ಬತ್ತಿದ ಲಕ್ಷ್ಮಣ ತೀರ್ಥ: ಕಾಫಿ ಬೆಳೆ ಬಿಟ್ಟು ಹೋಂ ಸ್ಟೇ ಆರಂಭಿಸಲು ಮುಂದಾದ ಜನ!

Public TV
2 Min Read

ಮಡಿಕೇರಿ: ಕಾವೇರಿ ತವರಲ್ಲೂ ಬರದ ಛಾಯೆ ಎದ್ದಿದೆ. ಕಾವೇರಿಯ ಒಡಲು ಬತ್ತುತ್ತಿದೆ. ಪ್ರಕೃತಿಯ ಮಡಿಲಲ್ಲಿ ನೀರಿಗೆ ಹಾಹಾಕಾರ. ಬೇಸಿಗೆಗೂ ಮುನ್ನ ತತ್ತರಿಸಿದ ಕಾವೇರಿ ತವರಿನ ಜನರು. ದಕ್ಷಿಣ ಕೊಡಗಿನ ಜೀವ ನದಿಯಾದ ಲಕ್ಷಣ ತೀರ್ಥ ನದಿಯು ಬತ್ತಿಹೋಗಿದ್ದು ನೇರೆ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

ಕಾವೇರಿ ತವರು ಪ್ರಾಕೃತಿಕ ಸೌಂದರ್ಯದ ನೆಲೆವೀಡು ಕೊಡಗು ಜಿಲ್ಲೆಯಲ್ಲಿ ಈಗ ಭೀಕರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಜೀವನಾಡಿ ಕಾವೇರಿ ಹಾಗು ಲಕ್ಷ್ಮಣ ತೀರ್ಥ ನದಿ ಬತ್ತಿದ್ದು, ಜಿಲ್ಲೆಯ ಪ್ರಮುಖ ಉದ್ಯಮವಾಗಿರುವ ಕಾಫಿ ಶೇ.30 ಭತ್ತ ಶೇ.50 ರಷ್ಟು ಕುಸಿತ ಕಂಡಿದ್ದು ಬೆಳೆಗಾರನ ಬದುಕು ದುಸ್ತರವಾಗಿದೆ.

ಈ ಬಾರಿ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಉದ್ಭವಿಸಿದ್ದು ಬೇಸಿಗೆಯಲ್ಲಿ ಮತ್ತಷ್ಟು ಭೀಕರವಾಗುವ ಸಾಧ್ಯತೆಗಳಿದೆ. ಕೊಡಗು ಜಿಲ್ಲೆ ಸತತವಾಗಿ ಎರಡು ವರ್ಷ ಬರಗಾಲವನ್ನು ಎದುರಿಸುತ್ತಿದೆ. ಜೀವನದಿ ಕಾವೇರಿ ಹರಿದು ಹೋಗುವ ವ್ಯಾಪ್ತಿಯಲ್ಲೂ ಬರದ ಛಾಯೆ ಉದ್ಭವಿಸಿದೆ. ಈಗ ಲಕ್ಷ್ಮಣ ತೀರ್ಥ ನದಿಯು ಇದೀಗ ಸಂಪೂರ್ಣವಾಗಿ ಬತ್ತಿಹೋಗಿದೆ.

ಕೊಡಗಿನ ಬಾಳೆಲೆ ಕುಟ್ಟ ಮಾಯಮುಡಿ ಹಾಗೂ ಪಕ್ಕದ ಜಿಲ್ಲೆಯದ ಮೈಸೂರು ಜಿಲ್ಲೆಯ ಹುಣಸೂರು ಗ್ರಾಮಗಳ ರೈತರು ಈ ಲಕ್ಷ್ಮಣ ತೀರ್ಥ ನದಿಯ ನೀರನ್ನೆ ಅವಲಂಬಿಸಿದ್ದು ಈಗ ಭಾರೀ ಕಷ್ಟವಾಗಿದೆ ಎಂದು ರೈತ ಬೋಪಯ್ಯ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಈ ಭಾಗದ ಜನ-ಜಾನುವಾರುಗಳು ಸಮಸ್ಯೆಯಿಂದ ನರಳುವುದು ಮಾತ್ರ ತಪ್ಪುವುದಿಲ್ಲ. ಹವಾಮಾನದ ವೈಪರೀತ್ಯದಿಂದಾಗಿ ಮಳೆಯೂ ಈ ವರ್ಷ ಕೈಕೊಟ್ಟಿದೆ. ಪರಿಣಾಮ ಲಕ್ಷ್ಮಣ ತೀರ್ಥ ನದಿ ಸೇರಿದಂತೆ, ಸಣ್ಣಪುಟ್ಟ ಹೊಳೆಗಳು, ಕೆರೆಗಳು ಈಗಾಗಲೇ ಬತ್ತಿ ಹೋಗಿದೆ.

ಗ್ರಾಮೀಣ ಭಾಗದಲ್ಲೂ ಸೇರಿದಂತೆ ನಗರ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ. ದುರಾದೃಷ್ಟಕರ ಸಂಗತಿ ಎಂದರೆ ಕಾಫಿ ಬೆಳೆ ಕೈಕೊಟ್ಟಿರುವ ಹಿನ್ನಲೆಯಲ್ಲಿ ಜಿಲ್ಲೆಯ ಕೆಲವು ಕಾಫಿ ಬೆಳೆಗಾರರು ಈಗ ಹೋಂಸ್ಟೇ ಆರಂಭಿಸಿದ್ದು, ಕೃಷಿಯನ್ನು ಮರೆತಿದ್ದಾರೆ. ಈ ಹಿನ್ನೆಲೆ ಹೋಂಸ್ಟೇ ಸಂಸ್ಕøತಿಗೆ ಕೊಡಗಿನ ಬಹುತೇಕ ಬೆಳೆಗಾರರು ಮಾರು ಹೋಗಿದ್ದಾರೆ. ಇದರಿಂದ ಪರಿಸರ ನಾಶ, ಅನಗತ್ಯ ಯೋಜನೆಗಳು ಜಿಲ್ಲೆಯ ಪರಿಸರವನ್ನು ಹಾಳು ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಹೈಟೆನ್ಷನ್ ಮಾರ್ಗ, ಅಕ್ರಮ ರೆಸಾರ್ಟ್ ತಲೆ ಎತ್ತಿರುವುದು, ಮರಳು ದಂಧೆ, ಮರ ಮಾಫಿಯಾ, ಅರಣ್ಯ ನಾಶದಿಂದ ಕೊಡಗಿನ ಪ್ರಾಕೃತಿಕ ಪರಿಸರವೇ ಬದಲಾಗಿದೆ. ಈ ಪರಿಣಾಮದಿಂದಾಗಿ ಜಿಲ್ಲೆಯಲ್ಲಿ ಬರದ ತಾಂಡವ ಹೆಚ್ಚಾಗಿದೆ. ಇವುಗಳಿಗೆ ತುರ್ತಾಗಿ ಕಡಿವಾಣ ಹಾಕಬೇಕಿದೆ ಎಂದು ಕೊಡಗು ಜಿಲ್ಲೆಯ ರೈತಸಂಘದ ಅಧ್ಯಕ್ಷ ಮನು ಸೋಮಯ್ಯ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *