ಜಮೀನು ವಿವಾದ – ಕಾರಿಗೆ ಬೆಂಕಿ ಹಚ್ಚಿ, ಪರಸ್ಪರ ಕಲ್ಲು ತೂರಾಟ ಮಾಡಿ ಆಕ್ರೋಶ

Public TV
2 Min Read

ಚಿಕ್ಕಬಳ್ಳಾಪುರ: ಜಮೀನು ವಿವಾದದಲ್ಲಿ ದಾಯಾದಿಗಳ ನಡುವೆ ಘರ್ಷಣೆಯಾಗಿ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೊಮ್ಮೆಪಲ್ಲಿಯಲ್ಲಿ ನಡೆದಿದೆ.

ಏನಿದು ಘಟನೆ?: ಬೊಮ್ಮೆಪಲ್ಲಿ ಗ್ರಾಮದ ಲೇಟ್ ಬಳ್ಳಾರಿ ಮಂಜುನಾಥರೆಡ್ಡಿ ಅವರ ಪತ್ನಿ, ಗ್ರಾಮ ಪಂಚಾಯಿತಿ ಸದಸ್ಯೆ ನಳಿನಿ ಮತ್ತು ಅವರ ಸಂಬಂಧಿಕ ಶಿವಾರೆಡ್ಡಿ ಅವರ ನಡುವೆ ಜಮೀನು ವಿವಾದವಾಗಿದ್ದು, ಶುಕ್ರವಾರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂಬಂಧ ಇವರು ಬಟ್ಲಹಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದರು. ಆದರೆ ಶನಿವಾರ ಸಂಜೆ ಮತ್ತೆ ಇವರಿಬ್ಬರ ನಡುವೆ ಜಮೀನು ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದ್ದು, ಅತಿರೇಕಕ್ಕೆ ಹೋಗಿದೆ.

ಜಮೀನು ವಿವಾದ ಏರ್ಪಟ್ಟು, ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ನಂತರ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ಮಾಡಿಕೊಂಡಿದ್ದಾರೆ. ಈ ಕಲ್ಲು ತೂರಾಟದಲ್ಲಿ ಹಲವರು ಗಾಯಗೊಂಡಿದ್ದಲ್ಲದೆ, ಗುಂಪೊಂದು ಮಾರುತಿ ಓಮ್ನಿ ವ್ಯಾನಿಗೆ ಬೆಂಕಿ ಇಟ್ಟಿದೆ. ಮತ್ತೊಂದು ಕಾರನ್ನು ಕಲ್ಲು ಮತ್ತು ದೊಣ್ಣೆಗಳಿಂದ ಗಾಜುಗಳನ್ನು ಪುಡಿ ಪುಡಿ ಮಾಡಿ ಜಖಂ ಮಾಡಲಾಗಿದೆ. ಈ ಹಿನ್ನೆಲೆ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ನ್ಯುಮೋನಿಯಾದಿಂದ ಮೃತಪಟ್ಟ ಪತ್ನಿಯ ನೆನಪಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ ಪತಿ!

ಈ ವೇಳೆ ನಳಿನಿ ಅವರಿಗೆ ಬೆಂಬಲವಾಗಿ ಬಾಗೇಪಲ್ಲಿ, ಚೇಳೂರು ಮತ್ತಿತರ ಕಡೆಯಿಂದ ಐದಾರು ಕಾರುಗಳಲ್ಲಿ ಹಲವು ಜನರು ಬಂದಿದ್ದರು. ಈ ಸಮಯದಲ್ಲಿ ನಳಿನಿ ಮತ್ತು ಶಿವಾರೆಡ್ಡಿ ಬೆಂಬಲಿತ ಎರಡು ಗುಂಪುಗಳು ಮಾತಿಗೆ ಮಾತು ಬೆಳೆಸಿಕೊಂಡು ಕೈ-ಕೈ ಮಿಲಾಯಿಸಿಕೊಂಡಿದಲ್ಲದೆ ಪರಸ್ಪರ ಕಲ್ಲು ತೂರಾಟ ಮಾಡಿಕೊಂಡಿದ್ದಾರೆ.

ಕಲ್ಲು ತೂರಾಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ನಳಿನಿ ಗುಂಪಿನ ಬಾಗೇಪಲ್ಲಿಯ ಆಂಜಿ ಎಂಬಾತನಿಗೆ ತೀವ್ರವಾಗಿ ಗಾಯವಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಬಟ್ಲಹಳ್ಳಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದೇ ವೇಳೆ ಗುಂಪೊಂದು ಗ್ರಾಮ ಪಂಚಾಯಿತಿ ಸದಸ್ಯ ನಳಿನಿ ಅವರಿಗೆ ಸೇರಿದ ಮಾರುತಿ ಓಮ್ನಿ ಕಾರಿಗೆ ಬೆಂಕಿ ಇಟ್ಟಿದ್ದು, ಅದು ಸಹ ಸಂಪೂರ್ಣ ಭಸ್ಮವಾಗಿದೆ. ಇದನ್ನೂ ಓದಿ: ಕುಖ್ಯಾತ ಹ್ಯಾಕರ್ ಶ್ರೀಕಿ ಬಂಧನ

ನಳಿನಿ ಅವರಿಗೆ ಬೆಂಬಲವಾಗಿ ಬೇರೆ ಊರಿನಿಂದ ಕಾರಿನಲ್ಲಿ ಬಂದಿದ್ದರು ಎನ್ನಲಾದ ಒಂದು ಕಾರನ್ನು ಕಲ್ಲು ದೊಣ್ಣೆಗಳಿಂದ ಗಾಜುಗಳನ್ನು ಪುಡಿ ಪುಡಿ ಮಾಡಿ ಧ್ವಂಸಗೊಳಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿರುವ ಬಟ್ಲಹಳ್ಳಿ ಪಿಎಸ್‍ಐ ನಾರಾಯಣಸ್ವಾಮಿ ಮತ್ತು ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ, ಗ್ರಾಮದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಗಲಾಟೆ ಬೂದಿ ಮುಚ್ಚಿದ ಕೆಂಡದಂತೆ ಇದ್ದು, ಮತ್ತೆ ಭುಗಿಲೇಳುವ ಸಂಭವ ಸಹ ಇದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *