ಚಿಕ್ಕಮಗಳೂರು: ಒಣಗಿಸಿದ್ದ ಅಡಿಕೆ ಬಳಿ ಮಲಗಿದ್ದ ನಾಯಿಯ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಜಾತ್ರೆಮೈದಾನ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಸವರಾಜ್ ತಮ್ಮ ಮನೆ ಮುಂದಿನ ಅಂಗಳದಲ್ಲಿ ಅಡಿಕೆಯನ್ನ ಒಣಗಿಸಿ, ಕಳ್ಳತನ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆ ನಾಯಿಯನ್ನ ಬಿಟ್ಟಿದ್ದರು. ಈ ವೇಳೆ ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ನಾಯಿ ಗಾಢ ನಿದ್ರೆಯಲ್ಲಿದ್ದಾಗ ಸೂಕ್ಷ್ಮ ಹೆಜ್ಜೆಗಳನ್ನಿಡುತ್ತಾ ಅಂಗಳಕ್ಕೆ ಬಂದ ಚಿರತೆ ನಾಯಿಯ ಹತ್ತಿರ ಬಂದು, ಮೊದಲು ನಾಯಿಯನ್ನು ಎಬ್ಬಿಸಿ ನಂತರ ಮಿಂಚಿನ ವೇಗದಲ್ಲಿ ಅದರ ಮೇಲೆ ದಾಳಿ ಮಾಡಿದೆ. ನಾಯಿಯು ಪ್ರತಿರೋಧಿಸುವ ಮೊದಲೇ ಅದರ ಕುತ್ತಿಗೆಯನ್ನ ಬಲವಾಗಿ ಹಿಡಿದು ಕೊಂದು ಹಾಕಿದೆ. ಇದನ್ನೂ ಓದಿ: ನವವಿವಾಹಿತೆ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ – ಗಾನವಿ ಬೇರೊಬ್ಬನನ್ನು ಲವ್ ಮಾಡ್ತಿದ್ಲು; ಸೂರಜ್ ಕುಟುಂಬಸ್ಥರಿಂದ ದೂರು
ನಾಯಿ ಸತ್ತಿದೆ ಎಂದು ಖಚಿತಪಡಿಸಿಕೊಂಡ ನಂತರ ಚಿರತೆ ಅದನ್ನು ಎಳೆದೊಯ್ದಿದೆ. ಚಿರತೆಯ ಚಾಕಚಕ್ಯತೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಚಿರತೆ ಜನವಸತಿ ಪ್ರದೇಶ ಹಾಗೂ ಮನೆ ಅಂಗಳಕ್ಕೆ ಬಂದು ಬೇಟೆಯಾಡಿರುವುದು ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದೆ. ರಾತ್ರಿ ವೇಳೆ ಜನ ಮನೆಯಿಂದ ಹೊರಬರಲು ಭಯಪಡುತ್ತಿದ್ದು, ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಸ್ತೆಬದಿ ನಡೆದುಕೊಂಡು ಹೋಗ್ತಿದ್ದಾಗ ಗುದ್ದಿದ ಸಿಮೆಂಟ್ ಮಿಕ್ಸರ್ ಲಾರಿ – ವ್ಯಕ್ತಿ ಸಾವು

