ಮುಂಬೈನಲ್ಲಿ ಭಾರೀ ಮಳೆಯಿಂದ ಭೂಕುಸಿತ – ಇಬ್ಬರು ಸಾವು, ಇಂದು ರೆಡ್ ಅಲರ್ಟ್ ಘೋಷಣೆ

Public TV
2 Min Read

– ನಿರಂತರ ಮಳೆಯಿಂದ ರಸ್ತೆಗಳು ಜಲಾವೃತ

ಮುಂಬೈ: ಕಳೆದ ರಾತ್ರಿಯಿಂದಲೂ ಮುಂಬೈನಲ್ಲಿ ನಿರಂತರ ಮಳೆ (Mumbai Rain) ಸುರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ. ದೈನಂದಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ವಿಖ್ರೋಲಿಯಲ್ಲಿ ಭೂಕುಸಿತದಿಂದ (Landslide) ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರೀ ಮಳೆಯ ನಡುವೆ ಇಂದು ಬೆಳಗ್ಗೆ ವಿಖ್ರೋಲಿ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದ ಮೆನೆಯೊಂದು ಧ್ವಂಸವಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಉಳಿದಿಬ್ಬರು ಗಾಯಗೊಂಡಿದ್ದಾರೆ. ಕುಟುಂಬದ ನಾಲ್ವರು ಸದಸ್ಯರು ಮನೆಯಲ್ಲಿದ್ದಾಗಲೇ ದುರಂತ ನಡೆದಿದೆ. ಇದನ್ನೂ ಓದಿ: ಈ ದೇಶಗಳಲ್ಲಿ ಬೀದಿ ನಾಯಿಗಳಿಗೆ ಗ್ಯಾಸ್‌ ಚೇಂಬರ್‌, ದಯಾಮರಣ ಶಿಕ್ಷೆ – ಯಾವ ದೇಶದಲ್ಲಿ ಏನು ಕಾನೂನು?

ಬಲಿಯಾದ ಇಬ್ಬರನ್ನ ಶಾಲು ಮಿಶ್ರಾ ಮತ್ತು ಸುರೇಶ್‌ಚಂದ್ರ ಮಿಶ್ರಾ ಎಂದು ಗುರುತಿಸಲಾಗಿದೆ. ಗಾಯಗೊಂಡ ಆರತಿ ಮಿಶ್ರಾ ಮತ್ತು ರಿತುರಾಜ್ ಮಿಶ್ರಾ ಅವರನ್ನ ರಾಜವಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಭೂಕುಸಿತ ಸಂಭವಿಸಿದ ಮನೆಯ ಅವಶೇಷಗಳನ್ನ ತೆರವುಗೊಳಿಸಲಾಗಿದೆ. ಸಮೀಪದ ಮನೆಯಲ್ಲಿದ್ದ ನಿವಾಸಿಗಳನ್ನ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಜೊತೆಗಿನ ಯುದ್ಧ ಕೊನೆಗೊಳಿಸದ ಹೊರತು ನಮ್ಮ ನಡ್ವೆ ಒಪ್ಪಂದವಿಲ್ಲ – ಪುಟಿನ್‌ಗೆ ಟ್ರಂಪ್‌ ಸ್ಟ್ರೈಟ್‌ ಹಿಟ್‌

ಸಿಯಾನ್, ಕುರ್ಲಾ, ಚೆಂಬೂರ್ ಮತ್ತು ಅಂಧೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ. ಈ ಕುರಿತ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲೂ ಸದ್ದು ಮಾಡುತ್ತಿವೆ. ಈ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆಯು (IMD) ಮುಂಬೈ ಮತ್ತು ನೆರೆಯ ರಾಯಗಢ ಜಿಲ್ಲೆಯಲ್ಲಿ ಇಂದೂ ಸಹ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಿದೆ. ಇದನ್ನೂ ಓದಿ: 3 ಮಕ್ಕಳ ತಂದೆ, 2 ಮಕ್ಕಳ ತಾಯಿ ಲವ್ವಿಡವ್ವಿ – ಪ್ರೇಯಸಿಯನ್ನ ಇರಿದು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ

ಮುಂಬೈ ಪೊಲೀಸರ ಎಚ್ಚರಿಕೆ
ಇನ್ನೂ ನಿರಂತರ ಮಳೆಯ ನಡುವೆ ಮುಂಬೈ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ರವಾನಿಸಿದ್ದಾರೆ. ನಗರದಲ್ಲಿ ಅತಿಯಾದ ನೀರು ರಸ್ತೆಗಳಲ್ಲಿ ನಿಲ್ಲುತ್ತಿರುವುದರಿಂದ ಗೋಚರತೆ ಕಡಿಮೆಯಿದೆ. ಹೀಗಾಗಿ ಜನರು ಅನಗತ್ಯ ಪ್ರಯಾಣ ತಪ್ಪಿಸುವಂತೆ ಸಲಹೆ ನೀಡಿದ್ದಾರೆ.

Share This Article