ಪಾರದರ್ಶಕ, ಪ್ರಾಮಾಣಿಕ ಆಡಳಿತವನ್ನು ನೀಡುವ ಅವಕಾಶವನ್ನು ನಾನು ಕಳೆದುಕೊಂಡಿದ್ದೇನೆ.

ಎಲ್ಲರಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಜನರ ಪ್ರೀತಿ ಗೆದ್ದ ಪಕ್ಷವಾಗಿ, ಸರ್ಕಾರವನ್ನು ರಚಿಸಬೇಕಾದ್ದು ನಮ್ಮ ಜವಾಬ್ದಾರಿ. ನಾವು ಏಕೆ ಯಶಸ್ವಿಯಾಗಲಿಲ್ಲವೆಂದು ಜಗತ್ತಿಗೇ ತಿಳಿದಿದೆ. ಜನರಿಂದ ತಿರಸ್ಕೃತಗೊಂಡ ಎರಡು ಪಕ್ಷಗಳು ನಮ್ಮ ವಿರುದ್ಧ ಪಿತೂರಿ ಮಾಡಿವೆ.

ಆದರೆ ವಾಸ್ತವವಾಗಿ ನಮ್ಮ ಸ್ಥಾನ ಗಳಿಕೆ 104ಕ್ಕೆ ಏರಿದೆ. ಕಾಂಗ್ರೆಸ್ ಬಲವು 122ರಿಂದ 78ರವರೆಗೆ ಇಳಿದಿದೆ ಮತ್ತು ಜೆಡಿಎಸ್ 40 ರಿಂದ 37ಕ್ಕೆ ಇಳಿದಿದೆ. ಇದು ಜನರು ಯಾರ ಪರ ಇದ್ದಾರೆ ಎಂದು ಧ್ವನಿವರ್ಧಕದಲ್ಲಿ ಜಗತ್ತಿಗೆ ಕೂಗಿ ಹೇಳಿದಂತಿದೆ. ಈ ಸಮಾಜದ ಪ್ರಭುಗಳೇ ಈ ತೀರ್ಪನ್ನು ಕೊಟ್ಟಿರುವುದು.

ನಾನಿನ್ನೂ ದಣಿದಿಲ್ಲ. ದಣಿಯುವುದೂ ಇಲ್ಲ. ಧಣಿ ಎಂದು ನೀವು ಕರೆದಮೇಲೆ ನಿಮ್ಮ ಜೊತೆ ನಿಮ್ಮ ಧ್ವನಿಯಾಗಿ ಇರುವುದೇ ನನ್ನ ಕಾಯಕ. ಈ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಲು ಸಾಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ನನಗೆ ಸಹಿಸಲಾಗಲಿಲ್ಲ. ನಮಗೆ ಅಧಿಕಾರವಿಲ್ಲದಿದ್ದರೂ, ರೈತರಿಗೇನಾದರೂ ಆದರೆ ಈಗಲೂ ಅದೇ ಆಕ್ರೋಶ ನನ್ನನ್ನು ಆವರಿಸುತ್ತದೆ. ನಮ್ಮ ರೈತರು ಗರ್ವದಿಂದ ‘ನಾನು ರೈತ’ ಎಂದು ಹೇಳಿಕೊಳ್ಳುವ ಹಾಗೆ ಮಾಡುವುದು ನನ್ನ ಸರ್ಕಾರದ ಆಶಯವಿತ್ತು. ಈಗಲೂ ಹಾಗೇ ಇದೆ. ನಾವು ಖುದ್ದು ಕೆಲಸ ಮಾಡಲಾಗದೇ ಇದ್ದರೂ ವಿರೋಧ ಪಕ್ಷದಲ್ಲಿ ಕುಳಿತು ಮಾಡಿಸುತ್ತೇವೆ. ಏಕೆಂದರೆ, ನಾನು ನಿಮ್ಮವನು, ನಿಮ್ಮಲ್ಲಿ ಒಬ್ಬನು.

ಯಾವ ಜನ್ಮದ ಪುಣ್ಯವೋ ಏನೋ, ನಿಮ್ಮಂಥ ಕಾರ್ಯಕರ್ತರು, ಬೆಂಬಲಿಗರನ್ನು, ಮನತುಂಬಿ ಹರಸುವ ಜನರನ್ನು ನಾನು ಪಡೆದಿದ್ದೇನೆ. ನಿಮ್ಮ ಪ್ರೀತಿಯನ್ನು ಸಂಪಾದಿಸಿದ್ದೇನೆ. ಗುಮಾಸ್ತನನ್ನು ನಾಯಕನನ್ನಾಗಿ ಮಾಡಿದವರು ನೀವು. ಈಗಲೂ ಅಷ್ಟೇ, ನೀವು ನನ್ನ ಕೈ ಬಿಟ್ಟಿಲ್ಲ. ಇನ್ನಷ್ಟು ಬಲಪಡಿಸಿದ್ದೀರಿ, ಗೆಲ್ಲಿಸಿದ್ದೀರಿ. ಆದರೆ ಪ್ರತಿಪಕ್ಷಗಳ ಪ್ರಜಾಪ್ರಭುತ್ವ ವಿರೋಧಿ ತಂತ್ರ, ಕುತಂತ್ರಗಳಿಂದ ಸರ್ಕಾರ ರಚಿಸಲಾಗಲಿಲ್ಲ. ಆದರೇನಂತೆ? ನಾನು ಬದುಕಿರುವವರೆಗೂ ಹೋರಾಟ ಮಾಡುತ್ತಲೇ ಇರುತ್ತೇನೆ. ರೈತರಿಗಾಗಿ ಶ್ರಮಿಸುತ್ತಲೇ ಇರುತ್ತೇನೆ.

ಬಂಧುಗಳೇ, ನೀವೆಲ್ಲ ಕೆಲ ತಿಂಗಳು ಮನೆ ಬಿಟ್ಟು ಬಿಜೆಪಿ ಪರವಾಗಿ ಕೆಲಸ ಮಾಡಿ ಎಂದು ನಾನು ಪರಿವರ್ತನಾ ಯಾತ್ರೆಯಲ್ಲಿ ಕೊಟ್ಟ ಕರೆಗೆ ನೀವೆಲ್ಲ ಬಂದಿದ್ದೀರ, ದುಡಿದಿದ್ದೀರ. ಅಂದು ನೀವು ಪಟ್ಟ ಶ್ರಮ, ಇಂದು ನೀವು ಹಾಕಿದ ಕಣ್ಣೀರು ಯಾವುದೂ ವ್ಯರ್ಥವಾಗುವುದಕ್ಕೆ ನಾನು ಬಿಡುವುದಿಲ್ಲ. ನೀವ್ಯಾರೂ ಎದೆಗುಂದ ಬೇಡಿ. ನೀವು ಧೈರ್ಯದಿಂದ ಇದ್ದರೆ ನನ್ನ ಧೈರ್ಯ ನೂರ್ಮಡಿಯಾಗುತ್ತದೆ. ವಿಧಾನಸಭೆಯಲ್ಲಿ ನಾನು ಹೇಳಿದ ಹಾಗೆ, ಬದುಕುವುದಿಲ್ಲ ಎಂದು ದಯನೀಯವಾಗಿ ಅಧಿಕಾರ ಬೇಡುವವನಲ್ಲ ನಿಮ್ಮ ಯಡಿಯೂರಪ್ಪ. ಬದುಕಿರುವವರೆಗೂ ನಿಮಗಾಗಿ, ನಿಮ್ಮ ಸೇವೆಗಾಗಿ ಪರಿಶ್ರಮ ಪಡುವವನು ನಿಮ್ಮ ಯಡಿಯೂರಪ್ಪ. ಬದುಕಿರುವವರೆಗೂ ನಿಮ್ಮ ಅಭಿವೃದ್ಧಿಗಾಗಿ ಧ್ವನಿ ಎತ್ತುತ್ತೇನೆ ಎನ್ನುವವನು ಯಡಿಯೂರಪ್ಪ.

ಸಧ್ಯಕ್ಕೆ ಸ್ವಲ್ಪ ತಾಳ್ಮೆಯಿಂದಿರಿ. ಮನೆಯವರೊಂದಿಗೆ ಕಾಲ ಕಳೆಯಿರಿ. ಮತ್ತೆ ನಾನು ನಿಮ್ಮೊಂದಿಗೆ ಬರುತ್ತೇನೆ. ಸ್ವಸ್ಥ, ಸದೃಢ, ಸಮರ್ಥ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಒಟ್ಟಾಗಿ ಸಾಗೋಣ. ಮೊದಲೇ ಹೇಳಿದಂತೆ ನಾನು ದಣಿದಿಲ್ಲ. ನಿಮಗಾಗಿ ಕೆಲಸ ಮಾಡುವುದೇ ನನ್ನ ಜೀವನದ ಧ್ಯೇಯವಾಗಿದೆ.

ಹೆದರದಿರಿ. ನನ್ನ ಚಿಂತೆ ಬಿಡಿ. ಆ ಒಂದು ದಿನ ಬರುತ್ತದೆ. ಸತ್ಯದ ಕಮಲ, ಸಜ್ಜನರ ಮೊಗದಲ್ಲಿ ನಗು ಎರಡೂ ಅರಳುತ್ತದೆ. ಬಿಜೆಪಿ ಬರಲಿದೆ.

ನಿಮ್ಮವ,
ಬಿ. ಎಸ್. ಯಡಿಯೂರಪ್ಪ

Share This Article
Leave a Comment

Leave a Reply

Your email address will not be published. Required fields are marked *