ಆಸ್ಪತ್ರೆಯಿಂದ ಲಕ್ಷ್ಮಿ ಹೆಬ್ಬಾಳ್ಕರ್‌ ಡಿಸ್ಚಾರ್ಜ್‌ – ಸಚಿವೆ ಭಾವುಕ

Public TV
2 Min Read

– ಬದುಕಿನ ಕೊನೇ ಹಂತ ನೋಡಿ ಬದುಕಿ ಬಂದಿದ್ದೇನೆ ಎಂದ ಸಚಿವೆ

ಬೆಳಗಾವಿ: ಕಾರು ಅಪಘಾತಕ್ಕೀಡಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಅವರಿಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಕಳೆದ 13 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಹೆಬ್ಬಾಳ್ಕರ್‌ ಗುಣಮುಖರಾಗಿ ಹೊರಬಂದಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಇದೊಂದು ಆಗಬಾರದ ದುರ್ಘಟನೆ. ಇವತ್ತು ಬದುಕಿನ ಕೊನೆಯ ಹಂತವನ್ನ ನೋಡಿ ಹೋರಾಟ ಮಾಡಿ ಬದುಕಿ ಬಂದಿದ್ದೇನೆ. ಇದಕ್ಕೆಲ್ಲ ಹಿರಿಯರ ಆಶೀರ್ವಾದ, ತಂದೆ ತಾಯಿ ಆಶೀರ್ವಾದ ಕಾರಣ. ಬಹಳಷ್ಟು ಜನರಿಗೆ ಧನ್ಯವಾದ ಹೇಳ್ತೀನಿ. ಏಕೆಂದರೆ ರಾಜ್ಯದ ಮಠಾಧೀಶರು, ಪೂಜ್ಯರು ಶೀಘ್ರ ಗುಣಮುಖರಾಗಿ ಅಂತಾ ಆಶೀರ್ವಾದ ಮಾಡಿದರು. ಇದು ನನಗೆ ಬಹಳಷ್ಟು ಶಕ್ತಿ, ಧೈರ್ಯ ತಂದುಕೊಟ್ಟಿತು ಎಂದರು.

ಅಲ್ಲದೇ ರಾಜ್ಯದ ಸಿಎಂ, ಡಿಸಿಎಂ, ಹಾಲಿ ಮತ್ತು ಮಾಜಿ ಶಾಸಕರು, ಸಚಿವರು ಬಂದು ನನ್ನ ಅರೋಗ್ಯ ವಿಚಾರಿಸಿದ್ರು, ಶೀಘ್ರ ಚೇತರಿಕೆಯಾಗುವಂತೆ ಹಾರೈಸಿದ್ರು. ಸುರ್ಜೇವಾಲಾ ಅವರು ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದ್ರು. ಅವರೆಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಮುಖ್ಯವಾಗಿ ಡಾ.ರವಿ ಪಾಟೀಲ್ ಅವರ ವೈದ್ಯರ ತಂಡಕ್ಕೆ ಧನ್ಯವಾದ ಹೇಳ್ತೀನಿ. ಇದರೊಂದಿಗೆ ಕ್ಷೇತ್ರದ ಎಲ್ಲ ಮತದಾರರು, ನನಗಾಗಿ ಪೂಜೆ ಸಲ್ಲಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಆ ಕ್ಷಣ ಪುನರ್ಜನ್ಮ ಅನಿಸುತ್ತೆ ಎಂದು ಭಾವುಕರಾದರು.

ನನಗೆ ಜವಾಬ್ದಾರಿ ಬಹಳ ಇದೆ, ಮಾರ್ಚ್ ನಲ್ಲಿ ಬಜೆಟ್ ಮಂಡನೆ ಮಾಡಬೇಕು. ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೆಲಸ ಮಾಡ್ತಿದ್ದೇನೆ. ವೈದ್ಯರು ಇನ್ನೂ ಮೂರು ವಾರಗಳ ಕಾಲ ರೆಸ್ಟ್ ಹೇಳಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಲ್ಲು ಹೃದಯ ಅಥವಾ ಹೃದಯ ಇಲ್ಲದ ಜನ ಅಂತಲೇ ಹೇಳಬಹುದು. ಅವರ ಆರೋಪಕ್ಕೆ ನಾನು ಉತ್ತರ ಕೊಡಲ್ಲ. ಅವರ ಬುದ್ಧಿ ಹುಡಕಬೇಕಾಗುತ್ತೆ ಎಂದು ಛಲವಾದಿ ನಾರಾಯಣಸ್ವಾಮಿಗೆ ತಿರುಗೇಟು ನೀಡಿದರು.

ಸಂಕ್ರಾಂತಿ ಹಬ್ಬದಂದು ಹಟ್ಟಿಹೊಳಿ ವೀರಭದ್ರೇಶ್ವರ ದೇವಸ್ಥಾನ ಹಾಗೂ ಮಲಪ್ರಭಾ ನದಿ ದಂಡೆಯಲ್ಲಿ ಪುಣ್ಯ ಸ್ಥಾನಕ್ಕೆ ಹೋಬೇಕಿತ್ತು. ಹಾಗಾಗಿ ಪ್ಲ್ಯಾನ್‌ ಮಾಡಿ ಹೊರಟಿದ್ದೆವು. ತುರ್ತಾಗಿ ಹೊರಟ ಕಾರಣ ಎಸ್ಕಾರ್ಟ್ ಹೇಳಲಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದರು.

ಹೆಬ್ಬಾಳ್ಕರ್‌ ಅವರಿಗೆ ಏನಾಗಿತ್ತು?
ಇದೇ ತಿಂಗಳ ಜ.14ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಸಚಿವೆ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

Share This Article