ಮನೆಯ ಒಳಗಡೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಲಷ್ಕರ್‌ ಉಗ್ರನಿಗೆ ಗುಂಡೇಟು!

Public TV
2 Min Read

ಇಸ್ಲಾಮಾಬಾದ್‌: ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಸಹ-ಸಂಸ್ಥಾಪಕ, ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಹಫೀಜ್‌ ಸಯೀದ್ ಆಪ್ತ ಅಮೀರ್ ಹಮ್ಜಾ (Amir Hamza) ಲಾಹೋರ್‌ನಲ್ಲಿರುವ ನಿವಾಸದಲ್ಲೇ ಗಂಭೀರ ಗಾಯಗೊಂಡಿದ್ದಾನೆ.

ಎಲ್‌ಇಟಿಯ 17 ಸ್ಥಾಪಕ ಸದಸ್ಯರಲ್ಲಿ ಒಬ್ಬನಾದ 66 ವರ್ಷದ ಹಮ್ಜಾಗೆ ಮನೆಯಲ್ಲಿ ಇರುವಾಗಲೇ ಗಾಯವಾಗಿದ್ದು, ಈಗ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಭದ್ರತೆಯಲ್ಲಿ  ಲಾಹೋರ್‌ನಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪಾಕ್ ಮತ್ತೆ ಸವಾಲು ಹಾಕಿದ್ರೆ, ನಾವು ಮಾತಿನಿಂದಲ್ಲ.. ಬೆಂಕಿ, ರಾಷ್ಟ್ರದ ದೃಢ ಸಂಕಲ್ಪದೊಂದಿಗೆ ಪ್ರತಿಕ್ರಿಯಿಸ್ತೇವೆ – ಮುದಿತ್ ಮಹಾಜನ್

ಗಂಭೀರವಾಗಿ ಗಾಯಗೊಂಡಿದ್ದು ಹೇಗೆ ಎನ್ನುವ ಪ್ರಶ್ನೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಮನೆ ಒಳಗಡೆ ಅಪರಿಚಿತ ವ್ಯಕ್ತಿ ಪ್ರವೇಶಿಸಿ ಗುಂಡಿನ ದಾಳಿ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.

ಆಸ್ಪತ್ರೆಗೆ ದಾಖಲಾದ ನಂತರ ಹಮ್ಜಾಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಬಿಳಿ ಉಡುಪಿನ ಮೇಲೆ ರಕ್ತದ ಕಲೆಗಳು ಇರುವುದನ್ನು ಗಮನಿಸಬಹುದು. ಇದನ್ನೂ ಓದಿ: ಕೇಂದ್ರ ಗುಪ್ತಚರ ಇಲಾಖೆ ಮುಖ್ಯಸ್ಥರ ಅವಧಿ 1 ವರ್ಷ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

ಪ್ರಚೋದನಕಾರಿ ಭಾಷಣಕ್ಕೆ ಹೆಸರುವಾಸಿಯಾಗಿರುವ ಅಮೀರ್ ಹಮ್ಜಾ ಎಲ್‌ಇಟಿ ಮುಖವಾಣಿಯ ಸಂಪಾದಕನಾಗಿಯೂ ಕೆಲಸ ಮಾಡಿದ್ದ. ಈತ ಎಲ್‌ಇಟಿಯ ಕೇಂದ್ರ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದ. ಬಂಧಿತ ಉಗ್ರರ ಬಿಡುಗಡೆಗಾಗಿ ನಿಧಿಸಂಗ್ರಹಣೆ, ನೇಮಕಾತಿ ಮತ್ತು ಮಾತುಕತೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುಜ್ರಾನ್‌ವಾಲಾ ಮೂಲದ ಹಮ್ಜಾನನ್ನು ಆಗಸ್ಟ್ 2012 ರಲ್ಲಿ ಅಮೆರಿಕ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ.

2005ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಲಷ್ಕರ್-ಎ-ತೊಯ್ದಾ ಭಯೋತ್ಪಾದಕ ರಜವುಲ್ಲಾ ನಿಜಾಮಿ ಅಲಿಯಾಸ್ ಅಬು ಸೈಯುಲ್ಲಾನನ್ನು ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಭಾನುವಾರ ಹತ್ಯೆ ಮಾಡಿದ್ದರು.

Share This Article