ಡಿಕೆಶಿ ಪರಮಾಪ್ತೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಬಿಜೆಪಿ ಗಾಳ?

Public TV
1 Min Read

ಬೆಂಗಳೂರು: ಆಪರೇಷನ್ ಕಮಲದ ಹೊಡೆತಕ್ಕೆ ಕಾಂಗ್ರೆಸ್, ಜೆಡಿಎಸ್ ಶಾಸಕರೇ ರಾಜೀನಾಮೆ ಕೊಟ್ಟು ಬಿಜೆಪಿಗೆ ಜೈ ಅಂದಿದ್ದಾರೆ. ಇದೀಗ ಡಿ.ಕೆ.ಶಿವಕುಮಾರ್ ಅವರ ಪರಮಾಪ್ತೆ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಗಾಳ ಹಾಕಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು 5 ದಿನಗಳ ಹಿಂದೆ ಬೆಂಗಳೂರಿನ ಬಸವೇಶ್ವರನಗರ ಸಮೀಪದ ಮನೆಯೊಂದರಲ್ಲಿ ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ಅವರನ್ನ ಭೇಟಿ ಮಾಡಿ ಬಿಜೆಪಿಗೆ ಆಹ್ವಾನಿಸಿದ್ದಾರೆ. ನಿನ್ನನ್ನ ನನ್ನ ಮಗಳಂತೆ ನೋಡಿಕೊಳ್ಳುತ್ತೇನೆ. ರಾಜೀನಾಮೆ ಕೊಟ್ಟು ಬಾ ಎಂದು ಸತತ ಒಂದು ಗಂಟೆಗಳ ಕಾಲ ಮನವೊಲಿಕೆಗೆ ಯತ್ನಿಸಿದ್ದಾರೆ. ಅದರಲ್ಲೂ ಡಿಕೆಶಿಯ ಪರಮ ಭಕ್ತಿಯ ದೈವ ಮಾನವನ ಸನ್ನಿಧಿಯಲ್ಲೇ ಬಿಎಸ್‍ವೈ ಆಪರೇಷನ್‍ಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಚ್ಚರಿಯ ವಿಷಯವೆಂದರೆ ಸಚಿವ ಡಿ.ಕೆ ಶಿವಕುಮಾರ್ ಅತಿಯಾಗಿ ನಂಬುವ ದೈವ ಮಾನವ ನೊಣವಿನ ಕೆರೆ ಅಜ್ಜಯ್ಯ ಇದ್ದ ನಿವಾಸದಲ್ಲೇ ಈ ಆಪರೇಷನ್ ಯತ್ನ ನಡೆದಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೊಣವಿನ ಕೆರೆ ಅಜ್ಜಯ್ಯನ ದರ್ಶನಕ್ಕೆ ತೆರಳಿದ್ದರು. ಅಲ್ಲಿಗೆ ಯಡಿಯೂರಪ್ಪ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಅಜ್ಜಯ್ಯನ ದರ್ಶನಕ್ಕೆ ಹೋಗಿದ್ದರು. ಈ ವೇಳೆ ಬಸವೇಶ್ವರ ನಗರದ ನಿವಾಸದಲ್ಲಿ ಅಚಾನಕ್ಕಾಗಿ ಸಿಕ್ಕ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನ 1 ಗಂಟೆಗಳ ಕಾಲ ಸತತವಾಗಿ ಮನವೊಲಿಕೆಗೆ ಯತ್ನಿಸಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

ಮಗಳೇ ಎಂದು ಪ್ರೀತಿಯಿಂದ ಮನ ಪರಿವರ್ತನೆಗೆ ಯತ್ನಿಸಿದ್ದಾರೆ. ಹಿರಿಯ ನಾಯಕನ ಮಾತಿಗೆ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಯಾವುದನ್ನು ಯೋಚಿಸಿ ಹೇಳುತ್ತೇನೆ ಎಂದು ಹೇಳಿ ಎದ್ದು ಬಂದಿದ್ದಾರೆ. ಹೀಗೆ ಶತಾಯ ಗತಾಯ ಸರ್ಕಾರ ಉಳಿಸಿಕೊಳ್ಳಲೇಬೇಕು ಎಂದು ಹೋರಾಡುತ್ತಿರುವ ಡಿ.ಕೆ.ಶಿವಕುಮಾರ್ ಅವರ ಆಪ್ತ ಶಾಸಕಿಯನ್ನೇ ಆಪರೇಷನ್‍ಗೆ ಯತ್ನಿಸಿ ಯಡಿಯೂರಪ್ಪ ಡಿಕೆಶಿಗೆ ಶಾಕ್ ಕೊಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *