ಸರ್ಜಿಕಲ್ ಸ್ಟ್ರೈಕ್‍ಗೆ ಚಿರತೆ ಮೂತ್ರ ಕೊಂಡೊಯ್ದಿದ್ದ ಭಾರತದ ಯೋಧರು – ಏನಿದರ ಹಿಂದಿನ ರಹಸ್ಯ?

Public TV
3 Min Read

ಪುಣೆ: 2016 ಸೆಪ್ಟೆಂಬರ್ ನಲ್ಲಿ ಭಾರತೀಯ ಯೋಧರು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ನಡೆಸಿದ ಸರ್ಜಿಕಲ್ ದಾಳಿ ವೇಳೆ ಚಿರತೆಯ ಮೂತ್ರವನ್ನು ಕೊಂಡೊಯ್ದಿದ್ದರು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

ಸುಮಾರು 15 ಕಿಮೀ ದೂರದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ್ದ ಸೈನಿಕರು ಚಿರತೆ ಮೂತ್ರ ತೆಗೆದುಕೊಂಡು ಹೋಗಿದ್ದರು ಎಂದು ಮಾಜಿ ನಗ್ರೋಟಾ ಕಾಪ್ರ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಜೇಂದ್ರ ನಿಂಬೋರ್ಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮಂಗಳವಾರ ಪುಣೆ ನಗರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಸರ್ಜಿಕಲ್ ಸ್ಟ್ರೈಕ್ ಅನುಭವವನ್ನು ತಿಳಿಸಿದ ಅವರು, ಕಾರ್ಯಾಚರಣೆ ನಡೆಸುವ ವೇಳೆ ಕೆಲ ದೂರ ಹಳ್ಳಿಗಳನ್ನು ಕ್ರಮಿಸಿ ಸಾಗಬೇಕಿತ್ತು. ಈ ವೇಳೆ ನಾಯಿಗಳು ಯೋಧರ ವೇಳೆ ದಾಳಿ ನಡೆಸಿ ಶಬ್ಧ ಮಾಡುವ ಸಾಧ್ಯತೆಯೂ ಹೆಚ್ಚಿತ್ತು. ಇದನ್ನು ಎದುರಿಸಲು ಚಿರತೆಯ ಮೂತ್ರವನ್ನು ಹಳ್ಳಿಯ ಸುತ್ತಲು ಇರುವ ಮಾರ್ಗದಲ್ಲಿ ಚೆಲ್ಲಿ ನಾಯಿಗಳು ದಾಳಿ ನಡೆಸದಂತೆ ಎಚ್ಚರಿಕೆ ವಹಿಸಲಾಗಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಯಾರೆಲ್ಲ ಇದ್ದರು ಅನ್ನೋದು ಈಗ ಬಹಿರಂಗವಾಯ್ತು

ಯಾಕೆ ಈ ತಂತ್ರವನ್ನು ಬಳಸಿದ್ದು ಎಂದು ಕೇಳಿದ್ದಕ್ಕೆ, ನಾಯಿಗಳು ಚಿರತೆಯ ಮೂತ್ರದ ವಾಸನೆ ಕಂಡು ಹೆದರುತ್ತದೆ. ಅಲ್ಲದೇ ದಾಳಿ ನಡೆಸಬಹುದು ಎನ್ನುವ ಭಯದಿಂದ ಜೀವ ಉಳಿಸಲು ಆ ಸ್ಥಳದತ್ತ ಸುಳಿದಾಡುವುದಿಲ್ಲ. ಹೀಗಾಗಿ ಈ ತಂತ್ರವನ್ನು ಬಳಕೆ ಮಾಡಲಾಗಿದೆ ಎಂದು ವಿವರಿಸಿದರು.

ಈ ಕಾರ್ಯಚರಣೆ ನಡೆಸಲು ಸೇನೆ ಸಾಕಷ್ಟು ಗೌಪ್ಯತೆಯನ್ನು ಕಾಪಾಡಿಕೊಂಡಿತ್ತು. ಅಂದಿನ ಕೇಂದ್ರ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಕೂಡ ಸರ್ಜಿಕಲ್ ದಾಳಿ ನಡೆಸುವ ಒಂದು ವಾರದ ಹಿಂದೆಯಷ್ಟೇ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಲ್ಲದೇ 1 ವಾರದಲ್ಲಿ ಯೋಜನೆ ಜಾರಿ ಮಾಡುವಂತೆ ಸೂಚಿಸಿದ್ದರು. ಯೋಧರಿಗೆ ಈ ಕುರಿತು ಮಾಹಿತಿ ನೀಡದೇ ಕೆಲ ಸಲಹೆ ಮಾತ್ರ ನೀಡಲಾಗಿತ್ತು. ದಾಳಿಯ ದಿನ ಮಾತ್ರ ಎಲ್ಲರಿಗೂ ಖಚಿತ ಸ್ಥಳದ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಕಾರ್ಯಾಚರಣೆಗೆ ನಡೆಸಿದ್ದ ಸಿದ್ಧತೆಯನ್ನು ವಿವರಿಸಿದರು.

ದಾಳಿ ನಡೆಸಲು ಮುಂಜಾನೆಯ ನಸುಕಿನ ವೇಳೆಯನ್ನೇ ತಂಡ ಆಯ್ಕೆ ಮಾಡಲಾಗಿತ್ತು. ಅಲ್ಲದೇ ಭಯೋತ್ಪಾದಕರು ಪ್ರತಿದಾಳಿ ನಡೆಸಬಹುದಾದ ಸ್ಥಳವನ್ನು ಗುರುತಿಸಲಾಗಿತ್ತು. ನಸುಕಿನ 3.30ರ ವೇಳೆ ಅತ್ಯುತ್ತಮ ದಾಳಿ ನಡೆಸಲು ಸೂಚನೆ ನೀಡಿ ಆ ವೇಳೆಗೆ ಸೂಕ್ತ ರಕ್ಷಣಾ ಸ್ಥಳಕ್ಕೆ ತೆರಳುವ ಯೋಜನೆ ಮಾಡಲಾಗಿತ್ತು. ದಾಳಿಯಲ್ಲಿ 29 ಭಯೋತ್ಪಾದಕರು ಹಾಗೂ ಉಗ್ರರರಿಗೆ ತರಬೇತಿ ನೀಡಲು ತೆರೆಯಲಾಗಿದ್ದ ಮೂರು ಲಾಂಚಿಂಗ್ ಪ್ಯಾಡ್ ಗಳನ್ನು ಧ್ವಂಸ ಮಾಡಿತ್ತು. ಸೇನೆಯ ಈ ಕಾರ್ಯಾಚರಣೆ ಪಾಕ್ ಮಿಲಿಟರಿ ನಾಯಕರಿಗೆ ಶಾಕ್ ನೀಡಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಜಿಕಲ್ ಸ್ಟ್ರೈಕ್ 2.0: ಗಡಿ ನುಗ್ಗಿ ಪಾಕ್ ಸೈನಿಕರನ್ನು ಹತ್ಯೆಗೈದ ‘ಘಾತಕ್’ ತಂಡ!

ಅಂದಹಾಗೇ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಜೇಂದ್ರ ನಿಂಬೋರ್ಕರ್ ಅವರು ಸದ್ಯ ಸೇನೆಯಿಂದ ನಿವೃತ್ತರಾಗಿದ್ದು, ಜಮ್ಮು ಕಾಶ್ಮೀರದ ನೌಶೇರಾ ಸೆಕ್ಟರ್ ಬ್ರಿಗೇಡ್ ನ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ತಮ್ಮ ಕಾರ್ಯದ ಅವಧಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಸೆಕ್ಟರ್ ನ ಭೌಗೋಳಿಕ ಪ್ರದೇಶದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದರು. ಈ ವೇಳೆಯೇ ಅವರಿಗೆ ಭಾರತ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಪ್ರದೇಶದಲ್ಲಿ ನಾಯಿಗಳ ದಾಳಿ ಖಚಿತವಾಗಿ ನಡೆಯುತ್ತದೆ ಎಂಬ ಮಾಹಿತಿ ತಿಳಿದಿತ್ತು. ಅಲ್ಲದೇ ರಾತ್ರಿ ವೇಳೆ ಚಿರತೆ ದಾಳಿಯಿಂದ ತಪ್ಪಿಸಿ ಕೊಳ್ಳಲು ಸೂಕ್ತ ಪ್ರದೇಶದಲ್ಲಿ ಗುಂಪು ಕೂಡಿರುತ್ತವೆ ಎಂಬ ಅತೀ ಸೂಕ್ಷ್ಮ ವಿಚಾರಗಳ ಬಗ್ಗೆಯೂ ತಿಳಿದಿದ್ದರು.

ಸರ್ಜಿಕಲ್ ಸ್ಟ್ರೈಕ್ ನಡೆದಿದ್ದು ಯಾಕೆ?
2016ರ ಸೆಪ್ಟೆಂಬರ್ 18 ರಂದು ಉಗ್ರರು ಜಮ್ಮು ಕಾಶ್ಮೀರದ ಉರಿಯಲ್ಲಿರುವ ಸೇನಾ ಕೇಂದ್ರ ಕಚೇರಿಗೆ ನುಗ್ಗಿ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗಿದ್ದರೆ 4 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಕಳೆದ ಎರಡು ದಶಕದಲ್ಲಿನ ಸೇನೆಯ ಮೇಲಿನ ಡೆಡ್ಲಿ ದಾಳಿ ಇದಾಗಿತ್ತು. ಈ ದಾಳಿಗೆ ಸೇಡು ತೀರಿಸಲು ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.

2016ರ ಸಪ್ಟೆಂಬರ್ 28, 29ರ ಮಧ್ಯರಾತ್ರಿ ವೇಳೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿ ಸರ್ಜಿಕಲ್ ದಾಳಿ ನಡೆಸಿ 20ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿತ್ತು. ಈ ಕಾರ್ಯಾಚರಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಡಿಜಿಎಂಒ ಅಧಿಕಾರಿ ಕಾರ್ಯಾಚರಣೆಯ ವಿವರವನ್ನು ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *