ರಾಜ್ಯಕ್ಕೆ ಖುಷಿ ತಂದ ಕಾವೇರಿ- ತೀರ್ಪಿನ ಬಗ್ಗೆ ವಕೀಲ ಕಾತರಕಿ ಮಾತು

Public TV
2 Min Read

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಜಯ ಸಿಕ್ಕಿದ್ದು, ಈ ಬಗ್ಗೆ ವಕೀಲರಾದ ಮೋಹನ್ ಕಾತರಕಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಧನ್ಯವಾದ. ನಮ್ಮ ಜೊತೆ ನಿಂತ ಕರ್ನಾಟಕ ಜನತೆಗೆ ಧನ್ಯವಾದ. ಸದ್ಯಕ್ಕೆ ನಮ್ಮ ಮೇಲೆ ಹೇರಿದ್ದ 192 ಟಿಎಂಸಿ ನೀರು 177.2 ಟಿಎಂಸಿಗೆ ಇಳಿಕೆಯಾಗಿದೆ. ಕರ್ನಾಟಕಕ್ಕೆ ಹೆಚ್ಚುವರಿ 14.75 ಟಿಎಂಸಿ ನೀರು ಸಿಕ್ಕಿದೆ. ಹೀಗಾಗಿ ತುಂಬಾ ಸಂತೋಷವಾಗಿದೆ. ಸುಪ್ರೀಂ ಕೋರ್ಟ್ ಜಡ್ಜ್‍ಗಳಿಗೆ ನನ್ನ ಧನ್ಯವಾದ ತಿಳಿಸುತ್ತೇನೆ. ಇದೊಂದು ಸಮತೋಲನದ ತೀರ್ಪು ಎಂದು ಹೇಳಿದ್ರು.

ಕಾವೇರಿ ತೀರ್ಪಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ತಮಿಳುನಾಡಿಗೆ ಬಿಡಬೇಕಿದ್ದ ನೀರು 192 ಟಿಎಂಸಿ ಯಿಂದ 177 ಟಿಎಂಸಿಗೆ ಇಳಿಕೆಯಾಗಿದೆ. ಕಡಿಮೆ ಮಾಡಿದ್ದಾರೆ. ಇನ್ನೂ ವಿವರವಾಗಿ ಮುಂದೆ ಹೇಳ್ತೀನಿ ಎಂದ್ರು.

ರಾಜ್ಯ ಪರ ವಕೀಲರಾದ ಬ್ರಿಜೇಶ್ ಕಾಳಪ್ಪ ಮಾತನಾಡಿ, ತೀರ್ಪಿನ ಬಗ್ಗೆ ತುಂಬಾ ಸಂತೋಷವಾಗಿದೆ. ಇದನ್ನ ನಿರೀಕ್ಷೆ ಮಾಡಿದ್ದೆ, ಸ್ವಲ್ಪ ಮಟ್ಟಿಗೆ ನಮಗೆ ಬರಬೇಕಿರುವ ನೀರು ಹೆಚ್ಚುತ್ತದೆ ಎಂದಿದ್ದೆ. ನಾವು ಯಾವ ಪ್ರಮಾಣದಲ್ಲಿ ಆಗುತ್ತೆ ಎಂದುಕೊಂಡಿದ್ವಿ, ಆ ಪ್ರಮಾಣದಲ್ಲಿ ಆಗಿಲ್ಲ. ಸ್ವಲ್ಪ ಕಡಿಮೆಯಾಗಿದೆ. ಆದ್ರೂ ಖುಷಿಯ ಸನ್ನಿವೇಶ ಎಂದರು.

ಕರ್ನಾಟಕದ ನೀರಿನ ಹಂಚಿಕೆ ಹೆಚ್ಚಾಗಿರುವುದರಿಂದ ಕೃಷಿ ಪ್ರದೇಶ ಸಹಜವಾಗಿ ಸ್ವಲ್ಪ ಹೆಚ್ಚಾಗುತ್ತೆ. ಬೆಂಗಳೂರಿಗೆ 4.75 ಟಿಎಂಸಿ ಹೆಚ್ಚುವರಿಯಾಗಿದೆ. ಬಿಬಿಸಿ ವರದಿ ಮಾಡಿತ್ತು. ಇದರಿಂದ ಬೆಂಗಳೂರಿಗೆ ತೊಂದರೆಯಾಗುತ್ತದೆ ಎನ್ನಲಾಗಿದೆ. ಈಗ ಬೆಂಗಳೂರಿಗೆ 4.75 ಟಿಎಂಸಿ ನೀರು ನೀಡಲಾಗಿದೆ ಎಂದರು.

ಪ್ರತಿ ತಿಂಗಳು ನೀರು ಬಿಡುವ ವಿಚಾರದ ಬಗ್ಗೆ ಯಾವ ತಿಂಗಳಲ್ಲಿ ಎಷ್ಟು ಬಿಡಬೇಕು ನೋಡಬೇಕು. ಜೂನ್- ಸೆಪ್ಟೆಂಬರ್ ತಿಂಗಳಲ್ಲಿ ನೀರು ಬಿಡುವುದು ನಮಗೆ ಕಷ್ಟವಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಮೇಕೆದಾಟು ಬಗ್ಗೆ ನ್ಯಾಯಾಧೀಶರು ಏನಾದ್ರೂ ಹೇಳಿದ್ರಾ ಎಂದು ಕೇಳೀದ್ದಕ್ಕೆ ಬ್ರಿಜೇಶ್ ಕಾಳಪ್ಪ, ಒಂದು ಜಲವಿದ್ಯುತ್ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅದು ಯಾವ ವಿಚಾರ ಎನ್ನುವುದು ತಿಳಿದು ಬಂದಿಲ್ಲ. ಇವತ್ತು ಸಂಜೆ ತೀರ್ಪಿನ ಪ್ರತಿ ಕೈ ಸೇರಿದ ಬಳಿಕ ಎಲ್ಲ ಮಾಹಿತಿ ತಿಳಿಯುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕಕ್ಕೆ ಹೆಚ್ಚುವರಿ ನೀರು, 15 ವರ್ಷಕ್ಕೆ ನ್ಯಾಯಾಧಿಕರಣ ತೀರ್ಪು ಅನ್ವಯ: ಸುಪ್ರೀಂ ಕೋರ್ಟ್

Share This Article
Leave a Comment

Leave a Reply

Your email address will not be published. Required fields are marked *