ಚಿರತೆ ಕಾಟಕ್ಕೆ ಬೆಚ್ಚಿಬಿದ್ದ ಬನಶಂಕರಿ ಲೇಔಟ್‌ ಜನರು

Public TV
1 Min Read

– ಚಿರತೆ ಭಯಕ್ಕೆ ಈ ಏರಿಯಾಗೆ ಆಟೋ, ಕ್ಯಾಬ್‌, ಡೆಲಿವರಿ ಬಾಯ್ಸ್‌ ಬರ್ತಿಲ್ಲ

ಬೆಂಗಳೂರು: ಬನಶಂಕರಿ ಲೇಔಟ್‌ ಬಳಿ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ.

ಬನಶಂಕರಿ ಆರನೇ ಹಂತದ, ಫಸ್ಟ್‌ ಬ್ಲಾಕ್‌ನಲ್ಲಿ ಚಿರತೆ ಕಾಣಿಸಿಕೊಂಡಿದೆ. ಚಿರತೆಯ ಭಯಕ್ಕೆ ಈ ಏರಿಯಾಗೆ ಆಟೋ, ಕ್ಯಾಬ್, ಡೆಲಿವರಿ ಬಾಯ್ಸ್ ಬರುತ್ತಿಲ್ಲ ಎಂದು ಜನರು ನೋವು ತೋಡಿಕೊಂಡಿದ್ದಾರೆ.

ಚಿರತೆಯ ಚಲನವಲನಗಳು ಏರಿಯಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತುರಹಳ್ಳಿ ಫಾರೆಸ್ಟ್ ಪಕ್ಕದ ಬನಶಂಕರಿ ಲೇಔಟ್‌ನಲ್ಲಿ ಎರಡು ಚಿರತೆಗಳು ಓಡಾಡಿರುವುದು ಗೊತ್ತಾಗಿದೆ. ಜನರು ಭಯದಲ್ಲಿ ದಿನ ದೂಡುತ್ತಿದ್ದಾರೆ.

ಏರಿಯಾದಲ್ಲಿದ್ದ ಮೂವತ್ತು ಬೀದಿ ನಾಯಿಗಳ ಪೈಕಿ, ಒಂದೊಂದೇ ನಾಯಿಗಳು ಕಣ್ಮರೆಯಾಗುತ್ತಿವೆ. ಮೂರು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ನಾಯಿ, ಮೇಕೆ, ಕುರಿ, ಹಸುವಿನ ಕರುಗಳನ್ನು ಚಿರತೆ ಹೊತ್ತುಕೊಂಡು ಹೋಗಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಭಯಪಡುತ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಈ ಏರಿಯಾದಲ್ಲಿ ಯಾರೂ ಮನೆಯಿಂದ ಹೊರಗೆ ಬರುತ್ತಿಲ್ಲ. ಈ ಹಿಂದೆಯೂ ತುರಹಳ್ಳಿ ಫಾರೆಸ್ಟ್ ಮುಖ್ಯರಸ್ತೆಯಲ್ಲಿ ಚಿರತೆ ಮರಿಯೊಂದಿಗೆ ಕಾಣಿಸಿಕೊಂಡಿದೆ. ಬಿಎಂಟಿಸಿ ಕಂಡಕ್ಟರ್ ಮೇಲೆ ದಾಳಿ ಮಾಡಿತ್ತು. ಇದೀಗ ಮತ್ತೆ ತುರಹಳ್ಳಿ ಫಾರೆಸ್ಟ್ ಅಕ್ಕಪಕ್ಕದ ಏರಿಯಾಗಳಲ್ಲಿ ತಾಯಿ ಮತ್ತು ಮರಿ ಚಿರತೆ ಪ್ರತ್ಯಕ್ಷವಾಗಿ ಆತಂಕ ಹುಟ್ಟಿಸಿದೆ.

ಚಿರತೆ ಕಾಟಕ್ಕೆ ಈ ಏರಿಯಾಗೆ ಫುಡ್, ಗ್ರೋಸರಿ ಸೇರಿದಂತೆ ಯಾವುದೇ ಡೆಲಿವರಿ ಬಾಯ್ಸ್ ಯಾವುದೇ ವಸ್ತುಗಳನ್ನು ಸಪ್ಲೈ ಮಾಡುತ್ತಿಲ್ಲ. ನೀರಿನ ಟ್ಯಾಂಕರ್‌ನವರು ಬರದೇ ಏರಿಯಾ ನಿವಾಸಿಗಳು ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ.

Share This Article