ಫಿಕ್ಸಿಂಗ್ ನಡೆಸಿ ನಿಷೇಧಕ್ಕೊಳಗಾದ ಪಾಕ್ ಕ್ರಿಕೆಟಿಗರು ಇವರೇ!

Public TV
3 Min Read

ಫಿಕ್ಸಿಂಗ್‍ಗೂ ಪಾಕಿಸ್ತಾನಕ್ಕೂ ಬಿಡದ ನಂಟು..!

ಇಸ್ಲಾಮಾಬಾದ್: ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಎಂದಾಕ್ಷಣ ಪಾಕಿಸ್ತಾನ ಕ್ರಿಕೆಟ್ ಆಟಗಾರರ ಹೆಸರು ನೆನಪಾಗುತ್ತದೆ. ಕಳೆದ 2 ದಶಕಗಳಲ್ಲಿ ಸರಿ ಸುಮಾರು 8 ಮಂದಿ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಮ್ಯಾಚ್ ಫಿಕ್ಸಿಂಗ್ ಕಾರಣದಿಂದ ನಿಷೇಧವನ್ನು ಎದುರಿಸಿದ್ದಾರೆ. ಈಗಲೂ ಕೂಡ ಪಾಕ್ ಕ್ರಿಕೆಟಿಗರೊಂದಿಗೆ ಫಿಕ್ಸಿಂಗ್ ನಡೆಸಲು ಬುಕ್ಕಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದರೇ ಆಟಗಾರರಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸ್ಪಷ್ಟವಾಗುತ್ತದೆ.

ಇತ್ತೀಚೆಗೆ ಪಾಕಿಸ್ತಾನ ಸೂಪರ್ ಲೀಗ್‍ಗೂ ಮುನ್ನ ಪಾಕಿಸ್ತಾನ ಅನುಭವಿ ಆಟಗಾರ ಉಮರ್ ಅಕ್ಮಲ್‍ರನ್ನು ಫಿಕ್ಸಿಂಗ್ ಮಾಡಲು ಬುಕ್ಕಿಗಳು ಸಂಪರ್ಕಿಸಿದ್ದರು. ಪರಿಣಾಮ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಕ್ಮಲ್‍ಗೆ ಮೂರು ವರ್ಷ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ಅಮಾನತು ಮಾಡಿದೆ. ಇದೇ ವೇಳೆ ಫಿಕ್ಸಿಂಗ್ ಕಾರಣದಿಂದ ನಿಷೇಧಕ್ಕೊಳಗಾದ ಆಟಗಾರರ ಪಟ್ಟಿ ಇಂತಿದೆ.

ಸಲೀಂ ಮಲಿಕ್ (2000): ಮ್ಯಾಚ್ ಫಿಕ್ಸಿಂಗ್ ಕಾರಣದಿಂದ ಮೊದಲ ಬಾರಿಗೆ ಪಾಕ್ ಕ್ರಿಕೆಟ್ ಇತಿಹಾಸದಲ್ಲಿ ನಿಷೇಧಕ್ಕೆ ಒಳಗಾದ ಆಟಗಾರ ಸಲೀಂ ಮಲಿಕ್. ಆ ವೇಳೆ ಆತನ ಮೇಲೆ ಜೀವಮಾನದ ಅಮಾನತು ವಿಧಿಸಲಾಗಿತ್ತು. ಆದರೆ ಕೆಲ ಸಮಯದ ಬಳಿಕ ಆತನ ಮೇಲಿನ ಅಮಾನತು ವಾಪಸ್ ಪಡೆಯಲಾಗಿತ್ತು. ಆದರೆ 2008ರಲ್ಲಿ ಮತ್ತೊಮ್ಮೆ ಫಿಕ್ಸಿಂಗ್ ನಡೆಸಿ ಸಲೀಂ ಸಿಕ್ಕಿಹಾಕಿಕೊಂಡಿದ್ದ.

ಅಟಾ-ಉರ್-ರೆಹಮಾನ್ (2000): ಫಿಕ್ಸಿಂಗ್ ನಡೆಸಲು ಬುಕ್ಕಿಗಳೊಂದಿಗೆ ಮಾತುಕತೆ ನಡೆಸಿದ ಕಾರಣದಿಂದ 2000ರಲ್ಲಿ ಆತನ ವಿರುದ್ಧ ಜೀವಮಾನದ ಅಮಾನತು ವಿಧಿಸಲಾಗಿತ್ತು. ಆದರೆ 2006 ರಲ್ಲಿ ಅಮಾನತು ಹಿಂಪಡೆಯಲಾಗಿತ್ತು.

ಮೊಹಮ್ಮದ್ ಅಮಿರ್ (2011): ಇಂಗ್ಲೆಂಡ್ ಟೂರ್ನಿ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ನೋ ಬಾಲ್ ಎಸೆಯಲು ಬುಕ್ಕಿಗಳೊಂದಿಗೆ ಸ್ಪಾಟ್ ಫಿಕ್ಸಿಂಗ್ ಮಾಡಿಕೊಳ್ಳಲಾಗಿತ್ತು. 2010 ರಲ್ಲಿ ಅಮಿರ್ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದ. ಪರಿಣಾಮ 2011ರಲ್ಲಿ 5 ವರ್ಷ ಅಮಾನತು ಮಾಡಲಾಗಿತ್ತು. ಅಮಾನತು ಅಂತ್ಯವಾದ ಬಳಿಕ 2016ರಲ್ಲಿ ಮತ್ತೆ ಅಮಿರ್ ಪಾಕ್ ತಂಡಕ್ಕೆ ರೀ ಎಂಟ್ರಿ ಕೊಟ್ಟಿದ್ದ.

ಮೊಹಮ್ಮದ್ ಆಸಿಫ್ (2011): ಸ್ಪಾಟ್ ಫಿಕ್ಸಿಂಗ್ ಭಾಗವಾಗಿ ನೋ ಬಾಲ್ ಎಸೆದಿದ್ದ ಆಸಿಫ್‍ಗೆ 7 ವರ್ಷ ಅಮಾನತು ವಿಧಿಸಿಲಾಗಿತ್ತು. ಆದರೆ ಆ ಬಳಿಕ ಅಮಾನತು ಶಿಕ್ಷೆಯನ್ನು 5 ವರ್ಷಕ್ಕೆ ಇಳಿಸಲಾಗಿತ್ತು. ಅಲ್ಲದೇ ವಿಚಾರಣೆ ಕಾರಣದಿಂದ ಆಸಿಫ್ 12 ತಿಂಗಳು ಜೈಲು ವಾಸ ಅನುಭವಿಸಿದ್ದ.

ಸಲ್ಮಾನ್ ಭಟ್ (2011): 2010ರ ಇಂಗ್ಲೆಂಡ್ ಟೂರ್ನಿ ಭಾಗವಾಗಿ ನಡೆದಿದ್ದ ಟೂರ್ನಿಯಲ್ಲಿ ಅಮಿರ್, ಆಸಿಫ್‍ರೊಂದಿಗೆ ಭಟ್ ಕೂಡ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದ. ಪರಿಣಾಮ ಜೀವಮಾನ ನಿಷೇಧಕ್ಕೆ ಒಳಗಾಗಿದ್ದ ಭಟ್‍ಗೆ ಆ ಬಳಿಕ ಶಿಕ್ಷೆಯನ್ನು 5 ವರ್ಷಕ್ಕೆ ಇಳಿಸಲಾಗಿತ್ತು.

ಡ್ಯಾನಿಶ್ ಕನೇರಿಯಾ (2010): ಪಾಕಿಸ್ತಾನ ಪರ ಆಡಿದ ಮೊದಲ ಹಿಂದೂ ಎಂಬ ದಾಖಲೆ ಬರೆದಿದ್ದ ಡ್ಯಾನಿಶ್ ಕನೇರಿಯಾ ಇಂಗ್ಲೆಂಡ್‍ನಲ್ಲಿ ನಡೆದಿದ್ದ ಕೌಂಟಿ ಕ್ರಿಕೆಟ್ ಟೂರ್ನಿ ಸಂದರ್ಭದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದ. ಪರಿಣಾಮ ಆತನ ವಿರುದ್ಧ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಜೀವಮಾನ ನಿಷೇಧ ವಿಧಿಸಿತ್ತು. 2018 ರಲ್ಲಿ ಸ್ಪಾಟ್ ಫಿಕ್ಸಿಂಗ್ ಕುರಿತು ಮಾತನಾಡಿದ್ದ ಕನೇರಿಯಾ ಫಿಕ್ಸಿಂಗ್ ನಡೆಸಿದ್ದಾಗಿ ಒಪ್ಪಿಕೊಂಡಿದ್ದ.

ಶಾರ್ಜೀಲ್ ಖಾನ್ (2018): ಪಾಕ್ ತಂಡದ ಆರಂಭಿಕ ಆಟಗಾರನಾಗಿದ್ದ ಶಾರ್ಜೀಲ್ ಖಾನ್ ಪಾಕ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ಪಾಕಿಸ್ತಾನ್ ಸೂಪರ್ ಲೀಗ್‍ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿ ಸಿಕ್ಕಿಹಾಕಿಕೊಂಡಿದ್ದ. ಪರಿಣಾಮ 5 ವರ್ಷ ಆತನನ್ನು ಅಮಾನತು ಮಾಡಲಾಗಿದೆ.

ಉಮರ್ ಅಕ್ಮಲ್ (2020): ಪಾಕಿಸ್ತಾನ ಸೂಪರ್ ಲೀಗ್‍ನಲ್ಲಿ ಫಿಕ್ಸಿಂಗ್ ನಡೆಸಲು ಬುಕ್ಕಿಗಳು ಉಮರ್ ಅಕ್ಮಲ್‍ನನ್ನು ಸಂಪರ್ಕಿಸಿದ್ದರು. ಆದರೆ ಈ ವಿಚಾರವನ್ನು ಆತ ಪಾಕ್ ಕ್ರಿಕೆಟ್ ಬೋರ್ಡಿಗೆ ತಿಳಿಸಿರಲಿಲ್ಲ. ಪರಿಣಾಮ ಪಾಕ್ ಕ್ರಿಕೆಟ್ ಬೋರ್ಡಿನ ಭ್ರಷ್ಟಾಚಾರ ನಿಗ್ರಹ ಸಮಿತಿ ಉಮರ್ ಅಕ್ಮಲ್‍ಗೆ 3 ವರ್ಷ ನಿಷೇಧ ವಿಧಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *