ನಿಜ್ಜರ್‌ ಹತ್ಯೆ ಕೇಸ್‌ ಸಂಘರ್ಷ – ಭಾರತ-ಕೆನಡಾ ನಡುವೆ ರಾಜತಾಂತ್ರಿಕ ಸಮರ; ಏನಿದು ಬಿಕ್ಕಟ್ಟು?

Public TV
6 Min Read

ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪಿನ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಭಾರತ ಮತ್ತು ಕೆನಡಾ (India – Canada) ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ. ಹರ್ದೀಪ್‌ ಸಿಂಗ್‌ ಹತ್ಯೆ ಪ್ರಕರಣದಲ್ಲಿ ಭಾರತದ ಹೈಕಮಿಷನರ್‌ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸುವುದಾಗಿ ಕೆನಡಾ ಸರ್ಕಾರ ಹೇಳಿತ್ತು. ಈ ಬೆನ್ನಲ್ಲೇ ಭಾರತ ಸರ್ಕಾರ (Indian Gooovernment) ಕೆನಡಾದಲ್ಲಿರುವ ತನ್ನ ಹೈಕಮಿಷನರ್‌ ಅವರನ್ನು ವಾಪಸ್‌ ಕರೆಸಿಕೊಳ್ಳುವ ನಿರ್ಧಾರಕ್ಕೆ ಮುಂದಾಗಿದೆ.

ಸೋಮವಾರ (ಅ.14) ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ 6 ರಾಜತಾಂತ್ರಿಕ ಅಧಿಕಾರಿಗಳನ್ನು ಕೆನಡಾ ಸರ್ಕಾರ ಗಡಿಪಾರು ಮಾಡಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ಸರ್ಕಾರವೂ ನವದೆಹಲಿಯಲ್ಲಿರುವ ಕೆನಡಾದ 6 ರಾಜತಾಂತ್ರಿಕ ಅಧಿಕಾರಿಗಳನ್ನು ದೇಶ ತೊರೆಯುವಂತೆ ಹೇಳಿದೆ. ಇದರಿಂದ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಬಿಗಡಾಯಿಸಿದೆ.

2023ರ ಜೂನ್‌ ತಿಂಗಳಲ್ಲಿ ಖಲಿಸ್ತಾನಿ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ನಡೆದಿತ್ತು. ಹತ್ಯೆಯ ಹಿಂದೆ ಭಾರತದ ಸರ್ಕಾರಿ ಏಜೆಂಟರ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಆರೋಪಿಸಿದ್ದರು. ಟ್ರುಡ್ರೋ ಹೇಳಿಕೆಯಿಂದ ಭಾರತದ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹಳಸಿತು. ಪ್ರಸ್ತುತ ಈ ಬಿಕ್ಕಟ್ಟಿಗೆ ಕಾರಣ ಏನು? ಎಂಬುದನ್ನು ತಿಳಿಯೋಣ… ಅದಕ್ಕೂ ಮುನ್ನ ಭಾರತ-ಕೆನಡಾ ನಡುವಿನ ಬಿಕ್ಕಟ್ಟಿನ ಹಿನ್ನೆಲೆ ಏನೆಂಬುದನ್ನು ನೋಡೋಣ…

ಭಾರತ-ಕೆನಡಾ ಬಿಕ್ಕಟ್ಟಿಗೆ ಕಾರಣವೇನು?

2007ರಲ್ಲಿ ಪಂಜಾಬ್‌ನಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೋಸ್ಟ್‌ ವಾಂಟೆಡ್‌ ಆಗಿದ್ದ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಭಾರತ ಸರ್ಕಾರ ಉಗ್ರರ ಪಟ್ಟಿಗೆ ಸೇರಿಸಿತ್ತು. ಭಾರತದಲ್ಲಿ ಉಗ್ರರ ಸಂಘಟನೆ ಎಂದು ಪಟ್ಟಿ ಮಾಡಲಾಗಿ ಖಲಿಸ್ತಾನ್ ಟೈಗರ್ ಫೋರ್ಸ್‌ನ ಅಧ್ಯಕ್ಷನಾಗಿದ್ದ ನಿಜ್ಜರ್ 1990ರ ದಶಕದಲ್ಲೇ ಭಾರತ ತೊರೆದು ಕೆನಡಾ ಸೇರಿದ್ದ. ಅಲ್ಲಿನ ಪೌರತ್ವವನ್ನೂ ಪಡೆದಿದ್ದ. ಖಲಿಸ್ತಾನ ಪ್ರತ್ಯೇಕತಾವಾದಿಗಳಿಗೆ ತರಬೇತಿ ಮತ್ತಿತರ ನೆರವು ನೀಡಿದ ಆರೋಪಗಳೂ ಆತನ ಮೇಲಿದ್ದವು. ಆತನ ಹೆಸರಿದ್ದ ಉಗ್ರನ ಪಟ್ಟಿಯನ್ನು ಭಾರತ ಕೆನಡಾಕ್ಕೆ ಹಸ್ತಾಂತರಿಸಿತ್ತು. ಆದಾಗ್ಯೂ ಕೆನಡಾ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಕೆನಡಾದ ಬ್ರಿಟಿಷ್ ಕೊಲಂಬಿಯಾದ ರ‍್ರೆಯಲ್ಲಿನ ಗುರುದ್ವಾರದ ಅಧ್ಯಕ್ಷನಾಗಿದ್ದ ನಿಜ್ಜರ್‌ನನ್ನು ಇಬ್ಬರು ಮುಸುಕುಧಾರಿಗಳು 2023ರ ಜೂನ್‌ನಲ್ಲಿ ಗುಂಡಿಟ್ಟು ಕೊಂದರು. ಇಲ್ಲಿಂದ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಬಿಗಡಾಯಿಸಲು ಶುರುವಾಯಿತು.

ಇನ್ನೂ ನಿಜ್ಜರ್‌ ಹತ್ಯೆಗೆ ಭಾರತದ ಸರ್ಕಾರಿ ಏಜೆಂಟರೇ ಕಾರಣ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೋ ಆರೋಪಿಸಿದ ನಂತರ ಭಾರತದ ರಾಜತಾಂತ್ರಿಕ ಅಧಿಕಾರಿಗಳ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿತು. ಕೆನಡಾ ಸರ್ಕಾರ ನಮ್ಮ ರಾಜತಾಂತ್ರಿಕ ಅಧಿಕಾರಿಗಳ ಭದ್ರತೆಯನ್ನು ಖಾತ್ರಿಪಡಿಸುತ್ತದೆ ಎಂಬ ನಂಬಿಕೆ ಇಲ್ಲ. ಆದ್ದರಿಂದ ಹೈಕಮಿಷನರ್‌ ಮತ್ತು ಕೆನಡಾ ಗುರಿಯಾಗಿಸಿಕೊಂಡಿರುವ ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್‌ ಕರೆಸಿಕೊಳ್ಳಲು ನಿರ್ಧರಿಸಿದೆ ಎಂಬುದಾಗಿ ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ. ಅಲ್ಲದೇ ರಾಜತಾಂತ್ರಿಕರ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದೆ.

ಯಾರಿದು ಸಂಜಯ್ ಕುಮಾರ್‌ ವರ್ಮಾ?

ಸಂಜಯ್‌ಕುಮಾರ್‌ ವರ್ಮಾ ಭಾರತ ಸರ್ಕಾರದ ಹಿರಿಯ ರಾಜತಾಂತ್ರಿಕ ಅಧಿಕಾರಿ. ಕಳೆದ 36 ವರ್ಷಗಳಿಂದ ವಿದೇಶಾಂಗ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಪಾನ್‌, ಸುಡಾನ್‌, ಟರ್ಕಿ, ವಿಯೆಟ್ನಾಂ, ಚೀನಾದಲ್ಲಿ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಕೆನಡಾದಲ್ಲಿ ಭಾರತೀಯ ರಾಯಭಾರಿಯಾಗಿದ್ದಾರೆ.

ತಂದೆಯಂತೆ ಮಗ ಟ್ರೂಡೋ

ಟ್ರುಡೋ ಸರ್ಕಾರವು ಭಾರತದ ವಿರೋಧಿ ಪ್ರತ್ಯೇಕತಾವಾದಿ ಅಜೆಂಡಾಕ್ಕೆ ನಿರಂತರವಾಗಿ ಬೆಂಬಲ ನೀಡುತ್ತಿದೆ. ಏಕೆಂದರೆ ಕೆನಡಾ ಸರ್ಕಾರವು ಖಲಿಸ್ತಾನಿ ಚಟುವಟಿಕೆಗಳನ್ನು ತಡೆಯಲು ನಿರಾಕರಿಸಿರುವುದು ಇದೇ ಮೊದಲೇನಲ್ಲ. ಜಸ್ಟಿನ್ ಟ್ರುಡೊ ಅವರ ತಂದೆ ಪಿಯರೆ ಟ್ರುಡೊ ಸಹ ಇದೇ ನೀತಿಯನ್ನ ಅನುಸರಿಸುತ್ತಿದ್ದರು. ಈ ಹಿಂದೆ 1985ರ ಕಾನಿಷ್ಕ ಬಾಂಂಬ್‌ ಸ್ಫೋಟ ಪ್ರಕರಣದ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಲು ನಿರಾಕರಿಸಿದ್ದರು. ಇದೀಗ ಜಸ್ಟಿನ್‌ ಸಹ ತಮ್ಮ ತಂದೆಯ ಹಾದಿಯನ್ನೇ ಅನುಸಿಸುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಕಾನಿಷ್ಕ ಬಾಂಬ್‌ ಸ್ಫೋಟದ ಬಗ್ಗೆ ಗೊತ್ತಾ?

1985ರ ಜೂ.1 ರಂದು ಭಾರತದ ಗುಪ್ತಚರ ಸಂಸ್ಥೆಗಳು ಕೆನಡಾ ಪ್ರಾಧಿಕಾರಗಳಿಗೆ ಖಲಿಸ್ತಾನಿ ಉಗ್ರವಾದಿಗಳು ನಡೆಸಬಹುದಾದ ವಿಮಾನ ದಾಳಿಯ ವಿರುದ್ಧ ಸೂಕ್ತ ಭದ್ರತಾ ಕ್ರಮ ಕೈಗೊಳ್ಳುವಂತೆ ತುರ್ತು ಸಂದೇಶ ರವಾನಿಸಿದ್ದವು. ಆದ್ರೆ ಅದೇ ವರ್ಷದ ಜೂ.23 ರಂದು ಏರ್ ಇಂಡಿಯಾ ವಿಮಾನ (ಕಾನಿಷ್ಕಾ)ದಲ್ಲಿ ಸೂಟ್‌ಕೇಸ್ ಬಾಂಬ್ ಇರಿಸಲಾಗಿತ್ತು. ಟೊರೊಂಟೊದಿಂದ ಬ್ರಿಟನ್‌ನ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ ಒಟ್ಟು 329 ಪ್ರಯಾಣಿಕರಿದ್ದರು. ಹತ್ಯೆಗೀಡಾಗಿದ್ದ ಬಹುತೇಕ ಪ್ರಯಾಣಿಕರಲ್ಲಿ ಭಾರತೀಯ ಮೂಲದ ಕೆನಡಿಯನ್ನರು ಇದ್ದರು.

ಆ ಸಂದರ್ಭದಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಸೂಟ್‌ಕೇಸ್‌ನಲ್ಲಿ ಬಾಂಬ್ ಇರಿಸಲಾಗಿತ್ತು. ಮಂಜಿತ್ ಸಿಂಗ್ ಎಂಬ ವ್ಯಕ್ತಿಯು ಏರ್ ಇಂಡಿಯಾ ಫ್ಲೈಟ್ 182ಗೆ ಸೂಟ್‌ಕೇಸ್ ಅನ್ನು ವರ್ಗಾಯಿಸಿದ್ದ. ಆದ್ರೆ ವಿಮಾನ ಟೇಕಾಫ್‌ ಆಗುವಾಗ ಆತ ವಿಮಾನ ಹತ್ತಿರಲಿಲ್ಲ. ಭೀಕರ ಬಾಂಬ್‌ ಸ್ಫೋಟದ ಬಳಿಕ ಖಲಿಸ್ತಾನಿ ಗುಂಪು ತಾವೇ ಮಾಡಿರುವುದಾಗಿ ದಾಳಿಯ ಹೊಣೆ ಹೊತ್ತುಕೊಂಡಿತ್ತು. ನಂತರ ತಲ್ವಿಂದರ್ ಸಿಂಗ್ ಪರ್ಮಾರ್ ಎಂಬಾತನನ್ನ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಎಂದು ಹೆಸರಿಸಲಾಯಿತು. ಈ ಬಗ್ಗೆ ಭಾರತದ ಸಂಸತ್ತಿನಲ್ಲಿ ಕೆನಡಾ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಂದಿನ ಭಾರತದ ವಿದೇಶಾಂಗ ಸಚಿವರಾಗಿದ್ದ ಎಸ್‌.ಎಂ ಕೃಷ್ಣ ಅವರು ಸಂಸತ್ತಿಗೆ ಮಾಹಿತಿ ನೀಡಿದ್ದರು. ಕೆನಡಾದ ಸರ್ಕಾರಿ ಏಜೆನ್ಸಿಗಳು ಸಿಖ್ ಉಗ್ರವಾದದ ಬೆದರಿಕೆಯ ಸ್ವರೂಪ ಮತ್ತು ಗಂಭೀರತೆ ಪರಿಗಣಿಸಲು ವಿಫಲವಾಗಿವೆ. ಅಲ್ಲದೇ, ಕೆನಡಾದ ಗುಪ್ತಚರ ಇಲಾಖೆಯು ನಿರ್ಲಕ್ಷ್ಯ ವಹಿಸಿತ್ತು ಎಂದು ಸಂಸತ್ತಿನ ಗಮನಕ್ಕೆ ತಂದಿದ್ದರು.

