ಎಚ್ಚರಿಕೆಯನ್ನು ಲೆಕ್ಕಿಸದೆ ನೀರಿಗಿಳಿದ- ಸಮುದ್ರಕ್ಕೆ ಜಂಪ್ ಮಾಡಿ ಯುವಕನ ರಕ್ಷಣೆ

Public TV
1 Min Read

ಉಡುಪಿ: ಇಲ್ಲಿನ ಅರಬ್ಬೀ ಸಮುದ್ರ ಪ್ರಕ್ಷುಬ್ಧವಾಗಿದೆ. ಸಮುದ್ರಕ್ಕೆ ಇಳೀಬೇಡಿ ಎಂದು ಎಷ್ಟು ಹೇಳಿದರೂ ಪ್ರವಾಸಿಗರು ಲೈಫ್ ಗಾರ್ಡ್ ಗಳ ಮಾತು ಕೇಳುತ್ತಿಲ್ಲ. ಹೀಗಾಗಿ ಬೀಚ್ ಸಿಬ್ಬಂದಿಗೆ ಪ್ರವಾಸಿಗರನ್ನು ನೀರಿಗಿಳಿಯದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ.

ಉಡುಪಿ ಜಿಲ್ಲೆ ಮಲ್ಪೆಯಲ್ಲಿ ಸಮುದ್ರಕ್ಕಿಳಿದು ಮುಳುಗುತ್ತಿದ್ದ ಯುವಕನನ್ನು ರಕ್ಷಣೆ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಕಡಲಲ್ಲಿ ಅಬ್ಬರ ಜೋರಾಗಿದೆ. ಭದ್ರಾವತಿ ಮೂಲದ ಯುವಕರ ತಂಡ ಮಲ್ಪೆ ಬೀಚ್‍ಗೆ ಬಂದಿತ್ತು. ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ತಂಡ ನೀರಿಗಿಳಿದಿತ್ತು.

ಈ ಸಂದರ್ಭ ಒಬ್ಬ ಯುವಕ ಅಲೆಗಳ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದಾನೆ. ಕೂಡಲೇ ಮಲ್ಪೆಯ ಜೀವ ರಕ್ಷಕ ತಂಡದ ಮಧು ಸಮುದ್ರಕ್ಕೆ ಜಿಗಿದು ಯುವಕನನ್ನು ರಕ್ಷಿಸಿದ್ದಾರೆ. ಎರಡು ದಿನಗಳ ಹಿಂದಿನ ಈ ವೀಡಿಯೋ ಲಭ್ಯವಾಗಿದೆ. ಉಡುಪಿ ಜಿಲ್ಲೆಯಲ್ಲಿ ವಾಯು ಚಂಡಮಾರುತದ ಅಬ್ಬರ ಜಾಸ್ತಿಯಾಗಿದ್ದು, ಕಡಲಬ್ಬರ ವಿಪರೀತವಾಗಿದೆ.

ಪ್ರವಾಸಿಗರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಸದ್ಯ ಮಳೆ ಮತ್ತು ಗಾಳಿ ವಿಪರೀತ ಇರುವುದರಿಂದ ಕಡಲಿಗಿಳಿಯದಂತೆ ಅಲರ್ಟ್ ಘೋಷಿಸಲಾಗಿದೆ.

ಲೈಫ್ ಗಾರ್ಡ್ ಮಧು ಮಾತನಾಡಿ, ಮಳೆಗಾಲದಲ್ಲಿ ಪ್ರವಾಸಿಗರು ಸಮುದ್ರದಿಂದ ದೂರ ಇರುವುದೇ ಒಳ್ಳೆಯದು. ಬೇರೆ ಊರಿನವರಿಗೆ ಸಮುದ್ರದ ಬಗ್ಗೆ ಗೊತ್ತಿಲ್ಲ. ಮಾಮೂಲಿ ನದಿಯ ಈಜಾಟದ ತರ ಇದಲ್ಲ. ಕಾಲಿನಡಿಯ ಮರಳು ಜಾರಿಕೊಂಡು ಸಮುದ್ರದತ್ತ ಎಳೆಯುತ್ತದೆ. ತೂಫಾನ್ ಕಡಿಮೆಯಾಗುವವರೆಗೆ ದಯವಿಟ್ಟು ಯಾರೂ ಸಮುದ್ರಕ್ಕೆ ಇಳಿಯಬೇಡಿ. ದೂರದಲ್ಲೇ ಸಮುದ್ರ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *