ಕಾಂಗ್ರೆಸ್ ಕಾರ್ಪೋರೇಟರ್ ಕಿರುಕುಳಕ್ಕೆ ಬೇಸತ್ತು ವಕೀಲೆ ಆತ್ಮಹತ್ಯೆ?

Public TV
2 Min Read

ಬೆಂಗಳೂರು: ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್ ಕಿರುಕುಳ ತಾಳಲಾರದೇ ಎ. ನಾರಾಯಣಪುರ ವಾರ್ಡ್ ನಲ್ಲಿ ವಕಿಲೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಧರಣಿ ಆತ್ಮಹತ್ಯೆ ಮಾಡಿಕೊಂಡ ವಕೀಲೆ. ನಗರದ ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ಎ. ನಾರಾಯಣಪುರ ವಾರ್ಡ್ ಕಾರ್ಪೋರೇಟರ್ ಆಗಿರುವ ಸುರೇಶ್ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಈ ಕಿರುಕುಳದಿಂದ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ದೇವಿ ಆರೋಪಿಸಿದ್ದಾರೆ.

ತಾಯಿಯ ಆರೋಪ ಏನು?
ಧರಣಿಗೆ ಕಾರ್ಪೋರೇಟರ್ ಸುರೇಶ್ ಮನೆಯ ಮುಂಭಾಗದ ಜಾಗದ ವಿಚಾರವಾಗಿ ಕಳೆದ 4 ತಿಂಗಳಿನಿಂದ ಕಿರುಕುಳ ಕೊಡುತ್ತಿದ್ದರು. ಅಲ್ಲದೇ ಕಾರ್ಪೋರೇಟರ್ ಬೆಂಬಲಿಗರಿಂದಲೂ ಹಲ್ಲೆ ಮಾಡಿ, ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದರು ಎಂದು ದೇವಿ ಅವರು ಆರೋಪಿಸಿದ್ದಾರೆ.

ಸುರೇಶ್ ಕಿರುಕುಳದಿಂದಲೇ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ನನಗೆ ನ್ಯಾಯ ನೀಡಿ ಎಂದು ದೇವಿ ಅವರು ಅಂಗಲಾಚಿದ್ದಾರೆ. ಅಲ್ಲದೇ ಧರಣಿ ಸಾವಿಗೆ ಕಾರ್ಪೋರೇಟರ್ ನೇರ ಹೊಣೆ ಎಂದು ವಕೀಲರ ಸಂಘ ಆರೋಪಿಸಿದೆ. ಸೋಮವಾರ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಮುಂಭಾಗದಲ್ಲಿ ಸುರೇಶ್ ಅಟ್ಟಹಾಸದ ವಿರುದ್ಧ ಪ್ರತಿಭಟನೆಯೂ ನಡೆಸಿದ್ದಾರೆ.

ಈ ಹಿಂದೆಯೂ ಸುರೇಶ್ ಕಿರುಕುಳದ ಬಗ್ಗೆ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೆ ಪೊಲೀಸರು ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದಾದ ಬಳಿಕ ಪದೇ ಪದೇ ಧರಣಿ ಮನೆಗೆ ಹೋಗುತ್ತಿದ್ದ ಸುರೇಶ್ ಗಲಾಟೆ ಮಾಡಿ ಬರುತ್ತಿದ್ದ ಎಂದು ಆರೋಪಿಸಿದ್ದಾರೆ.

ಆತ್ಮಹತ್ಯೆ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ನಾಲ್ವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಾದ ಬಳಿಕ ಸುರೇಶ್ ನಾಪತ್ತೆಯಾಗಿದ್ದು, ಫೋನ್ ಸ್ವಿಚ್ ಆಫ್ ಆಗಿದೆ.

ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಧರಣಿ ಸಹೋದರ, ಕಾರ್ಪೋರೇಟರ್ ಮೇಲೆ ದೂರು ನೀಡಿದ ಕಾರಣ ನಮ್ಮ ಮನೆಗೆ ವಿದ್ಯುತ್, ನೀರಿನ ಸಂಪರ್ಕ ಕಡಿತಗೊಳಿಸಲಾಯಿತು. ಪಾಲಿಕೆ ಸದಸ್ಯ ಎನ್ನುವ ಕಾರಣಕ್ಕೆ ಅಕ್ಕಪಕ್ಕದ ಮನೆಯವರು ಏನು ಮಾಡಲಾಗದೇ ಕೈ ಚೆಲ್ಲಿದ್ದರು. ಅಲ್ಲದೇ ನಮ್ಮ ಮೇಲೆಯೇ ದೂರು ದಾಖಲಿಸಿ ನಮ್ಮ ತಾಯಿ, ಸಹೋದರಿಯನ್ನು ಠಾಣೆಯಲ್ಲೇ ಇರಿಸಿದ್ದರು. ಈ ವೇಳೆ ಸಹೋದರಿ ಸ್ನೇಹಿತರ ಸಹಾಯ ಪಡೆದು ಜಾಮೀನು ಪಡೆದು ಹೊರ ಬಂದಿದ್ದರು. ಪೊಲೀಸರು ಕೂಡ ಕಾರ್ಪೋರೇಟರ್ ಬೆಂಬಲಕ್ಕೆ ನಿಂತಿದ್ದರು ಎಂದು ಆರೋಪಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *