ವಿಜಯಪುರ: ವಿಮಾನ ಪತನಗೊಂಡು ಎರಡು ದಿನ ಕಳೆದರೂ ಕೂಡ ಜಮೀನಿನಿಂದ ವಿಮಾನ ತೆಗೆದಿಲ್ಲ. ದುರಂತ ನೋಡಲು ಬಂದ ಜನರು ಜಮೀನಿನಲ್ಲಿದ್ದ ಕಬ್ಬು ತುಳಿದು ಹಾಳು ಮಾಡಿದ್ದಾರೆ. ಅಂದಾಜು 5 ಲಕ್ಷ ರೂ. ಪರಿಹಾರ ನೀಡಿ ಎಂದು ಜಮೀನು ಮಾಲೀಕ ನಿಂಗಪ್ಪ ಅವರು ಅಳಲು ತೋಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ಜಿಲ್ಲೆಯ ಬಬಲೇಶ್ವರ (Babaleshwar) ತಾಲೂಕಿನ ಮಂಗಳೂರು (Mangaluru) ಗ್ರಾಮದ ರೈತ ನಿಂಬಣ್ಣ ಎಂಬುವವರ ಜಮೀನಿನಲ್ಲಿ ಖಾಸಗಿ ವಿಮಾನ ಪತನ ಆಗಿದೆ. ವಿಮಾನ ಪತನವಾಗಿ ಎರಡು ದಿನ ಕಳೆದರೂ ಇದುವರೆಗೂ ವಿಮಾನವನ್ನ ಜಮೀನಿನಿಂದ ಹೊರತೆಗೆಯಲಾಗಿಲ್ಲ. ಆಯಿಲ್ ಸೋರಿಕೆಯಾಗಿದೆ. ಈ ದುರಂತ ನೋಡಲು ಬಂದ ನೂರಾರು ಜನರು ಜಮೀನಿನಲ್ಲಿದ್ದ ಕಬ್ಬನ್ನು ತುಳಿದು ಹಾಳು ಗೆಡವಿದ್ದಾರೆ. ಒಟ್ಟು 5 ಎಕರೆ ಜಮೀನು ವಿಮಾನ ದುರಂತದಿಂದ ನಾಶವಾಗಿದೆ. ಈಗ ಸಂಪೂರ್ಣ ಜಮೀನು ಶುಚಿಗೊಳಿಸಿ, ಮತ್ತೆ ಕಬ್ಬಿನ ಬೀಜ ಹಾಕಿ, ಬೆಳೆ ಬೆಳೆಯಬೇಕು. ಇದರಿಂದ ಅಂದಾಜು 5 ಲಕ್ಷ ರೂ. ಖರ್ಚಾಗುತ್ತೆ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಿಜಯಪುರದ ಮಂಗಳೂರಿನಲ್ಲಿ ಖಾಸಗಿ ವಿಮಾನ ಪತನ
ಏನಿದು ಘಟನೆ?
ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಆರ್‌ಎಫ್‌ಟಿಎ ಸಂಸ್ಥೆಯ ತರಬೇತಿ ವಿಮಾನ ಭಾನುವಾರ (ಫೆ.8) ಮಧ್ಯಾಹ್ನ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದ ಕಬ್ಬಿನ ಜಮೀನಿನಲ್ಲಿ ಏಕಾಏಕಿ ಬಿದ್ದಿತ್ತು. ವಿಮಾನದಲ್ಲಿ ತರಬೇತುದಾರ ಪೈಲಟ್ ಕುನಾಲ್ ಹಾಗೂ ಟ್ರೈನಿ ಪೈಲಟ್ ಗೌತಮ್ ಇಬ್ಬರು ಪ್ರಯಾಣಿಸುತ್ತಿದ್ದರು. ಇಬ್ಬರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಬ್ದ ಕೇಳಿ ರೈತರು ಹಾಗೂ ಗ್ರಾಮಸ್ಥರು ದೌಡಾಯಿಸಿ ಇಬ್ಬರನ್ನು ವಿಮಾನದಿಂದ ಹೊರ ತೆಗೆದಿದ್ದಾರೆ. ಬಿದ್ದ ರಭಸಕ್ಕೆ ವಿಮಾನದ ಮುಂಭಾಗ ಮುರಿದು ಎರಡು ತುಂಡಾಗಿದೆ. ಅಂಬುಲೆನ್ಸ್ ಬರಲು ತಡವಾಗಿದ್ದರಿಂದ ಸ್ಥಳೀಯರೇ ಕಾರಿನಲ್ಲಿ ಇಬ್ಬರನ್ನು ಕರೆದುಕೊಂಡು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಸೇರಿದಂತೆ ಪೋಲಿಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಇದನ್ನೂ ಓದಿ: ಹಾರಾಡುತ್ತಿದ್ದಾಗ ಇಂಧನ ಖಾಲಿಯಾಗಿದ್ದು ಹೇಗೆ? – ವಿಮಾನ ಪತನದ ಬಗ್ಗೆ ಮೂಡಿವೆ ಅನುಮಾನ

