ಉಗ್ರ ಸಂಘಟನೆಗೆ ಯುವಕರ ನೇಮಕಾತಿ ಪ್ರಕರಣ – ಶಿರಸಿಯ ವ್ಯಕ್ತಿಗೆ 10 ವರ್ಷ ಕಠಿಣ ಶಿಕ್ಷೆ

1 Min Read

ಕಾರವಾರ: ಯುವಕರನ್ನು ಉಗ್ರ ಚಟುವಟಿಕೆಗೆ ಸೆಳೆಯುವ ಹಾಗೂ ಪಾಕ್ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೈಬಾಗೆ ಸೇರ್ಪಡೆಗೊಳಿಸುವ ಸಂಚು ರೂಪಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (Sirsi) ಯುವಕನಿಗೆ ವಿಶೇಷ ಎನ್‌ಐಎ ನ್ಯಾಯಾಲಯ 10 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಸಯ್ಯದ್ ಎಂ. ಇದ್ರಿಸ್ ಶಿಕ್ಷೆಗೆ ಗುರಿಯಾದ ಯುವಕ. ಈತ ಉಗ್ರ ಚಟುವಟಿಕೆಗೆ ಯುವಕರನ್ನು ಸೆಳೆಯುವ ಹಾಗೂ ಪಾಕ್ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೈಬಾಗೆ ಯುವಕರನ್ನು ಸೇರಿಸುವ ಸಂಚು ರೂಪಿಸಿದ್ದ. ಭಾರತೀಯ ದಂಡ ಸಂಹಿತೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA Section) ಅನ್ವಯ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 70,000 ರೂ. ದಂಡವನ್ನೂ ವಿಧಿಸಿದೆ.

ಈ ಪ್ರಕರಣವು ಮೊದಲಿಗೆ 2020ರ ಏಪ್ರಿಲ್‌ನಲ್ಲಿ ಪಶ್ಚಿಮ ಬಂಗಾಳ ಪೊಲೀಸರಿಂದ ದಾಖಲಾಗಿತ್ತು. ನಂತರ ಹೆಚ್ಚಿನ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಹಸ್ತಾಂತರಿಸಲಾಗಿತ್ತು. ತನಿಖೆಯ ವೇಳೆ ಎನ್‌ಐಎ ಶಿರಸಿಯಲ್ಲಿ ಸಯ್ಯದ್ ಇದ್ರಿಸ್ ಹಾಗೂ ಜಮ್ಮು–ಕಾಶ್ಮೀರ ನಿವಾಸಿ ಅಲ್ತಾಫ್ ಅಹ್ಮದ್ ರಾಥೆರ್‌ನನ್ನು ಬಂಧಿಸಿತ್ತು. ಈ ಇಬ್ಬರು ತಾನಿಯಾ ಪರ್ವೀನ್ ಎಂಬ ಮಹಿಳೆಯೊಂದಿಗೆ ಸೇರಿಕೊಂಡು ಪಶ್ಚಿಮ ಬಂಗಾಳದಲ್ಲಿ ಲಷ್ಕರ್-ಎ-ತೈಬಾ ಸಂಘಟನೆಯ ಘಟಕ ಸ್ಥಾಪಿಸಲು ಸಂಚು ರೂಪಿಸಿದ್ದರು.

ಇದಕ್ಕೂ ಮುನ್ನ ಪಶ್ಚಿಮ ಬಂಗಾಳದ ಉತ್ತರ ಪರಗಣ ಜಿಲ್ಲೆಯ ಬದೂರಿಯಾ ಪ್ರದೇಶದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ತಾನಿಯಾ ಪರ್ವೀನ್‌ಳನ್ನು ಪೊಲೀಸರು ಬಂಧಿಸಿದ್ದರು. ಶೋಧದ ವೇಳೆ ಕಾನೂನುಬಾಹಿರ ಸಾಹಿತ್ಯ ಸೇರಿದಂತೆ ಹಲವು ಅಕ್ರಮ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

Share This Article