ಗಾಯಕ ಜುಬೀನ್ ಗಾರ್ಗ್ ಅಂತಿಮ ಯಾತ್ರೆ ಲಿಮ್ಕಾ ದಾಖಲೆಗೆ ಸೇರ್ಪಡೆ

Public TV
2 Min Read

ಅತೀ ಹೆಚ್ಚು ಜನ ಭಾಗಿಯಾದ ವಿಶ್ವದ 4ನೇ ಅಂತಿಮ ಯಾತ್ರೆ

ದಿಸ್ಪುರ್: ಪ್ರಸಿದ್ಧ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ (Zubeen Garg) ಅವರ ಅಂತಿಮ ಯಾತ್ರೆ ಸೆ.21ರಂದು ಗುವಾಹಟಿಯಲ್ಲಿ ನಡೆಯಿತು. ಈ ವೇಳೆ ಲಕ್ಷಾಂತರ ಜನರು ಭಾಗಿಯಾಗಿದ್ದರು. ಈ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ಜನರು ಸೇರಿದ 4ನೇ ಅಂತಿಮ ಯಾತ್ರೆ ಎಂದು ದಾಖಲೆ ನಿರ್ಮಿಸಿ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ( Limca Book of Records) ಸೇರ್ಪಡೆಯಾಗಿದೆ.

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಪ್ರಕಾರ, ಗಾರ್ಗ್ ಅವರ ಅಂತಿಮ ಯಾತ್ರೆ ವೇಳೆ ಲಕ್ಷಾಂತರ ಜನರು ಭಾಗಿಯಾಗಿದ್ದರು. ಈ ಮೂಲಕ ಮೈಕೆಲ್ ಜಾಕ್ಸನ್, ಪೋಪ್ ಫ್ರಾನ್ಸಿಸ್, ರಾಜಕುಮಾರಿ ಡಯಾನಾ ಮತ್ತು ರಾಣಿ ಎಲಿಜಬೆತ್ ಅವರಿಗೆ ನೀಡಿದಂತೆ ಇದು ಕೂಡ ಸ್ಮರಣೀಯ ವಿದಾಯ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಗಾಯಕ ಜುಬೀನ್ ಗಾರ್ಗ್ ಸಾವು | ಕಾರ್ಯಕ್ರಮ ಆಯೋಜಕರ ವಿರುದ್ಧ FIR – ತನಿಖೆಗೆ ಮುಂದಾದ ಅಸ್ಸಾಂ ಸರ್ಕಾರ

ಅಂತಿಮ ಯಾತ್ರೆ ವೇಳೆ ಜನಸಾಗರವೇ ಹರಿದುಬಂದಿತ್ತು. ಅಭಿಮಾನಿಗಳು ಕಿಕ್ಕಿರಿದು ಅವರ ಮುಖವನ್ನು ಕೊನೆ ಬಾರಿ ನೋಡಲು ಕಾಯುತ್ತಿದ್ದರು. ಮೆರವೆಣಿಗೆಯಲ್ಲಿ ಸಂಪೂರ್ಣವಾಗಿ ಅವರ ಹಾಡುಗಳ ಸುರಿಮಳೆಯೇ ಸುರಿಯುವಂತೆ ಭಾಸವಾಗುತ್ತಿತ್ತು. ಕಿಂಗ್ ಆಫ್ ಹಮ್ಮಿಂಗ್ ಎಂದಲೇ ಹೆಸರು ಪಡೆದಿದ್ದ ಇವರ ಅಂತಿಮ ಯಾತ್ರೆ ಅಸ್ಸಾಮಿ ಸಂಗೀತ ಯುಗದ ಅಂತ್ಯವೆಂಬಂತೆ ಕಾಣುತ್ತಿತ್ತು.

1972ರಲ್ಲಿ ಜನಿಸಿದ ಗಾರ್ಗ್ ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಸಂಗೀತದಲ್ಲಿ ತಮ್ಮ ಹೆಸರನ್ನು ಅಚ್ಚಳಿಯಂತೆ ಮಾಡಿದ್ದಾರೆ. ಅಸ್ಸಾಂ ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈಶಾನ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಸಿಂಗಾಪುರಕ್ಕೆ ತೆರಳಿದ್ದಾಗ ಜುಬೀನ್ ಗಾರ್ಗ್ ಅವರು ಸ್ಕೂಬಾ ಡೈವಿಂಗ್ ವೇಳೆ ಅವಘಡಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದರು. ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು.

ಜುಬೀನ್ ಗರ್ಗ್ ಅಸ್ಸಾಮಿ ಮತ್ತು ಹಿಂದಿ ಮಾತ್ರವಲ್ಲದೆ, ಬಂಗಾಳಿ, ಮರಾಠಿ, ತಮಿಳು, ತೆಲುಗು ಮತ್ತು ನೇಪಾಳಿ ಸೇರಿದಂತೆ ಹಲವು ಭಾಷೆಗಳಿಗೆ ಹಾಡಿದ್ದಾರೆ. ತಮ್ಮ ಮೂರನೇ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. ಅವರ ಮೊದಲ ಆಲ್ಬಂ ‘ಅನಾಮಿಕಾ’ 1992 ರಲ್ಲಿ ಬಿಡುಗಡೆಯಾಯಿತು. ‘ಮಾಯಾ’, ‘ಜುಬೀನೋರ್ ಗಾನ್’, ‘ಕ್ಸಾಬ್ಡಾ’, ‘ಪಾಖಿ’, ‘ಶಿಶು’, ‘ಜಂತ್ರ’ ಅವರ ಅತ್ಯಂತ ಪ್ರೀತಿಯ ಅಸ್ಸಾಮೀಸ್ ಆಲ್ಬಂಗಳಲ್ಲಿ ಕೆಲವು. ಅವರು ‘ದಿಲ್ ಸೆ’, ‘ವಾಸ್ತವ್’, ‘ಫಿಜಾ’, ‘ಅಶೋಕ’, ‘ಕಾಂಟೆ’, ‘ಗ್ಯಾಂಗ್‌ಸ್ಟರ್’, ‘ಕ್ರಿಶ್ 3’ ಮತ್ತು ಇನ್ನೂ ಹೆಚ್ಚಿನ ಹಿಂದಿ ಚಿತ್ರಗಳಿಗೂ ಹಾಡಿದ್ದಾರೆ. ಆದಾಗ್ಯೂ, ಗ್ಯಾಂಗ್‌ಸ್ಟರ್‌ಗಾಗಿ ಅವರು ಹಾಡಿದ್ದ ‘ಯಾ ಅಲಿ’ ಹಾಡು ಅವರಿಗೆ ಅಸ್ಸಾಂನ ಹೊರಗೂ ಜನಪ್ರಿಯತೆ ತಂದುಕೊಟ್ಟಿತು.ಇದನ್ನೂ ಓದಿ: ಸ್ಕೂಬಾ ಡೈವಿಂಗ್‌ ವೇಳೆ ಬಾಲಿವುಡ್‌ನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು

Share This Article