ಇಡಿ ಬಂಧನ ಪ್ರಶ್ನಿಸಿ ಹೇಮಂತ್ ಸೋರೆನ್ ಅರ್ಜಿ ವಿಚಾರಣೆಗೆ ಒಪ್ಪದ ಸುಪ್ರೀಂಕೋರ್ಟ್

Public TV
2 Min Read
– ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸೂಚನೆ

ನವದೆಹಲಿ : ಭೂ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿದ ಜಾರಿ ನಿರ್ದೇಶನಾಲಯ (ED) ನಿರ್ಧಾರ ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ (Hemanth Soren) ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ. ನ್ಯಾ. ಸಂಜೀವ್ ಖನ್ನಾ ನೇತೃತ್ವದ ತ್ರಿ ಸದಸ್ಯ ಪೀಠವು ಹೈಕೋರ್ಟ್ ಸಂಪರ್ಕಿಸುವಂತೆ ಸೂಚನೆ ನೀಡಿದೆ.

ನಾವು ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ, ನೀವು ಏಕೆ ಮೊದಲು ಸುಪ್ರೀಂಕೋರ್ಟ್‌ ಸಂಪರ್ಕಿಸಿದ್ದೀರಿ? ನ್ಯಾಯಾಲಯಗಳು ಎಲ್ಲರಿಗೂ ತೆರೆದಿರುತ್ತವೆ, ನಾವು ಒಬ್ಬ ವ್ಯಕ್ತಿಗೆ ಅವಕಾಶ ನೀಡಿದರೆ ಎಲ್ಲರಿಗೂ ಅವಕಾಶ ನೀಡಬೇಕಾಗುತ್ತದೆ.‌ ನೀವು ಮೊದಲು ಜಾರ್ಖಂಡ್ ಹೈಕೋರ್ಟ್‌ಗೆ ತೆರಳಿ ಎಂದು ನ್ಯಾ. ಸಂಜೀನ್ ಖನ್ನಾ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೋರೆನ್ ಪರ ವಕೀಲ ಕಪಿಲ್ ಸಿಬಲ್, ನಾವು ಮುಖ್ಯಮಂತ್ರಿಯನ್ನು ಪ್ರತಿನಿಧಿಸುತ್ತಿದ್ದೇವೆ ಪ್ರಕರಣ ಗಂಭೀರವಾಗಿದೆ ಎಂದು ವಾದಿಸಿದರು.

ಇದಕ್ಕೆ ಪ್ರತಿಯಾಗಿ ಉತ್ತರಿಸಿದ ನ್ಯಾ ಸಂಜೀನ್ ಖನ್ನಾ, ದಯವಿಟ್ಟು ಹೈಕೋರ್ಟ್‌ಗೆ ಹೋಗಿ, ನಾವು ಮಧ್ಯಪ್ರವೇಶಿಸುವುದಿಲ್ಲ. ನಾವು ಆರ್ಟಿಕಲ್ 32 ರ ಅಡಿಯಲ್ಲಿ ಪ್ರಸ್ತುತ ಅರ್ಜಿಯನ್ನು ಪರಿಗಣಿಸಲು ಒಲವು ಹೊಂದಿಲ್ಲ. ಆರ್ಟಿಕಲ್ 226 ರ ಅಡಿಯಲ್ಲಿ ನ್ಯಾಯವ್ಯಾಪ್ತಿಯ ಹೈಕೋರ್ಟ್ ಅನ್ನು ಸಂಪರ್ಕಿಸಲು ಮುಕ್ತವಾಗಿ ಬಿಡುತ್ತೇವೆ. ಹೈಕೋರ್ಟ್‌ನಲ್ಲಿ (High Court) ಅರ್ಜಿ ಸಲ್ಲಿಸಲಾಗಿದೆ ಮತ್ತು ಇನ್ನೂ ಬಾಕಿ ಇದೆ ಎಂದು ನಮಗೆ ತಿಳಿಸಲಾಗಿದೆ. ನಂತರ ಮತ್ತೊಂದು ಮನವಿ ಸಲ್ಲಿಸಲಾಗಿದೆ. ಆರ್ಟಿಕಲ್ 226 ರ ಅಡಿಯಲ್ಲಿ ಅದನ್ನು ನಂತರ ಹಿಂತೆಗೆದುಕೊಳ್ಳಲಾಯಿತು. ಅರ್ಜಿಯನ್ನು ತಿದ್ದುಪಡಿ ಮಾಡಲು ಅರ್ಜಿದಾರರಿಗೆ ಮುಕ್ತವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಹೇಮಂತ್‌ ಸೋರೆನ್‌ ತಂದೆಯೂ ಹಿಂದೆ ಜೈಲುಪಾಲು!

ಸೋರೆನ್‌ ಅರೆಸ್ಟ್: ಭೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಬಳಿಕ ಹೇಮಂತ್‌ ಸೋರೆನ್‌ ಅವರನ್ನು ಬುಧವಾರ ಸಂಜೆ ಬಂಧಿಸಲಾಗಿತ್ತು. ಬಳಿಕ ಗುರುವಾರ ಮಧ್ಯಾಹ್ನ ಅವರನ್ನು ರಾಂಚಿಯ PMLA ಕೋರ್ಟಿಗೆ ಹಾಜರುಪಡಿಸಲಾಯಿತು. ಈವೇಳೆ ಇಡಿ 10 ದಿನಗಳ ಕಾಲ ಕಸ್ಟಡಿಗೆ ಕೋರಿತ್ತು. ಆದರೆ ನ್ಯಾಯಾಲಯ ಸೋರೆನ್ ಅವರನ್ನು ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬುಧವಾರ ಭಾರೀ ಭದ್ರತೆ ನಡುವೆ ರಾಂಚಿಯ ಸಿಎಂ ನಿವಾಸಕ್ಕೆ ಬಂದ ಇಡಿ ಅಧಿಕಾರಿಗಳು ಹೇಮಂತ್ ಸೋರೆನ್‌ಗೆ ಪ್ರಶ್ನೆಗಳನ್ನು ಕೇಳಿದ್ದರು. ಸತತ 8 ಗಂಟೆಯ ವಿಚಾರಣೆಯ ಬಳಿಕ ಇಡಿ ಬಂಧಿಸಿತ್ತು. ಮುಂಜಾಗ್ರತಾ ಕ್ರಮವಾಗಿ ರಾಂಚಿಯಲ್ಲಿ ಭದ್ರತೆಗೆ 7ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ನಡುವೆ ಹೇಮಂತ್‌ ಸೋರೆನ್‌ ಅವರು ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಸೋಮವಾರ ಅಧಿಕಾರಿಗಳು ದಾಳಿ ನಡೆಸಿದ್ದರ ಕುರಿತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ರಾಂಚಿಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ. ‌

Share This Article