ಇದಾದ ಕೆಲ ದಿನಗಳಲ್ಲಿ ದಿ ವಾಷಿಂಗ್ಟನ್‌ ಪೋಸ್ಟ್‌ ವರದಿಯೊಂದನ್ನು ಪ್ರಕಟ ಮಾಡಿತ್ತು. ಕಾನಿಷ್ಕ ಬಾಂಬ್‌ ಸ್ಫೋಟದ ಬಗ್ಗೆ ಕೆನಡಾ ಗುಪ್ತಚರ ಸಂಸ್ಥೆ ಮಾಹಿತಿ ಹೊಂದಿತ್ತು ಎಂಬ ವರದಿಯನ್ನು ಪ್ರಕಟಿಸಿತ್ತು. ಆದ್ರೆ ಕೆನಡಾ ಈ ವರದಿಯನ್ನು ತಳ್ಳಿಹಾಕಿತು, ಉಗ್ರಗಾಮಿ ಗುಂಪಿನೊಳಗೆ ನುಸುಳಿದ್ದ ಏಜೆಂಟನನ್ನು ಬಿಟ್ಟುಕೊಡುವಲ್ಲಿ ಹಿಂದೇಟು ಹಾಕಿತ್ತು. ಆದ್ರೆ 2010ರಲ್ಲಿ ಪ್ರಕಟವಾದ ತನಿಖಾ ವರದಿಯೊಂದು ರಾಯಲ್ ಕೆನಡಿಯನ್ ಮೌಂಟೆಡ್ ಪೋಲಿಸ್ (RCMP) ಮತ್ತು ಗೂಢಚಾರಿಕೆ ಸಂಸ್ಥೆ CSIS ನಡುವೆ ವಿವಾದವಿರುವುದನ್ನು ಸೂಚಿಸಿತ್ತು.

ಆರೋಪಿ ಒಪ್ಪಿಸಲು ಟ್ರೂಡೋ ನಕಾರ

ಪಂಜಾಬ್‌ನ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕೊಂದ ಆರೋಪದ ಮೇಲೆ 1984ರಲ್ಲಿ ಜೈಲಿನಿಂದ ಹೊರಬಂದ ನಂತರ ಮಾಸ್ಟರ್‌ಮೈಂಡ್ ತಲ್ವಿಂದರ್ ಸಿಂಗ್ ಪರ್ಮಾರ್ ಕೆನಡಾಕ್ಕೆ ಪರಾರಿಯಾಗಿದ್ದ. ಬಾಂಬ್‌ ದಾಳಿಯಲ್ಲಿ ಈತನ ಕೈವಾಡ ಇದೆ ಎಂದು ಭಾರತ ಪ್ರತಿಪಾದಿಸಿತ್ತು. ಅಲ್ಲದೇ ಭಾರತಕ್ಕೆ ಆತನನ್ನ ಹಸ್ತಾಂತರಿಸುವಂತೆ ಕೇಳಿತ್ತು. ಆದ್ರೆ ಈಗಿನ ಪ್ರಧಾನಿ ಜಸ್ಟಿನ್‌ ಟ್ರೂಡೋ ಅವರ ತಂದೆ ಪಿಯರೆ ಟ್ರೂಡೋ ಆತನನ್ನ ಭಾರತಕ್ಕೆ ಹಸ್ತಾಂತರಿಸಲು ನಿರಾಕರಿಸಿದ್ದರು. ನಂತರ ಕಾನಿಷ್ಕಾ ದಾಳಿಯ ಸೂತ್ರಧಾರಿಯಾಗಿದ್ದ ಪಾರ್ಮರ್‌ನನ್ನು 1992 ರಲ್ಲಿ ಪಂಜಾಬ್‌ನಲ್ಲಿ ಪೊಲೀಸರು ಹತ್ಯೆ ಮಾಡಿದರು. ಆದರೆ ಅದೇ ವರ್ಷ ಜೂನ್ ತಿಂಗಳಲ್ಲಿ ಕೆನಡಾದ ಹಲವು ಭಾಗಗಳಲ್ಲಿ ಪಾರ್ಮರ್‌ಗೆ ಗೌರವ ಸೂಚಿಸುವ ಹಲವಾರು ಭಿತ್ತಿ ಚಿತ್ರಗಳು ಕಾಣಿಸಿಕೊಂಡಿದ್ದವು. ಆದರೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ಕಾನಿಷ್ಕಾ ಬಂಬ್ ದಾಳಿಯ ಪರಂಪರೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಇದೀಗ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂಬ ನೇರ ಆರೋಪ ಮಾಡುತ್ತಿರುವುದು ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ.

ಕೆನಡಾದಲ್ಲಿರುವ ಸಿಖ್ಖರ ಸಂಖ್ಯೆ ಎಷ್ಟು?

ಕೆನಡಾದಲ್ಲಿನ ಒಟ್ಟು ಜನಸಂಖ್ಯೆ 3.98 ಕೋಟಿ. ಅವರ ಪೈಕಿ 16.80 ಕೋಟಿ ಮಂದಿ ಭಾರತೀಯರಿದ್ದಾರೆ. 8 ಲಕ್ಷದಷ್ಟು ಜನ ಸಿಖ್‌ ಸಮುದಾಯದವರು ಇದ್ದಾರೆ. ಆದರೆ ಇಲ್ಲಿರುವ ಸಿಖ್ಖರಲ್ಲಿ ಖಲಿಸ್ತಾನ ಪ್ರತ್ಯೇಕತಾವಾದಿಗಳ ಪರವಾಗಿ ಇರುವವರು ಎಷ್ಟು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಕೆನಡಾ ಜನಸಂಖ್ಯೆಯಲ್ಲಿ ಭಾರತೀಯರ ಪ್ರಮಾಣ 4% ರಷ್ಟಿದೆ. ಇಲ್ಲಿನ ಒಟ್ಟು ಭಾರತೀಯರಲ್ಲಿ 13 ಲಕ್ಷ ಮಂದಿ ಕೆನಡಾ ಪೌರತ್ವ ಪಡೆದುಕೊಂಡಿದ್ದಾರೆ. 3.80 ಲಕ್ಷ ವಿದ್ಯಾರ್ಥಿಗಳ ಸಂಖ್ಯೆ ಇಲ್ಲಿದೆ.

ಯಾರು ಈ ಖಲಿಸ್ತಾನಿಗಳು?

ಸಿಖ್ ಪ್ರತ್ಯೇಕತಾವಾದಿಗಳು ತಮ್ಮ ತಾಯ್ನಾಡು ಖಲಿಸ್ತಾನ್, ಅಂದರೆ ʻಶುದ್ಧರ ನಾಡುʼ ಅನ್ನು ಪಂಜಾಬ್‌ನಿಂದ ರಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಭಾರತವನ್ನು ಹಲವು ರಾಷ್ಟ್ರಗಳಾಗಿ ವಿಭಜಿಸುವುದೇ ಅವರ ಗುರಿ. 1970 ಮತ್ತು 1980ರ ದಶಕದ ಹಿಂಸಾತ್ಮಕ ದಂಗೆಯ ಸಮಯದಿಂದಲೂ ಬೇಡಿಕೆಯನ್ನು ಹಲವು ಬಾರಿ ಪುನರುಚ್ಚರಿಸಿದ್ದಾರೆ. ಪಂಜಾಬ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದನೆ ಚಟುವಟಿಕೆ ಹರಡುವಲ್ಲಿ ಖಲಿಸ್ತಾನಿ ನಾಯಕರು ಪ್ರಮುಖ ಸೂತ್ರಧಾರಿಗಳಾಗಿದ್ದಾರೆ.

ಕೆಲ ತಿಂಗಳ ಹಿಂದೆ ಜಸ್ಟಿನ್‌ ಟ್ರುಡೋ ನಿಜ್ಜರ್‌ ಹತ್ಯೆಯಿಂದೆ ಭಾರತೀಯ ಸರ್ಕಾರಿ ಏಜೆಂಟರ ಕೈವಾಡ ಇರುವುದಾಗಿ ಆರೋಪಿಸಿದ್ದರು. ಆ ಬಳಿಕ ಪರಿಸ್ಥಿತಿ ಶಾಂತವಾಗಿತ್ತು. ಇದೀಗ ಕೆನಡಾ ರಾಜತಾಂತ್ರಿಕರನ್ನು ಗಡಿಪಾರು ಮಾಡಿದ್ದು ಮತ್ತೆ ವಿವಾದ ಮುನ್ನೆಲೆಗೆ ಬಂದಿದೆ.

Share This Article