ಹುಬ್ಬಳ್ಳಿ: ವಿಮಾನ ನಿಲ್ದಾಣ (Hubballi Airport) ಪರಿಸರದಲ್ಲಿ ಚಿರತೆ ಓಡಾಟ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera) ಸೆರೆಯಾಗಿದೆ. ಶುಕ್ರವಾರ ಸಂಜೆ ಮತ್ತು ಶನಿವಾರ ಬೆಳಗ್ಗಿನ ಜಾವದಲ್ಲಿ ಚಿರತೆ ಓಡಾಟ ನಡೆಸಿರೋದು ಕಂಡುಬಂದಿದೆ.
ಹೌದು. ಕಳೆದ ಐದು ದಿನಗಳ ಹಿಂದೆ ವಿಮಾನ ನಿಲ್ದಾಣದ ಆವರಣದಲ್ಲಿ ಕಾಣಿಸಿಕೊಂಡಿದ್ದ ಚಿರತೆಯ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು (Forest Officers) ಅಲರ್ಟ್ ಆಗಿದ್ದಾರೆ. ಶ್ವಾನದಳದೊಂದಿಗೆ ಎರಡು ಪ್ರತ್ಯೇಕ ಬೋನು ಹಾಗೂ ಗಾಮನಗಟ್ಟಿ ಹೊರವಲಯ ಮತ್ತು ವಿಮಾನ ನಿಲ್ದಾಣದ ಪರಿಸರದಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನ ಅಳವಡಿಸಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಸರಗಳ್ಳತನ – ಆರೋಪಿಗಳು ಅರೆಸ್ಟ್
ವಿಮಾನ ನಿಲ್ದಾಣದ ಆವರಣ ಗೋಡೆಯಿಂದ ಶುಕ್ರವಾರ ಸಂಜೆ 6.40 ರ ವೇಳೆ ಹೊರಗೆ ಜಿಗಿದು ಹೋಗಿರುವ ಚಿರತೆ (Leopard), ಶನಿವಾರ ನಸುಕಿನ ಜಾವ 2 ಗಂಟೆಗೆ ಮತ್ತೆ ಗಾಮನಗಟ್ಟಿ ಕಡೆಯಿಂದ ವಿಮಾನ ನಿಲ್ದಾಣದ ಒಳಗೆ ಜಿಗಿದಿದ್ದು, ಏರ್‌ಪೋರ್ಟ್‌ನ ಆವರಣದಲ್ಲಿರುವ ಗಿಡಗಂಟೆಗಳ ಮಧ್ಯದಲ್ಲಿ ಓಡಾಡಿದೆ. ಆ ನಂತರ ಹೊರಗೆ ಹೋಗಿರುವುದು ಕಂಡುಬಂದಿಲ್ಲ. ಚಿರತೆ ಸಂಚರಿಸುತ್ತಿರುವ ಮಾರ್ಗದಲ್ಲಿಯೇ ಎರಡು ಬೋನುಗಳನ್ನ ಇಟ್ಟಿದ್ದರೂ, ಸುಳಿವು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಂದಿ, ಮೊಲ, ನವಿಲು, ನಾಯಿಗಳು ಗಾಮನಗಟ್ಟಿ ಹೊರವಲಯದಲ್ಲಿ ಹೇರಳವಾಗಿರುವುದರಿಂದ ಬೋನಿನಲ್ಲಿನ ನಾಯಿಯತ್ತ ಚಿರತೆ ಗಮನ ಹೋದಂತಿಲ್ಲ. ಆದರೆ, ಚಿರತೆ ಸಂಚರಿಸುವ ಮಾರ್ಗದಲ್ಲಿಯೇ ಬೋನು ಇಟ್ಟಿರುವುದರಿಂದ ರಾತ್ರಿ ಸಮಯದಲ್ಲಿ ಬೋನಿನಲ್ಲಿ ನಾಯಿ ತಿನ್ನಲು ಪ್ರಯತ್ನಿಸಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳೂರು| ಗೋಮಾಂಸ ಸಾಗಾಟ ಮಾಡುತ್ತಿದ್ದ ಬೈಕ್ ಸವಾರನ ಮೇಲೆ ನೈತಿಕ ಪೊಲೀಸ್‌ಗಿರಿ


