ಮೈಸೂರು: ಲಕ್ಷ್ಮಣ ತೀರ್ಥ ನದಿ ಭೋರ್ಗರೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹುಣಸೂರು ಪಟ್ಟಣದ ಒಳಗಿನ ನೂತನ ವಸತಿ ಬಡಾವಣೆ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ಜಿಲ್ಲೆಯ ಹುಣಸೂರು ಪಟ್ಟಣದ ಬೈಪಾಸ್ ಬಳಿ ಇರುವ ಲೇಔಟ್ ಸಂಪೂರ್ಣವಾಗಿ ಮುಳುಗಿದೆ. ಐವತ್ತಕ್ಕೂ ಹೆಚ್ಚು ಮನೆಗಳು, ಶಾಲೆ ಎಲ್ಲವೂ ಮುಳುಗಿವೆ. ರಾತ್ರೋರಾತ್ರಿ ಲಕ್ಷ್ಮಣ ತೀರ್ಥ ನದಿಯ ರಭಸ ಹೆಚ್ಚಾದ ಕಾರಣ ಜನರು ರಾತ್ರಿಯೇ ಮನೆ ಬಿಟ್ಟು ಸುರಕ್ಷಿತ ಸ್ಥಳ ಸೇರಿದ್ದಾರೆ.
ನಾವು ಇಲ್ಲಿಗೆ ಬಂದು ಒಂದು ತಿಂಗಳಾಗಿತ್ತು. ಆದರೆ ಇದ್ದಕ್ಕಿದ್ದಂತೆ ಮನೆಗೆ ನೀರು ನುಗ್ಗಿದೆ. ತಕ್ಷಣ ನಾವು ಮನೆಯಲ್ಲಿರುವ ಸಾಮಾನು ಬಿಟ್ಟು ಮಕ್ಕಳನ್ನು ಕರೆದುಕೊಂಡು ಹೊರಗೆ ಬಂದಿದ್ದೇವೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.
ಲಕ್ಷ್ಮಣ ತೀರ್ಥ ಬಿರುಸಿನಿಂದ ಹರಿಯುತ್ತಿರುವ ಪರಿಣಾಮ ಎರಡು ದಿನಗಳಿಂದ ಮನೆಗಳಿಗೆ ನೀರು ನುಗ್ಗಿದೆ. ಎರಡು ಮೂರು ಅಂತಸ್ತಿನ ಮನೆಗಳು ಕೂಡ ಸಂಪೂರ್ಣವಾಗಿ ಮುಳುಗಿದ್ದು, ಹಗ್ಗಗಳನ್ನು ಕಟ್ಟಿಕೊಂಡು ಜನರನ್ನು ರಕ್ಷಿಸುವ ಕಾರ್ಯಾಚರಣೆ ಮಾಡಲಾಗಿದೆ. ಇದುವರೆಗೂ 50 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ನೀರಿನ ರಭಸ ಹೆಚ್ಚಾಗುತ್ತಿದ್ದಂತೆ ಎಲ್ಲರನ್ನು ಕೂಡ ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಮಹಿಳೆಯರು, ಮಕ್ಕಳು ಮತ್ತು ಪ್ರಾಣಿಗಳಿಗೂ ಯಾವುದೇ ತೊಂದರೆಯಾಗಿಲ್ಲ.