ಅಯೋಧ್ಯೆಯಂತೆ ಗುಜರಾತ್‌ನಲ್ಲೂ ಬಿಜೆಪಿ ಸೋಲಿಸುತ್ತೇವೆ: ರಾಹುಲ್‌ ಗಾಂಧಿ ಶಪಥ

Public TV
2 Min Read

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯನ್ನು (Ayodhya) ಬಿಜೆಪಿಯನ್ನು ಸೋಲಿಸಿದಂತೆ, ಮುಂಬರುವ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಸೋಲಿಸಲಾಗುವುದು ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ತಿಳಿಸಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕರು ಈ ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ನಮಗೆ ಬೆದರಿಕೆ ಹಾಕಿ, ನಮ್ಮ ಕಚೇರಿಗೆ ಹಾನಿ ಮಾಡುವ ಮೂಲಕ ಸವಾಲು ಹಾಕಿದ್ದಾರೆ. ನಮ್ಮ ಕಚೇರಿಗೆ ಹಾನಿ ಮಾಡಿದಂತೆ ಅವರ ಸರ್ಕಾರವನ್ನು ಒಡೆಯಲು ಹೊರಟಿದ್ದೇವೆ ಎಂದು ನಾನು ನಿಮಗೆ ಹೇಳುತ್ತೇನೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತದೆ. ನರೇಂದ್ರ ಮೋದಿಯನ್ನು ಸೋಲಿಸುತ್ತದೆ ಎಂಬುದನ್ನು ಬರೆದಿಟ್ಟುಕೊಳ್ಳಿ. ನಾವು ಅಯೋಧ್ಯೆಯಲ್ಲಿ ಮಾಡಿದಂತೆ ಗುಜರಾತ್‌ನಲ್ಲಿ ಬಿಜೆಪಿ ಸೋಲಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜು.23 ರಂದು ʼಮೋದಿ 3.0ʼ ಬಜೆಟ್‌ ಮಂಡನೆ

ಕಾಂಗ್ರೆಸ್ ಗುಜರಾತ್ ಅನ್ನು ಗೆಲ್ಲುತ್ತದೆ. ರಾಜ್ಯದಿಂದ ಹೊಸ ಆರಂಭವನ್ನು ಮಾಡುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಅಹಮದಾಬಾದ್‌ನ ಪಾಲ್ಡಿ ಪ್ರದೇಶದಲ್ಲಿ ಜುಲೈ 2 ರಂದು ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಚೇರಿಯಾದ ರಾಜೀವ್ ಗಾಂಧಿ ಭವನದ ಹೊರಗೆ ಬಿಜೆಪಿಯ ಯುವ ಘಟಕದ ಸದಸ್ಯರು, ಹಿಂದೂಗಳ ಬಗ್ಗೆ ರಾಹುಲ್‌ ಗಾಂಧಿ ಹೇಳಿಕೆಯನ್ನು ವಿರೋಧಿಸಲು ಜಮಾಯಿಸಿದ್ದರು. ಆಗ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸದಸ್ಯರ ನಡುವೆ ನಡೆದ ಘರ್ಷಣೆಯನ್ನು ರಾಹುಲ್‌ ಗಾಂಧಿ ಇದೇ ವೇಳೆ ಉಲ್ಲೇಖಿಸಿದ್ದರು.

ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯ ಫೈಜಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದರು. ಈ ವಿಚಾರವಾಗಿ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೀರ್ತಿ ಚಕ್ರ; ಪತಿಯ ಮರಣೋತ್ತರ ಪ್ರಶಸ್ತಿ ಸ್ವೀಕರಿಸುವಾಗ ಕ್ಯಾ.ಅನ್ಶುಮನ್‌ ಸಿಂಗ್‌ ಪತ್ನಿ ಭಾವುಕ

ರಾಮಮಂದಿರ ಉದ್ಘಾಟನೆಗೆ ಒಬ್ಬನೇ ಒಬ್ಬ ಸ್ಥಳೀಯ ವ್ಯಕ್ತಿಯನ್ನು ಆಹ್ವಾನಿಸದಿರುವುದನ್ನು ಕಂಡು ಅಯೋಧ್ಯೆಯ ಜನರು ಕೋಪಗೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಕೂಡ ಅಯೋಧ್ಯೆಯಿಂದಲೇ ಸ್ಪರ್ಧಿಸಲು ಬಯಸಿದ್ದರು. ಆದರೆ ಕ್ಷೇತ್ರದ ಸರ್ವೇ ನಡೆಸಿದವರು, ಸ್ಪರ್ಧೆ ಮಾಡದಂತೆ ತಿಳಿಸಿದ್ದಾರೆ. ನೀವು ಸ್ಪರ್ಧಿಸಿದರೆ ಸೋಲುತ್ತೀರಿ. ನಿಮ್ಮ ರಾಜಕೀಯ ಜೀವನ ಕೊನೆಗೊಳ್ಳುತ್ತದೆ ಎಂದು ಸಲಹೆ ನೀಡಿದ್ದರು ಎಂದು ವಿಪಕ್ಷ ನಾಯಕ ತಿಳಿಸಿದ್ದಾರೆ.

Share This Article