ಆ.4 ರಿಂದ ಅಮೆರಿಕದಲ್ಲಿ ಶಾಸಕಾಂಗ ಶೃಂಗಸಭೆ – ಸಭಾಪತಿ ಹೊರಟ್ಟಿ ನೇತೃತ್ವದಲ್ಲಿ MLCಗಳ ನಿಯೋಗ ಭಾಗಿ

Public TV
2 Min Read

ಬೆಂಗಳೂರು: ಮುಂದಿನ ಆಗಸ್ಟ್ 4 ರಿಂದ 6ನೇ ತಾರೀಖಿನವರೆಗೆ ಅಮೆರಿಕದ ಬೋಸ್ಟನ್ ನಗರದಲ್ಲಿ (Boston City) ʻಶಾಸಕಾಂಗ ಶೃಂಗಸಭೆ 2025ʼ (Legislative Summit 2025) ನಡೆಯಲಿದ್ದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಪಾಲ್ಗೊಳ್ಳಲಿದ್ದಾರೆ.

ʻರಾಜ್ಯ ಶಾಸಕರ ರಾಷ್ಟೀಯ ಸಮಾವೇಶʼ ಹಾಗೂ ʻರಾಷ್ಟ್ರೀಯ ಶಾಸಕರ ಸಮಾವೇಶʼ ಭಾರತ ಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ಈ ಶೃಂಗಸಭೆಯಲ್ಲಿ ಭಾರತದ ಸಂಸದರು (Indian MPs), ವಿವಿಧ ರಾಜ್ಯಗಳ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರು, ಸಚಿವರು, ರಾಜಕೀಯ ತಜ್ಞರು, ನೀತಿ ನಿರೂಪಕರು, ರಾಜಕೀಯ ಮುತ್ಸದ್ದಿಗಳು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮೂರು ದಿನಗಳ ಶೃಂಗಸಭೆಯಲ್ಲಿ (Summit) ಪ್ರಜಾತಂತ್ರ ಗಟ್ಟಿಗೊಳಿಸುವಿಕೆಯಲ್ಲಿ ಶಾಸನ ಸಭೆಗಳ ಪಾತ್ರ, ಶಾಸನ ಸಭೆಗಳ ಪಕ್ಷಾತೀತ ನಿರ್ವಹಣೆ, ಶಾಸನ ಸಭೆಗಳಿಗೆ ಅರ್ಥಿಕ ಸ್ವಾಯತ್ತತೆ ಸೇರಿದಂತೆ ಹತ್ತು ಹಲವು ವಿಷಯಗಳ ಕುರಿತು ಶೃಂಗ ಸಭೆಯಲ್ಲಿ ಗೋಷ್ಠಿಗಳು, ವಿಚಾರ ಸಂಕಿರಣ, ಸಂವಾದಗಳು ಜರುಗಲಿವೆ. ಇದನ್ನೂ ಓದಿ: ಕೃಷ್ಣಾ ನದಿ ನೀರು ಹಂಚಿಕೆ ವಿವಾದ – ಅಂತಿಮ ವರದಿ ಸಲ್ಲಿಕೆಗೆ ಜು.31ರವರೆಗೆ ಅವಧಿ ವಿಸ್ತರಣೆ

ಶಾಸಕಾಂಗ ಶೃಂಗಸಭೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೆ ಉಪಸಭಾಪತಿ ಎಂ.ಕೆ ಪ್ರಾಣೇಶ್, ವಿರೋಧ ಪಕ್ಷದ ನಾಯಕರಾದ ಛಲವಾದಿ ಟಿ. ನಾರಾಯಣಸ್ವಾಮಿ, ಸಭಾನಾಯಕರು ಹಾಗೂ ಸಣ್ಣ ನೀರಾವರಿ ಸಚಿವರಾದ ಮಾನ್ಯ ಎನ್.ಎಸ್ ಭೋಸ್‌ರಾಜು, ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್. ರವಿಕುಮಾರ್, ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ವಿಧಾನ ಪರಿಷತ್ ಶಾಸಕರಾದ ಭಾರತಿ ಶೆಟ್ಟಿ, ಭಲ್ಕೀಸ್ ಬಾನು, ಹೇಮಲತಾ ನಾಯಕ್, ಮತ್ತು ಮಂಜುನಾಥ ಭಂಡಾರಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: NCERT 8ನೇ ತರಗತಿ ಪಠ್ಯಪುಸ್ತಕ ಪರಿಷ್ಕರಣೆ – ದೆಹಲಿ ಸುಲ್ತಾನರ ಕ್ರೌರ್ಯ, ಮೊಘಲರ ಅಸಹಿಷ್ಣುತೆ ಉಲ್ಲೇಖ

ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿರುವ ಸಭಾಪತಿ ಬಸವರಾಜ ಹೊರಟ್ಟಿರವರ ನೇತೃತ್ವದ ತಂಡ ಶಾಸಕಾಂಗ ಶೃಂಗಸಭೆಯಲ್ಲಿ ಭಾಗವಹಿಸಿ ಪ್ರಸ್ತುತ ರಾಜಕೀಯ ಬೆಳವಣಿಗೆ ಮತ್ತು ನಾಡಿನ ಅಭಿವೃದ್ದಿಯಲ್ಲಿ ಶಾಸಕಾಂಗದ ಪಾತ್ರದ ಬಗ್ಗೆ ಅನೇಕ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಸದರಿ ಶೃಂಗಸಭೆಗೆ ದೇಶಾದ್ಯಂತ ನಾಮ ನಿರ್ದೇಶಿತ ಸಂಸದರು ಮತ್ತು ವಿಧಾನ ಮಂಡಲದ ಶಾಸಕರು, ಸಚಿವರು ಭಾಗವಹಿಸಲಿದ್ದಾರೆ. ಇದೇ ರೀತಿ ಜಗತ್ತಿನಾದ್ಯಂತ ರಾಜಕೀಯ ಧುರೀಣರು ಮತ್ತು ನೀತಿ ನಿರೂಪಕರು ಸೇರಿಂದತೆ ಸುಮಾರು 15,000ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ಶೃಂಗಸಭೆಯಲ್ಲಿ ವಿವಿಧ ಪ್ರಕಾರದ ವಿಷಯಾಧಾರಿತ ಗೋಷ್ಠಿಗಳಲ್ಲಿ ಜಾಗತಿಕ ಪ್ರಸ್ತುತ ರಾಜಕೀಯ ವಿದ್ಯಾಮಾನಗಳು – ಯುವಕರ ಪಾತ್ರ, ಆಧುನಿಕ ತಂತ್ರಜ್ಞಾನದ ಆಧಾರಿತ ಬೆಳವಣಿಗೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ.

ಶೃಂಗಸಭೆಯಲ್ಲಿ ನಡೆಸಲಾಗುವ ಚರ್ಚೆಗಳು ಮತ್ತು ವಿಚಾರ ಮಂಥನಗಳಿಂದ ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಶಾಸನ ಸಭೆಗಳಲ್ಲಿ ಧನಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿಯವರಾದ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ – ಒಡಿಶಾ ವಿಧಾನಸೌಧ ಬಳಿ ಭುಗಿಲೆದ್ದ ಆಕ್ರೋಶ

Share This Article