ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದಿಂದ ಲಿಂಗಾಯತ ಸಮುದಾಯಕ್ಕೆ ನಿರಾಸೆ

Public TV
1 Min Read

ಬೆಂಗಳೂರು: ಒಂದು ಕಡೆ ಹಳೆ ಮೈಸೂರು ಭಾಗದವರಿಗಷ್ಟೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ ಅನ್ನೋ ಟೀಕೆಗಳ ಮಧ್ಯೆ ಲಿಂಗಾಯತರಿಗಾಗಿಯೇ ಪ್ರತ್ಯೇಕವಾಗಿ ಎರಡನೇ ಡಿಸಿಎಂ ಹುದ್ದೆ ಸೃಷ್ಟಿಸುವ ತಂತ್ರವನ್ನೇ ಕಾಂಗ್ರೆಸ್ ಕೈ ಬಿಟ್ಟಿದೆ.

16 ಶಾಸಕರಿರುವ ಲಿಂಗಾಯತ ಸಮುದಾಯಕ್ಕೆ 4 ಸಚಿವ ಸ್ಥಾನ ಕೊಡಲು ತೀರ್ಮಾನಿಸಿದೆ. ಲಿಂಗಾಯತ ಸಮುದಾಯದ ಬೇಡಿಕೆಯಂತೆ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡಿದ್ದರೂ ಅದು ಪಕ್ಷಕ್ಕೇ ಮುಳುವಾಯ್ತು ಅನ್ನೋದು ಕಾಂಗ್ರೆಸ್ ವಾದವಂತೆ. ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಂದು ಉಪ ಮುಖ್ಯಮಂತ್ರಿ ಸ್ಥಾನದಲ್ಲಿ ಲಿಂಗಾಯತ ಮುಖಂಡರೊಬ್ಬರು ಬರುತ್ತಾರೆಂದು ನಿರೀಕ್ಷೆಯಲಿದ್ದ ಸಮುದಾಯಕ್ಕೆ ಭಾರೀ ನಿರಾಸೆಯಾಗಿದೆ.

ಡಿಸಿಎಂ ಹುದ್ದೆಗಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಮತ್ತು ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನಡುವೆ ಪೈಪೋಟಿ ನಡೆದಿತ್ತು. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಎಲ್ಲಾ ಅಂಶಗಳನ್ನು ಅಳೆದು ತೂಗಿ ಎರಡನೇ ಡಿಸಿಎಂ ಹುದ್ದೆಯ ಸೃಷ್ಟಿಯ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಜೆಡಿಎಸ್-ಕಾಂಗ್ರೆಸ್ ನಡುವೆ ಖಾತೆ ಹಂಚಿಕೆಯೇ ಕಗ್ಗಂಟಾಗಿದೆ. ಇತ್ತ ಕಾಂಗ್ರೆಸ್‍ನಲ್ಲಿ ಯಾರಿಗೆ ಸಚಿವ ಸ್ಥಾನ ಕೊಡ್ಬೇಕು ಅನ್ನೋ ಲೆಕ್ಕಾಚಾರ ನಡೆಯುತ್ತಿದೆ. ಈ ಹಿಂದೆ ಸಚಿವರಾಗಿದ್ದ ಹಿರಿಯ ಶಾಸಕರಿಗೆ ಈ ಬಾರಿ ಮಂತ್ರಿ ಸ್ಥಾನದ ಭಾಗ್ಯವಿಲ್ವಂತೆ. ಎರಡ್ಮೂರು ಬಾರಿ ಗೆದ್ದು ಸಚಿವರಾಗದ ಶಾಸಕರ ಅದೃಷ್ಟ ಖುಲಾಯಿಸಲಿದ್ಯಂತೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎರಡು ಸೂತ್ರ ಮುಂದಿಟ್ಟಿದ್ರಂತೆ.
1. ಐದಾರು ಮಂದಿ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಿ ಉಳಿದ ಮಂತ್ರಿ ಸ್ಥಾನಗಳನ್ನು ಕಿರಿಯರಿಗೆ ನೀಡುವುದು. ಉಳಿದ ಹಿರಿಯ ಶಾಸಕರು, ಮಾಜಿ ಸಚಿವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವುದು.

2. ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಮುಖ್ಯವಾಗಿರೋ ಕಾರಣ ಕಿರಿಯ ಶಾಸಕರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ಒಪ್ಪಿಸಿ ಹಿರಿಯ ಶಾಸಕರನ್ನಷ್ಟೇ ಮಂತ್ರಿ ಮಾಡೋದು.

ಆದ್ರೆ ರಾಜ್ಯ ಕಾಂಗ್ರೆಸ್ ನಾಯಕರು ಮೊದಲನೇ ಸೂತ್ರವನ್ನು ಒಪ್ಪಿಕೊಂಡಿದ್ದಾರಂತೆ.

Share This Article
Leave a Comment

Leave a Reply

Your email address will not be published. Required fields are marked *