ದಂತಕಥೆ ಆಶಾ ಭೋಸ್ಲೆ ನಿಧನ – ಮುರ್ಮು, ರಾಗಾ, ಸಿದ್ರಾಮಯ್ಯ, ಡಿಕೆಶಿ ಸೇರಿ ಗಣ್ಯರಿಂದ ಸಂತಾಪ

5 Min Read

Bದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತಿಯ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) (Asha Bhosle) ಅವರು ಇಂದು (ಏ.12) ನಿಧನರಾದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನ ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರಿಂದು ಕೊನೆಯುಸಿರೆಳೆದಿದ್ದಾರೆ.

ಆಶಾ ಭೋಸ್ಲೆ ಅವರ ನಿಧನಕ್ಕೆ ರಾಷ್ಟ್ರಪತಿ ದೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi), ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾ‌ರ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಅದರ ವಿವರ ಕೆಳಗಿದೆ…

ರಾಷ್ಟ್ರಪತಿ ದೌಪದಿ ಮುರ್ಮು
‘ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರ ನಿಧನವು ಸಂಗೀತ ಲೋಕದಲ್ಲಿ ಅಪಾರ ಶೂನ್ಯತೆ ಉಂಟುಮಾಡಿದೆ. ಐಕಾನಿಕ್ ಗಾಯಕಿಯಾಗಿ ಅವರು ಕಟ್ಟಿದ ಅದ್ಭುತ ವೃತ್ತಿಜೀವನವು ಭಾರತದಲ್ಲಿ ಸಂಗೀತದ ಒಂದು ಯುಗವನ್ನೇ ರೂಪಿಸಿದೆ. ಅವರೊಂದಿಗೆ ವೈಯಕ್ತಿಕವಾಗಿ ಸಂವಾದ ನಡೆಸಿದ ನೆನಪುಗಳು ನನಗೆ ಸದಾ ಪ್ರೀತಿಪಾತ್ರ. ಕಲಾವಿದೆಯಾಗಿಯೂ, ವ್ಯಕ್ತಿಯಾಗಿಯೂ ತಮ್ಮದೇ ಆದ ಮೌಲ್ಯಗಳ ಮೇಲೆ ಬದುಕನ್ನು ನಡೆಸಿದ್ದರು. ಮಧುರ ಹಾಗೂ ಶಾಶ್ವತ ಧ್ವನಿಯ ಮೂಲಕ ದಶಕಗಳ ಕಾಲ ಭಾರತೀಯ ಸಂಗೀತವನ್ನು ಅವರು ಸಮೃದ್ಧಗೊಳಿಸಿದ್ದಾರೆ. ಅವರ ಸಂಗೀತ ಶಾಶ್ವತವಾಗಿ ಜೀವಂತವಾಗಿಯೇ ಉಳಿಯಲಿದೆ. ಅವರ ಅಗಲಿಕೆ ಸಂಗೀತ ಪ್ರೇಮಿಗಳಿಗೆ ಅಪೂರಣೀಯ ನಷ್ಟವಾಗಿದೆ. ಅವರ ಕುಟುಂಬದವರು ಹಾಗೂ ಅನೇಕ ಅಭಿಮಾನಿಗಳಿಗೆ ಹೃತ್ತೂರ್ವಕ ಸಂತಾಪಗಳನ್ನು ತಿಳಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
ಭಾರತ ಕಂಡ ಅತ್ಯಂತ ಪ್ರತಿಮಾರೂಪದ ಮತ್ತು ಬಹುಮುಖ ಪ್ರತಿಭೆಯ ಧ್ವನಿಗಳಲ್ಲಿ ಒಬ್ಬರಾದ ಆಶಾ ಭೋಸ್ಲೆ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಭೋಸ್ಲೆ ಅವರ ಸಂಗೀತ ವಿಶ್ವಾದ್ಯಂತ ಲೆಕ್ಕವಿಲ್ಲದಷ್ಟು ಹೃದಯಗಳನ್ನು ತಲುಪಿತ್ತು. ಅದು ಅವರ ಭಾವಪೂರ್ಣ ಮಧುರ ಅಥವಾ ರೋಮಾಂಚಕ ಸಂಯೋಜನೆಗಳಾಗಿರಬಹುದು. ಅವರ ಧ್ವನಿಯು ಕಾಲಾತೀತ ತೇಜಸ್ಸನ್ನು ಹೊಂದಿತ್ತು. ನಾನು ಅವರೊಂದಿಗೆ ನಡೆಸಿದ ಸಂವಹನಗಳನ್ನು ಯಾವಾಗಲೂ ಸ್ಮರಿಸುತ್ತೇನೆ.

ರಾಹುಲ್‌ ಗಾಂಧಿ
ಮಹಾನ್ ಗಾಯಕಿ ಆಶಾ ಭೋಸ್ಲೆ ಅವರ ನಿಧನದ ಸುದ್ದಿ ಅತ್ಯಂತ ಹೃದಯವಿದ್ರಾವಕವಾಗಿದೆ. ಅವರ ಧ್ವನಿಯ ಮೂಲಕ, ಅವರ ಕಲೆ ನಮ್ಮ ನಡುವೆ ಶಾಶ್ವತವಾಗಿ ಅಮರವಾಗಿರುತ್ತದೆ. ಈ ದುಃಖದ ಸಮಯದಲ್ಲಿ, ಅವರ ಅಗಲಿದ ಪ್ರೀತಿಪಾತ್ರರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪ ತಿಳಿಸುತ್ತೇನೆ.

ಸಿದ್ದರಾಮಯ್ಯ
ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಕಳೆದ ಹಲವು ದಶಕಗಳಿಂದ ಸುಮಾರು 12,000ಕ್ಕೂ ಅಧಿಕ ಹಾಡುಗಳ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದ ಸ್ವರ ಸಾಮ್ರಾಜ್ಞಿಯನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ. ತಮ್ಮ ಸುಮಧುರ ಧ್ವನಿ, ಸರಳ ನಡೆ ನುಡಿ, ವಾತ್ಸಲ್ಯ ತುಂಬಿದ ಮಾತುಗಳಿಂದ ಅವರು ಜನಮಾನಸದಲ್ಲಿ ಶಾಶ್ವತ. ಆಶಾ ಭೋಸ್ಲೆಯವರ ನಿಧನದಿಂದ ಹಳೆಯ ಮತ್ತು ಹೊಸ ತಲೆಮಾರಿನ ಸಂಗೀತದ ಬಹುದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಬಂಧು ಮಿತ್ರರು ಹಾಗೂ ಅಭಿಮಾನಿ ಬಳಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಡಿಕೆ ಶಿವಕುಮಾರ್‌
ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರ ನಿಧನದಿಂದ ಅತೀವ ದುಃಖವಾಗಿದೆ. ಅವರು ಭಾರತೀಯ ಸಂಗೀತದಲ್ಲಿ ಬಹುಮುಖತೆಯನ್ನು ಮರು ವ್ಯಾಖ್ಯಾನಿಸಿದ್ದಾರೆ, ತಲೆಮಾರುಗಳಾದ್ಯಂತ ಅಸಂಖ್ಯಾತ ಮರೆಯಲಾಗದ ಹಾಡುಗಳಿಗೆ ತಮ್ಮ ಧ್ವನಿ ನೀಡಿದ್ದಾರೆ ಮತ್ತು ಎಂದಿಗೂ ಮಸುಕಾಗದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ.

ಕೇಂದ್ರ ಸಚಿವ ಹೆಚ್‌ಡಿಕೆ
ಭಾರತೀಯ ಸಂಗೀತ ಪೀಳಿಗೆಯ ದಂತಕಥೆ ಆಶಾ ಭೋಸ್ಲೆ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಕಾಲಾತೀತ ಮಧುರ ಮತ್ತು ಅಸಾಧಾರಣ ಬಹುಮುಖ ಪ್ರತಿಭೆಯಿಂದ ಗುರುತಿಸಲ್ಪಟ್ಟ ಸಂಗೀತ ಜಗತ್ತಿಗೆ ಅವರ ಅಪ್ರತಿಮ ಕೊಡುಗೆ ಕಲಾವಿದರು ಮತ್ತು ಪ್ರೇಕ್ಷಕರಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಅವರ ಕುಟುಂಬ, ಅಭಿಮಾನಿಗಳು ಮತ್ತು ಇಡೀ ಸಂಗೀತ ಬಂಧುಗಳಿಗೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ.

Share This Article