ಶೇ.8.62 ಡಿಸ್ಕೌಂಟ್‌ – ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಲಿಸ್ಟಿಂಗ್‌

Public TV
2 Min Read

ಮುಂಬೈ: ದೇಶದ ಅತಿ ದೊಡ್ಡ ವಿಮಾ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮದ(ಎಲ್‌ಐಸಿ) ಷೇರು ಪೇಟೆಯಲ್ಲಿ ಲಿಸ್ಟಿಂಗ್‌ ಆಗಿದೆ.

ಬಾಂಬೆ ಷೇರು ಮಾರಕಟ್ಟೆಯಲ್ಲಿ ಶೇ.8.62 ರಷ್ಟು ರಿಯಾಯಿತಿ ದರದೊಂದಿಗೆ 867.2 ರೂ. ಬೆಲೆಯಲ್ಲಿ ಲಿಸ್ಟ್‌ ಆಗಿದೆ. ಇಂದು ಲಿಸ್ಟ್‌ ಆಗುವ ಮೂಲಕ ಹೂಡಿಕೆದಾರರು ಷೇರುಗಳನ್ನು ಖರೀದಿ ಮಾಡಬಹುದು.

ಆರಂಭದಲ್ಲಿ ಎಲ್‌ಐಸಿ ಷೇರುಗಳು ಭಾರೀ ಏರಿಕೆ ಆಗಲಿದೆ ಎಂದು ಗ್ರೇ ಮಾರ್ಕೆಟ್‌ ಸುಳಿವು ನೀಡಿತ್ತು. ಆದರೆ ಕಳೆದ ಒಂದು ವಾರದಿಂದ ಗ್ರೇ ಮಾರ್ಕೆಟ್‌ನಲ್ಲಿ ಎಲ್‌ಐಸಿ ಷೇರುಗಳ ಬೇಡಿಕೆ ಕುಸಿತ ಕಂಡಿದ್ದರಿಂದ ಈಗ ಕಡಿಮೆ ಬೆಲೆಯಲ್ಲಿ ಷೇರು ಲಿಸ್ಟ್‌ ಆಗಿದೆ. ಇಂದು ಮಧ್ಯಾಹ್ನದ ವೇಳೆಗೆ 890 ರೂ. ಬೆಲೆಯಲ್ಲಿ ಎಲ್‌ಐಸಿ ಷೇರು ಮಾರಾಟವಾಗುತ್ತಿದೆ. ಇದನ್ನೂ ಓದಿ: ಸಂಕಷ್ಟದಲ್ಲಿರುವ ಲಂಕಾಕ್ಕೆ ಭಾರತದಿಂದ ಪೆಟ್ರೋಲ್

ಕೇಂದ್ರ ಸರ್ಕಾರ ಮೇ 4 ರಂದು ಎಲ್‌ಐಸಿ ಷೇರನ್ನು ಬಿಡುಗಡೆ ಮಾಡಿತ್ತು. ಐಪಿಒ ವೇಳೆ ಒಂದು ಷೇರಿಗೆ 949 ರೂ. ದರವನ್ನು ನಿಗದಿ ಮಾಡಲಾಗಿತ್ತು. ಈ ಸರ್ಕಾರ ಪಾಲಿಸಿದಾರರಿಗೆ ಮತ್ತು ರಿಟೇಲ್‌ ಹೂಡಿಕೆದಾರರಿಗೆ ರಿಯಾಯಿತಿ ದರವನ್ನು ಪ್ರಕಟಿಸಿತ್ತು. ಪಾಲಿಸಿದಾರರು 889 ರೂ. ರಿಟೇಲ್‌ ಹೂಡಿಕೆದಾರರು 904 ರೂ. ರಿಯಾಯಿತಿ ದರದಲ್ಲಿ ಷೇರನ್ನು ಖರೀದಿ ಮಾಡಿದ್ದರು. ಐಪಿಒ ಮೂಲಕ 20,557 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.

ಅಸ್ಥಿರ ಮಾರುಕಟ್ಟೆ ಪರಿಸ್ಥಿತಿಗಳಿಂದಾಗಿ ಎಲ್ಐಸಿ ಕಳೆದ ತಿಂಗಳು ತನ್ನ ಐಪಿಒ ಗಾತ್ರವನ್ನು ಶೇ. 5 ರಿಂದ ಶೇಕಡ 3.5 ಕ್ಕೆ ಇಳಿಸಿತ್ತು. ಎಲ್‌ಐಸಿಯ ಐಪಿಒ ಗಾತ್ರವನ್ನು ಇಳಿಕೆ ಮಾಡಿದರೂ ಇದು ದೇಶದ ಅತೀ ದೊಡ್ಡ ಐಪಿಒ ಆಗಿ ದಾಖಲೆ ಬರೆದಿದೆ.

ಕಳೆದ ನವೆಂಬರ್‌ನಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿದ್ದ ಪೇಟಿಎಂ 18,300 ಕೋಟಿ ರೂ. ಸಂಗ್ರಹಿಸಿದ್ದೇ ಈವರೆಗೆನ ದೇಶದ ದೊಡ್ಡ ಐಪಿಒ ಆಗಿದೆ. ಕೋಲ್‌ ಇಂಡಿಯಾ 2010 ರಲ್ಲಿ 15,500 ಕೋಟಿ ಮತ್ತು ರಿಲಯನ್ಸ್‌ ಪವರ್‌ 2008ರಲ್ಲಿ 11,700 ಕೋಟಿ ರೂ. ಐಪಿಒ ಮೂಲಕ ಸಂಗ್ರಹಿಸಿತ್ತು.

ಕೇಂದ್ರ ಸರ್ಕಾರ 2021-22ರ ಹಣಕಾಸು ವರ್ಷದಲ್ಲಿ ಎಲ್‌ಐಸಿಯ 31.6 ಕೋಟಿ ಅಥವಾ ಶೇ.5 ರಷ್ಟು ಪಾಲನ್ನು ಮಾರಾಟ ಮಾಡಿ 60 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ ಕೊರೊನಾ ಕಾರಣದಿಂದ ಇದು ಮುಂದೂಡಿಕೆಯಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *