Viral Video: ರಸ್ತೆಯಲ್ಲೇ 1 ಕೋಟಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಸುಟ್ಟು ಹಾಕಿದ್ರು!

Public TV
1 Min Read

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ನಡುರಸ್ತೆಯಲ್ಲಿಯೇ ವಾಹನಗಳು ಬೆಂಕಿಗಾಹುತಿಯಾಗುವ ಪ್ರಕರಣಗಳು ನಡೆಯುತ್ತವೆ. ಆದರೆ ಹೈದರಾಬಾದ್‌ನಲ್ಲಿ ಮಾತ್ರ 1 ಕೋಟಿ ಮೌಲ್ಯದ ಕಾರಿಗೆ ರಸ್ತೆಯಲ್ಲಿಯೇ ಬೆಂಕಿ ಹಚ್ಚಿರುವ ವಿಚಿತ್ರ ಘಟನೆಯೊಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ ಹೈದರಾಬಾದ್ ಹೊರವಲಯದ ಮಾಮಿಡಿಪಲ್ಲಿ ರಸ್ತೆಯಲ್ಲಿ ಏಪ್ರಿಲ್‌ 13 ರಂದು ನಡೆದಿದೆ. ಕಾರಿಗೆ ಬೆಂಕಿಯಿಟ್ಟವನನ್ನು ಅಹ್ಮದ್‌ ಎಂದು ಗುರುತಿಸಲಾಗಿದೆ. ಸದ್ಯ ರಸ್ತೆಯಲ್ಲಿಯೇ 1 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ (Lamborghini) ಸ್ಪೋರ್ಟ್ಸ್‌ ಕಾರು (Luxury Sports Car) ಧಗಧಗಿಸುತ್ತಿರುವ ವೀಡಿಯೋ ವೈರಲ್‌ ಆಗಿದೆ. ಇದನ್ನೂ ಓದಿ: ಮಾಲ್ಡೀವ್ಸ್‌ಗೆ ಅಗತ್ಯ ವಸ್ತುಗಳ ರಫ್ತಿಗೆ ಭಾರತ ಬಂದರು ನಿರ್ಬಂಧ

ನಡೆದಿದ್ದೇನು..?: ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟಗಾರ ನೀರಜ್ ಎಂಬಾತ ಲ್ಯಾಂಬೋರ್ಗಿನಿ ಸ್ಪೋರ್ಟ್ಸ್‌ ಕಾರನ್ನು ಮಾರಲು ನಿರ್ಧರಿಸಿದ್ದರು. ಹೀಗಾಗಿ ಅವರು ತನ್ನ ಸ್ನೇಹಿತರಿಗೆ ಖರೀದಿದಾರರನ್ನು ಹುಡುಕುವಂತೆ ಹೇಳಿದ್ದರು. ಅಂತೆಯೇ ಸ್ನೇಹಿತ ಅಮನ್‌ ಮತ್ತೊಬ್ಬ ಸ್ನೇಹಿತನ ಜೊತೆ ಅಹ್ಮದ್‌ ಎಂಬಾತನಿಗೆ ಕಾರು ತೋರಿಸಲೆಂದು ತೆಗೆದುಕೊಂಡು ಹೋಗಿದ್ದನು.

ಕಾರು ಖರೀದಿ ವಿಚಾರದ ಕುರಿತು ಅಮನ್‌ ಸ್ನೇಹಿತ ಹಾಗೂ ಅಹ್ಮದ್ ನಡುವೆ ಮಾತುಕತೆ ನಡೆದಿದೆ. ಈ ವೇಳೆ ಇಬ್ಬರ ನಡುವಿನ ಹಣದ ಚರ್ಚೆ ವಿಕೋಪಕ್ಕೆ ಹೋಗಿದೆ. ಆಗ ಇಬ್ಬರನ್ನು ಸಮಾಧಾನಪಡಿಸಲು ಅಮನ್ ಮುಂದಾಗಿದ್ದಾರೆ. ಆದರೆ‌ ಮಾತಿನ ಚಕಮಕಿ ತಾರಕ್ಕೇರಿ ಗುಂಪೊಂದು ಅಮನ್ ನನ್ನು ತಳ್ಳಿ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆ ಎಂಬುದಾಗಿ ಆರೋಪಿಸಲಾಗಿದೆ.

ಸದ್ಯ ಲ್ಯಾಂಬೋರ್ಗಿನಿ ಕಾರಿಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ನೀರಜ್ ಸ್ಥಳಿಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Share This Article