ಊಟ, ಹಾಸಿಗೆ ಕೊಡ್ತಾರೆ ಮಲಗಿ ಹೋಗೋಣ ಅಂತಾ ಪ್ರತಿಭಟನೆ ಮಾಡ್ತಿದ್ದಾರೆ: ಲಕ್ಷ್ಮಣ ಸವದಿ

Public TV
1 Min Read

ಬಿಪಿ, ಶುಗರ್ ಸರಿಪಡಿಸಿಕೊಳ್ಳಲು ಪಾದಯಾತ್ರೆ ಮಾಡಬಹುದು ಮಾಡಲಿ

ಬೆಂಗಳೂರು: ನಿಜವಾದ ಹೋರಾಟ ಮಾಡುವುದಾದರೆ ಮೊದಲಿನಿಂದ ಮಾಡುತ್ತಿದ್ದರು. ಈಗ ಊಟ ಕೊಡ್ತಾರೆ, ಹಾಸಿಗೆ ಕೊಡ್ತಾರೆ ಎಂದು ಮಲಗಿ ಹೋಗೋಣ ಅಂತಾ ಪ್ರತಿಭಟನೆ (Protest) ಮಾಡ್ತಿದ್ದಾರೆ ಎಂದು ದೋಸ್ತಿ ನಾಯಕರನ್ನು ಕಾಂಗ್ರೆಸ್ (Congress) ಶಾಸಕ ಲಕ್ಷ್ಮಣ ಸವದಿ (Laxman Savadi) ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಮುಡ ಹಗರಣ (MUDA scam) ನಡೆದಿದೆ ಎನ್ನುತ್ತಿರುವುದು ಯಾವಾಗ? ಹಗರಣ ನಡೆದಿದ್ದರೆ ಯಾರ ಅವಧಿ? ಈಗ ಯಾಕೆ ಆರೋಪ ಮಾಡ್ತಿದ್ದಾರೆ? ಅವರೆ ಸಿಎಂ ಆಗಿದ್ದರು, ಕಂದಾಯ ಸಚಿವರು ಆಗಿದ್ದರು. ಆಗ ಏನು ಮಾಡುತ್ತಿದ್ದರು? ದೊಡ್ಡ ಹಗರಣ ಆಗಿದ್ದರೆ ಮೊದಲೇ ಯಾಕೆ ತಡೆಯಲಿಲ್ಲ. ಕೊನೆಯೆ ಎರಡು ದಿನ ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷದಲ್ಲಿ ನಾಯಕರಿಲ್ಲ, ಅದು ನಿಷ್ಕ್ರಿಯ ಆಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಇವರು ಡ್ರಾಮಾ ಮಾಡ್ತಿದ್ದಾರೆ. ಇದು ಅಹೋರಾತ್ರಿ ಧರಣಿ ಅಲ್ಲ ಡ್ರಾಮಾ ಅಷ್ಟೇ. ವಿಪಕ್ಷದವರು ನಾವು ಜೀವಂತವಾಗಿ ಇದ್ದೇವೆ ಎಂದು ತೋರಿಸಿಕೊಳ್ಳಲು ಈ ಧರಣಿ. ಇನ್ನೂ ಸಾಕಷ್ಟು ಜನರಿಗೆ ಬಿಪಿ, ಶುಗರ್ ಇದೆ. ಆರೋಗ್ಯ ಸರಿಪಡಿಸಿಕೊಳ್ಳಲು ಪಾದಯಾತ್ರೆ ಮಾಡಬಹುದು ಮಾಡಲಿ. ಇನ್ನೂ 20 ವರ್ಷ ಅವರೆಲ್ಲಾ ರಾಜಕಾರಣ ಮಾಡಲು ಫಿಟ್ ಇರಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಮುಡದಲ್ಲಿ 200% ಯಾವುದೇ ಹಗರಣ ನಡೆದಿಲ್ಲ. ಮುಖ್ಯಮಂತ್ರಿಗಳ ಧರ್ಮ ಪತ್ನಿಗೆ ಅವರ ಕುಟುಂಬದಿಂದ ಆಸ್ತಿ ಬಂದಿದೆ. ಈಗ ಕೇಂದ್ರ ಬಜೆಟ್ ವೈಫಲ್ಯ ಮುಚ್ಚಿಕೊಳ್ಳಲು ಮೇಲಿನಿಂದ ಸೂಚನೆ ಬಂದಿದೆ. ಅದಕ್ಕೆ ಇಲ್ಲಿ ಧರಣಿ ನಡೆಯುತ್ತಿದೆ. ಈ ಡ್ರಾಮಾದ ಹಿಂದಿರುವವರು ಯಾರು ಎಂಬುದನ್ನು ಕೆಲವೇ ದಿನಗಳಲ್ಲಿ ಬಹಿರಂಗ ಪಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Share This Article