ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸೋಣ: ನ್ಯಾಯಾಧೀಶ

Public TV
2 Min Read

ಕೋಲಾರ: ಇತ್ತೀಚಿನ ದಿನಗಳಲ್ಲಿ ಬಾಲಕಾರ್ಮಿಕ ಪದ್ಧತಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸೋಣ ಎಂದು ಪೋಕ್ಸೋ ಪ್ರಕರಣಗಳ ವಿಶೇಷ ಶೀಘ್ರಗತಿ ನ್ಯಾಯಾಲಯದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಪಿ.ದೇವಮಾನೆ ತಿಳಿಸಿದರು.

ಇಂದು ನಗರದ ಮಹಾತ್ಮಗಾಂಧಿ ಚೌಕದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ವಕೀಲರದ ಸಂಘ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಪ್ರಯುಕ್ತ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ದೇಶದ ನಿಜವಾದ ಆಸ್ತಿ ಎಂದರೆ ಆ ದೇಶದ ಆರೋಗ್ಯವಂತ, ಪ್ರಜ್ಞಾವಂತ ನಾಗರಿಕರು ಆಗಿರುತ್ತಾರೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಮಾತನ್ನು ಪ್ರಾರಂಭ ಮಾಡಿದರು. ಇದನ್ನೂ ಓದಿ:  ಅನುಮತಿ ಪಡೆಯದೇ ಜಾಹೀರಾತು: ಇಬ್ಬರು ಅಭ್ಯರ್ಥಿಗಳ ವಿರುದ್ಧ FIR ದಾಖಲು 

ಬಾಲ್ಯ ವ್ಯವಸ್ಥೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ, ಉತ್ತಮ ಮಾರ್ಗದರ್ಶನ ನೀಡಿ ಪ್ರಜ್ಞಾವಂತ ಪ್ರಜೆಯನ್ನಾಗಿ ಮಾಡುವುದು ನಮ್ಮ, ನಿಮ್ಮೆಲ್ಲರ ಕರ್ತವ್ಯ. ಬಾಲ್ಯದಲ್ಲಿಯೇ ಮಕ್ಕಳು ಕಾರ್ಮಿಕರಾಗಿ ದುಡಿಯುವುದು, ದುಶ್ಚಟಗಳಿಗೆ ಗಮನ ಹರಿಸದಂತೆ ನೋಡಿಕೊಂಡು ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವುದು ಪ್ರತಿಯೊಬ್ಬ ಸಾರ್ವಜನಿಕರ ಕರ್ತವ್ಯವಾಗಿರುತ್ತದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಜಾಥಾಗೆ ಚಾಲನೆ ನೀಡಿ ಮಾತನಾಡಿದ್ದು, ಪ್ರತಿಯೊಬ್ಬ ನಾಗರಿಕನು ಸಹ ಬಾಲಕಾರ್ಮಿಕ ವಿರೋಧಿಯಾಗಿ ಕಾರ್ಯನಿರ್ವಹಿಸಬೇಕು. ಬಾಲಕಾರ್ಮಿಕ ವಿರೋಧಿ ಚಟುವಟಿಕೆಗಳನ್ನು ಒಂದು ದಿನಕ್ಕೆ ಸೀಮಿತ ಮಾಡಬಾರದು. ಮುಂದಿನ ತಿಂಗಳಿನಲ್ಲಿ ಕಾರ್ಮಿಕ ಕಾರ್ಖಾನೆಗಳಿಗೆ, ಗ್ಯಾರೇಜ್, ಹೋಟೆಲ್, ಡಾಬಾ, ಬೇಕರಿ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ತನಿಖೆ ಮಾಡಿ ಬಾಲಕಾರ್ಮಿಕರು ಕಂಡುಬಂದಲ್ಲಿ ಸಂಬಂಧಪಟ್ಟವರಿಗೆ ಶಿಕ್ಷೆಯಾಗುತ್ತದೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸುನಿಲ್.ಎಸ್.ಹೊಸಮನಿ, ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಶ್ರೀಕಾಂತ್ ಬಿ ಪಾಟೀಲ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶ್ರೀಧರ್.ಜಿ, ವಕೀಲರ ಸಂಘದ ಕಾರ್ಯದರ್ಶಿಗಳಾದ ರಘುಪತಿ ಗೌಡ, ಜಾಗೃತಿ ಸೇವಾ ಸಂಸ್ಥೆಯ ಅಧ್ಯಕ್ಷರು ಹಾಗೂ ವಕೀಲರಾದ ಕೆ.ಆರ್.ಧನರಾಜ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು. ಇದನ್ನೂ ಓದಿ: ಜನರನ್ನ ಆಸ್ಪತ್ರೆಗೆ ಸೇರಿಸುವಲ್ಲಿ ದಾಖಲೆ ಬರೆದ ರಾಯಚೂರು – ವಾಂತಿ, ಭೇದಿ ರೋಗಿಗಳಿಂದ ಬೆಡ್ ಪುಲ್

Share This Article
Leave a Comment

Leave a Reply

Your email address will not be published. Required fields are marked *