ಐದು ಬಗೆಯ ಹುಳಗಳಿಂದ ಅಡಿಕೆ ನಾಶ-ಆತಂಕದಲ್ಲಿ ಮಲೆನಾಡ ಅಡಿಕೆ ಬೆಳೆಗಾರರು

Public TV
2 Min Read

ಚಿಕ್ಕಮಗಳೂರು: ಕಳೆದ ಏಳೆಂಟು ದಶಕಗಳಿಂದ ಹಳದಿ ಎಲೆ ರೋಗದಿಂದ ಬಳಲುತ್ತಿದ್ದ ಜಿಲ್ಲೆಯ ಶೃಂಗೇರಿ ತಾಲೂಕಿನ ಅಡಿಕೆ ಬೆಳೆಗಾರರು ಅಡಿಕೆಗೆ ಬಾಧಿಸುತ್ತಿರುವ ಹೊಸ ತಳಿಯ ಖಾಯಿಲೆಯಿಂದ ಮತ್ತೆ ಆತಂಕಕ್ಕೀಡಾಗಿದ್ದಾರೆ.

ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಐದು ತರಹದ ಹುಳುಗಳು ಅಡಿಕೆ ತೋಟಕ್ಕೆ ಬಾಧಿಸುತ್ತಿದ್ದು  ಎಲೆ ಚುಕ್ಕಿ ರೋಗಕ್ಕೆ ಬೆಳೆಗಾರರು ಹೈರಾಣಾಗಿದ್ದಾರೆ. ಐದು ತರಹದ ಹುಳುಗಳು ಹಸಿ ಸೋಗೆಯನ್ನು ತಿನ್ನುತ್ತಿವೆ. ಹೀಗೆ ಹಸಿ ಸೋಗೆಯನ್ನು ತಿನ್ನುವ ಹುಳುಗಳು ಅಡಿಕೆ ಮರದ ಸುಳಿಯನ್ನು ತಿಂದರೆ ಅಡಿಕೆ ಮರವೇ ಸಂಪೂರ್ಣ ನಾಶವಾಗುತ್ತೆ ಎಂದು ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.

ಅಡಿಕೆ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ. ಅಡಿಕೆಯನ್ನ ನಂಬಿ ಮಲೆನಾಡು ಭಾಗದಲ್ಲಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಆದರೆ, ಹೊಸ ರೀತಿಯ ಐದು ಹುಳುಗಳು ಅಡಿಕೆ ಬೆಳೆಗಾರರ ಬದುಕನ್ನೇ ಕಿತ್ತು ತಿನ್ನುತ್ತಿವೆ. ಕೆರೆಕಟ್ಟೆ ಭಾಗದಲ್ಲಿ ಕಾಡ್ಗಿಚ್ಚು ಹಾಗೂ ಗುಡ್ಡಕ್ಕೆ ಬೆಂಕಿ ಬೀಳುತ್ತಿದ್ದರಿಂದ ಹುಳುಗಳು ಬೆಂಕಿಗೆ ಬಿದ್ದು ಸಾಯುತ್ತಿದ್ದವು. ಆದರೆ, ಕಳೆದ ಎರಡು ವರ್ಷಗಳಿಂದ ಕಾಡ್ಗಿಚ್ಚು ಕಡಿಮೆಯಾಗಿರುವುದರಿಂದ ಅಡಿಕೆ ತೋಟಕ್ಕೆ ಹುಳುಗಳ ಕಾಟ ಹೆಚ್ಚಾಗಿದೆ ಅಂತಾರೆ ಸ್ಥಳಿಯರು.

ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಸುರಿದ ಕಾರಣ ಕೊಳೆ ರೋಗದ ಜೊತೆ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ. ಕಳೆದ ಬಾರಿ ಈ ಖಾಯಿಲೆ ಕಳಸ ಭಾಗದಲ್ಲಿ ಕಾಣಿಸಿಕೊಂಡಿತ್ತು. ಈ ಬಾರಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಆಗುಂಬೆ ಭಾಗದಲ್ಲಿ ಕಾಣಿಸಿಕೊಂಡಿತ್ತು. ಈಗ ಶೃಂಗೇರಿ ಭಾಗದಲ್ಲಿ ಈ ರೋಗ ಹೆಚ್ಚಾಗಿದ್ದು, ಶೃಂಗೇರಿ ತಾಲೂಕಿನ ಶಿರ್ಲು, ಮುಡುಬ, ಗುಲಗಂಜಿಮನೆ, ಹಾದಿ, ಬಲೆಕಡೆ, ಮಾತೋಳಿ, ಕಾರ್ಕಿ, ಹೆಮ್ಮಿಗೆ ಸೇರಿದಂತೆ ಹತ್ತಾರು ಹಳ್ಳಿಗಳು ಸೇರಿದಂತೆ ಶೇ.80ರಷ್ಟು ತೋಟಗಳಲ್ಲಿ ಈ ರೋಗ ಹೆಚ್ಚಾಗಿದೆ ಎಂದು ಅಡಿಕೆ ಬೆಳೆಗಾರರು ಆತಂಕಗೊಂಡಿದ್ದಾರೆ. ಇದನ್ನೂ ಓದಿ: ವಿಚ್ಛೇದನ ಪಡೆಯುತ್ತಿದ್ದಂತೆ ಹೆಸರು ಬದಲಿಸಿಕೊಂಡ ಸಮಂತಾ

ಅಡಿಕೆ ಮರದ ಗರಿಗಳಲ್ಲಿ ಕಂದು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗಿದ ಚುಕ್ಕಿಗಳು ಕಾಣಿಸಿಕೊಳ್ತಿವೆ. ಹಾಗಾಗಿ, ಗರಿಗಳು ಕೆಂಪಾಗಿ ಮರಗಳು ಸಾಯುತ್ತಿರೋದ ಕಂಡು ಬೆಳೆಗಾರರು ಭಯಗೊಂಡಿದ್ದಾರೆ. ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಿ ಹುಳುಗಳ ನಿಯಂತ್ರಣಕ್ಕೆ ಮುಂದಾಗಬೇಕೆಂದು ಸ್ಥಳಿಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *