ಥಾಣೆ: ಚಿರತೆಯೊಂದು ಜನನಿವಾಸಿ ಕಟ್ಟಡದೊಳಗೆ ನುಗ್ಗಿ ಆರಾಮಾಗಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿನ ಉಲ್ಲಾಸ್‍ನಗರ ಪ್ರದೇಶದಲ್ಲಿ ಭಾನುವಾರದಂದು ಚಿರತೆ ಕಾಣಿಸಿಕೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ. ಮೊದಲಿಗೆ ಇಲ್ಲಿನ ಸೆಕ್ಯೂರಿಟಿ ಗಾರ್ಡ್‍ವೊಬ್ಬರು ಚಿರತೆಯನ್ನ ನೋಡಿದ್ದಾರೆ. ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಚಿರತೆ ಕಟ್ಟಡದೊಳಗೆ ಓಡಾಡಿರೋ ದೃಶ್ಯಗಳು ಕಂಡುಬಂದಿವೆ. ಕಟ್ಟಡದ ಕಾಂಪೌಂಡ್ ಒಳಗಿನ ಓಣಿಯಲ್ಲಿ ನಡೆದಾಡಿದ ಚಿರತೆ, ಮುಂದಿನ ಗೇಟ್‍ನಿಂದಲೇ ಹೊರಹೋಗಿದೆ.
ನಾನು ಕಟ್ಟಡದ ಮುಂದೆ ಕುಳಿತಿದ್ದಾಗ ಚಿರತೆ ಗೋಡೆಯ ಬಳಿ ಹಾರಿ ಸೊಸೈಟಿಯೊಳಗೆ ಹೋಗೋದನ್ನ ನೋಡಿದೆ ಎಂದು ಸೆಕ್ಯೂರಿಟಿ ಗಾರ್ಡ್ ಮನೋಜ್ ಪಾಟಿಲ್ ಹೇಳಿದ್ದಾರೆ. ಈ ಬಗ್ಗೆ ಸೆಕ್ಯೂರಿಟಿ ಗಾರ್ಡ್ ಅಲ್ಲಿನ ನಿವಾಸಿಗಳನ್ನ ಎಚ್ಚರಿಸೋ ವೇಳೆಗೆ ಚಿರತೆ ಅಲ್ಲಿಂದ ಪರಾರಿಯಾಗಿ ಮತ್ತೊಂದು ಪ್ರದೇಶಕ್ಕೆ ಹೋಗಿತ್ತು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಚಿರತೆ ಪ್ರತ್ಯಕ್ಷವಾದ ಬಗ್ಗೆ ಸುದ್ದಿ ಹರಡಿದ ಬಳಿಕ ಇಲ್ಲಿನ ನಿವಾಸಿಗಳು ಆತಂಕಕ್ಕೀಡಾಗಿ ಮನೆ ಲಾಕ್ ಮಾಡಿಕೊಂಡು ಒಳಗಡೆ ಇದ್ದರು. ಉಲ್ಲಾಸ್‍ನಗರದ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಇಲ್ಲಿನ ನಿವಾಸಿಯೊಬ್ಬರು ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
4-5 ಗಂಟೆಗಳ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ನೀಡಿ ಚಿರತೆಯನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.